ಗೋಣಿಕೊಪ್ಪಲು, ಜೂ. ೨೩: ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಸಲುವಾಗಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯು ಪಂಚಾಯಿತಿ ಸದಸ್ಯರ, ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಸದಸ್ಯರ ಹಾಗೂ ಪೊಲೀಸ್ ಇಲಾಖೆಯ ಜಂಟಿ ಸಭೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯ ಬಾಲು ವಹಿಸಿಕೊಂಡಿದ್ದರು. ಗೋಣಿಕೊಪ್ಪಲು ಸಬ್ಇನ್ಸ್ಪೆಕ್ಟರ್ ದೀಕ್ಷಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಗೋಣಿಕೊಪ್ಪಲು ನಗರವನ್ನು ಸುಗಮ ಸಂಚಾರ ವ್ಯವಸ್ಥೆಯಲ್ಲಿ ತರಲು ಬೇಕಾದ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು. ಹಲವಾರು ಸಮಸ್ಯೆಗಳನ್ನು ಉದಾಹರಣೆ ಸಹಿತ ನೀಡಿದ ಅವರು ತಪ್ಪು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವುದು ನಮ್ಮ ಉದೇಶವಲ್ಲ. ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸುವ ಸಲುವಾಗಿ ನೀಡುವ ಎಚ್ಚರಿಕೆ ಎಂದರು.
ಸುಗಮ ಸಂಚಾರ ವ್ಯವಸ್ಥೆಯ ನಿಟ್ಟಿನಲ್ಲಿ ಹಲವಾರು ಸಂದರ್ಭದಲ್ಲಿ ಮೊಕ್ಕದ್ದಮೆ ದಾಖಲಿಸಬೇಕಾಗುತ್ತದೆ. ಇದು ಕೇವಲ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡುವ ಕ್ರಮವಾಗಿದೆ. ಗೋಣಿಕೊಪ್ಪಲು ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಫಲಕಗಳನ್ನು ಅಳವಡಿಸಬೇಕಿದೆ. ವಾಹನವನ್ನು ಸರಿಯಾಗಿ ನಿಲುಗಡೆ ಮಾಡುವ ಸಲುವಾಗಿ ರಸ್ತೆಯಲ್ಲಿ ನಿಲುಗಡೆಗಾಗಿ ಪೇಯಿಂಟ್ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು. ಅಧ್ಯಕ್ಷ ಸೌಮ್ಯ ಬಾಲು ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಾಲ್ಕು ಚಕ್ರಗಳ ವಾಹನಗಳು ನಿಲ್ಲುವ ಕಡೆಗಳಲ್ಲಿ ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳು ನಿಲುಗಡೆ ಮಾಡುತ್ತಿದ್ದು, ಅವುಗಳನ್ನು ನಿಯಂತ್ರಿಸಬೇಕಿದೆ. ಅಲ್ಲದೆ ಅಲ್ಲಲ್ಲಿ ವಾಹನಗಳಲ್ಲಿ ವಸ್ತುಗಳನ್ನು ತುಂಬಿಕೊAಡು ಪಾರ್ಕಿಂಗ್ ಸ್ಥಳದಲ್ಲಿ ಇಡೀ ದಿನ ನಿಲ್ಲಿಸಿ ವ್ಯಾಪಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದರು.
ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಸುನಿಲ್ ಮಾದಪ್ಪ ಮಾತನಾಡಿ, ಸುಗಮ ಸಂಚಾರ ವ್ಯವಸ್ಥೆಗೆ ಚೇಂಬರ್ ಆಫ್ ಕಾಮರ್ಸ್ನಿಂದ ಎಲ್ಲಾ ರೀತಿಯ ಸಹಕಾರಗಳನ್ನು ನೀಡುವುದಾಗಿ ಸಂಚಾರ ನಿಯಂತ್ರಣಕ್ಕೆ ಬೇಕಾದ ಫಲಕ ಗಳನ್ನು ಉದ್ಯಮಿ ಗಳಿಂದ ಪ್ರಾಯೋಜಿಸ ಲಾಗುವುದು ಎಂದರು. ಚೇಂಬರ್ ಆಫ್ ಕಾಮರ್ಸ್ನ ಜಿಲ್ಲಾ ಉಪಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಮುಖ್ಯ ರಸ್ತೆಯಿಂದ ಬೈಪಾಸ್ ರಸ್ತೆಗೆ ಮತ್ತು ಪೊನ್ನಂಪೇಟೆ ರಸ್ತೆಯಿಂದ ಮೈಸೂರು ರಸ್ತೆಗೆ ಎರಡು ಸೇತುವೆಗಳನ್ನು ನಿರ್ಮಿಸುವ ಮೂಲಕ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಕ್ಕೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದಲ್ಲಿ ಮುಖ್ಯ ರಸ್ತೆಯಲ್ಲಿ ಉಂಟಾಗುವ ಸಂಚಾರ ಸಮಸ್ಯೆಯನ್ನು ಪರಿಹರಿಸಬಹುದು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಜಿಲ್ಲಾ ಪಂಚಾಯಿತಿ ಮತ್ತು ಸರಕಾರದೊಂದಿಗೆ ವ್ಯವಹರಿಸಿ ಎರಡು ಸೇತುವೆಗಳನ್ನು ನಿರ್ಮಿಸುವ ಕುರಿತು ಕ್ರಮವಹಿಸಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಪಾರ್ಕಿಂಗ್ ವ್ಯವಸ್ಥೆಯಲ್ಲಿ ರಸ್ತೆಗೆ ಬಣ್ಣ ಬಳಿಯುವ ಮೂಲಕ ಸರಿಯಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಅಲ್ಲದೆ ಗೋಣಿಕೊಪ್ಪಲು ನಗರಕ್ಕೆ ಸುತ್ತು ಮುತ್ತಲ ಗ್ರಾಮಗಳಿಂದ ತ್ಯಾಜ್ಯ ವಸ್ತುವನ್ನು ತಂದು ಸುರಿಯಲಾಗುತ್ತದೆ ಅದರ ಬಗ್ಗೆ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಪ್ರಕರಣ ದಾಖಲಿಸುವ ಮೂಲಕ ನಿಯಂತ್ರಿಸಬೇಕಿದೆ ಎಂದರು.
ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಪ್ರಭಾಕರ್ ನೆಲ್ಲಿತಾಯ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಶರತ್ ಕಾಂತ್ ಮಾತನಾಡಿದರು.
ಉಪಸ್ಥಿತರಿದ್ದವರ ಸಲಹೆಗಳನ್ನು ಆಲಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೀಕ್ಷಿತ್ ಸುಮಾರು ೩೧ ಸಲಹೆಗಳನ್ನು ಪಟ್ಟಿ ಮಾಡಿದ್ದು ಇವೆಲ್ಲವನ್ನು ಅಳವಡಿಸುವ ಮೂಲಕ ಗೋಣಿಕೊಪ್ಪಲು ನಗರವನ್ನು ಸುಗಮ ಸಂಚಾರ ಅಥವಾ ಸಮಸ್ಯೆ ಮುಕ್ತ ಸಂಚಾರ ಮಾಡುವ ಕಾರ್ಯವನ್ನು ಪ್ರಾರಂಭಿಸುವುದಾಗಿ ತಾವು ಎಲ್ಲಿಯೂ ಏಕಪಕ್ಷಿಯ ತೀರ್ಮಾನ ತೆಗೆದುಕೊಳ್ಳದೆ ಎಲ್ಲರ ಅಭಿಪ್ರಾಯ ತೆಗೆದುಕೊಂಡು ಕಾರ್ಯನಿರ್ವಹಿಸುವುದಾಗಿಯೂ ಭರವಸೆ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಚೈತ್ರ ಚೇತನ್, ಮಾಜಿ ಅಧ್ಯಕ್ಷ ಕೆ. ರಾಜೇಶ್, ರಾಮಕೃಷ್ಣ, ಹಕೀಂ, ಸುಲೇಖ, ಸಪೂರ, ಅಫ್ಸಲ್, ರತಿ ಅಚ್ಚಪ್ಪ, ಮಂಜುಳಾ, ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಕೋಶಾಧಿಕಾರಿ ಮನೋಹರ್, ನಿರ್ದೇಶಕ ಪಿ.ಜಿ. ರಾಜಶೇಖರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವಿ. ಶ್ರೀನಿವಾಸ್, ಕಾರ್ಯದರ್ಶಿ ಗುರುಶ್ರೀ ಉಪಸ್ಥಿತರಿದ್ದರು.