ಕಣಿವೆ, ಜೂ. ೨೩: ಮಳೆ ಕೈಕೊಟ್ಟ ಪರಿಣಾಮ ಜೋಳದ ಬೆಳೆ ಬಾಡಿತ್ತು. ಒಣಗುತ್ತಿದ್ದ ಜೋಳದ ಬೆಳೆ ಕಂಡ ರೈತನ ಸ್ಥಿತಿಯೂ ಚಿಂತಾಜನಕವಾಗಿತ್ತು.

ಆದರೆ ಕಳೆದ ಎರಡು ದಿನಗಳ ಹಿಂದೆ ಒಂದಷ್ಟು ಸುರಿದ ಮಳೆ ಜೋಳದ ಬೆಳೆಗೆ ಸಂಜೀವಿನಿಯಾಗಿದೆ. ಅಂದರೆ ಬಿಸಿಲಿಗೆ ಬಾಡುತ್ತಿದ್ದ ಜೋಳದ ಬೆಳೆ ಒಂದೇ ದಿನಕ್ಕೆ ಇದೀಗ ಮರಳಿ ಹಸಿರಾಗುತ್ತಿದೆ.

ಹಾಗಾಗಿ ಸಂತಸಗೊAಡ ರೈತರು ತಿಂಗಳ ಹೊಸಿಲಿನಲ್ಲಿ ಇರುವ ಬೆಳೆಯುತ್ತಿರುವ ಜೋಳದ ಹೊಲಕ್ಕೆ ಕಳೆಯ ಗಿಡಗಳು ಬೆಳೆಯದಂತೆ ಎತ್ತುಗಳ ಸಹಾಯದಿಂದ ನೇಗಿಲು ಬಿಡುತ್ತಿದ್ದಾರೆ. ಈ ನೇಗಿಲು ಬಿಟ್ಟಾಗ ಅದರ ಮಣ್ಣು ಜೋಳದ ಇಬ್ಬದಿಯ ಸಾಲುಗಳಿಗೆ ಹರಡಿ ಜೋಳದ ಬುಡಕ್ಕೆ ಬೀಳುತ್ತಿದೆ.

ಇದು ಜೋಳದ ಬೆಳೆ ಮತ್ತಷ್ಟು ತಾಕತ್ತಾಗಿ ಮೇಲೇರಿ ಬೆಳೆಯಲು ಸಹಾಯಕವಾಗುತ್ತಿದೆ. ಇನ್ನೂ ಕೆಲವು ರೈತರು ರಸಾಯನಿಕ ಗೊಬ್ಬರವನ್ನು ಜೋಳದ ಬುಡಗಳಿಗೆ ಹಾಕಿ ಅದರ ಮೇಲೆ ನೇಗಿಲಿನಿಂದ ಮಣ್ಣು ಏರು ಹಾಕುತ್ತಿದ್ದಾರೆ. ಒಟ್ಟಾರೆ ಆಷಾಡದ ಆರಂಭದಲ್ಲಿ ಕೃಷಿಕರಿಗೆ ವರುಣ ಸಂತಸ ತಂದಿದ್ದಾನೆ. -ಕೆ.ಎಸ್.ಮೂರ್ತಿ