ಸಿದ್ದಾಪುರ, ಜೂ. ೨೩: ಕೊಡಗು ಜಿಲ್ಲೆಗೆ ಗುಣಮಟ್ಟದ ವಿದ್ಯುತ್ ನೀಡಲು ಇಲಾಖೆಯು ವಿಫಲ ವಾಗಿದ್ದು. ಇದೀಗ ಸರ್ಕಾರ ವಿದ್ಯುತ್ ದರವನ್ನು ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ದರ ಏರಿಕೆಯ ವಿರುದ್ಧ ಜಿಲ್ಲೆಯಾದ್ಯಂತ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲೆ ಅಮ್ಮತ್ತಿ ಹೋಬಳಿ ಘಟಕ ಸಿದ್ದಾಪುರ ಶಾಖೆಯ ವತಿಯಿಂದ ಸಿದ್ದಾಪುರ ಸ್ವರ್ಣಮಾಲ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ೨೦೨೨-೨೩ನೇ ಸಾಲಿನ ಹೋಬಳಿ ಸಭೆ ಮತ್ತು ಮಹಾಸಭೆಯಲ್ಲಿ ಮಾತನಾಡಿದರು.

ರೈತರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು, ಪ್ರಶ್ನೆ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಕೊಡಗು ಜಿಲ್ಲೆಯಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಕಾಡಾನೆ - ಮಾನವ ಸಂಘರ್ಷಕ್ಕೆ ಅರಣ್ಯ ಇಲಾಖೆ ಕಿಂಚಿತ್ತು ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಮಳೆಗಾಲದಲ್ಲಿ ವಿದ್ಯುತ್ ತಂತಿ ಕಡಿತಗೊಂಡಲ್ಲಿ ಎರಡು ಮೂರು ದಿನ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತದೆ. ಗುಣಮಟ್ಟದ ವಿದ್ಯುತ್ ಪೂರೈಕೆಯಲ್ಲಿ ಇಲಾಖೆಯು ವಿಫಲತೆಯನ್ನು ಕಂಡಿದೆ. ಇದೀಗ ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಿದೆ. ದರ ಏರಿಕೆಯಿಂದಾಗಿ ರೈತರು ಮತ್ತು ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿದ್ಯುತ್ ದರ ಏರಿಕೆಯ ವಿರುದ್ಧ ಜಿಲ್ಲೆಯಾದ್ಯಂತ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಮ್ಮತ್ತಿ ಹೋಬಳಿಯ ಅಧ್ಯಕ್ಷ ಮಂಡೇಪAಡ ಪ್ರವೀಣ್ ಬೋಪಯ್ಯ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರಿಗೆ ೧೦ ಹೆಚ್‌ಪಿವರೆಗಿನ ವಿದ್ಯುತ್ ಪೂರೈಕೆ ಉಚಿತವಾಗಿ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಅದರೇ ಹೇಳಿರುವ ಭರವಸೆ ಈಡೇರಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರೈತರ ಸಮಸ್ಯೆಗಳಿಗೆ ಹಂತ ಹಂತವಾಗಿ ಹೋರಾಟ ಮಾಡಲು ನಿದÃðರಿಸಿದೆ ಎಂದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ, ಬೃಹತ್ ಪ್ರಮಾಣದಲ್ಲಿ ಹೊಂದಿರುವ ಕಾಫಿ ತೋಟದ ಮಾಲೀಕರ ಮತ್ತು ಕಂಪನಿಯ ಪರವಾಗಿ ರಾಜ್ಯ ಸರ್ಕಾರವಿದೆ. ರಾಜ್ಯ ಸರ್ಕಾರವು ಹಲವು ಯೋಜನೆ ಇವರ ಪಾಲಾಗುತ್ತಿದೆ. ಜಿಲ್ಲೆಯಲ್ಲಿ ಹೊರ ರಾಜ್ಯದ ಕೆಲವು ಪ್ರಭಾವಿ ವ್ಯಕ್ತಿಗಳು ಕಾಫಿ ತೋಟಗಳನ್ನು ಖರೀದಿಸಿ ಭೂಪರಿವರ್ತನೆ ಮಾಡುತ್ತಿದ್ದು, ಇದು ಪರಿಸರಕ್ಕೆ ಮಾರಕವಾಗಿದೆ. ಇದರ ವಿರುದ್ಧ ರೈತ ಸಂಘ ಮುಂದಿನಗಳಲ್ಲಿ ಡಿ.ಸಿ. ಕಚೇರಿಯ ಮುಂದೆ ಪ್ರತಿಭಟನೆ ನಡೆಸ ಲಾಗುವುದು. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸದ್ಯದಲ್ಲೇ ಮುಖ್ಯಮಂತ್ರಿಯ ಬಳಿ ನಿಯೋಗ ತೆರಳುವುದಾಗಿ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾನೂನು ಸಲಹೆಗಾರ ಕೆ.ಬಿ. ಹೇಮಚಂದ್ರ ಅವರು ಮಾತನಾಡಿ, ಕೊಡಗಿನ ರೈತರು ಹಲವಾರು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತಿದ್ದಾರೆ. ರಾಜ್ಯ ಸರ್ಕಾರವು ೨೦೦ ಯೂನಿಟ್‌ವರೆಗಿನ ವಿದ್ಯುತ್ ಬಳಕೆ ಉಚಿತ ಎಂದು ಘೋಷಣೆ ಮಾಡಿದ ರೀತಿಯಲ್ಲಿ ರೈತರಿಗೂ ೫೦೦ ಯೂನಿಟ್‌ವರೆಗಿನ ವಿದ್ಯುತ್ ಉಚಿತವಾಗಿ ನೀಡ ಬೇಕೆಂದು ಒತ್ತಾಯ ಮಾಡಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕೋಶಾಧಿಕಾರಿ ಸಭೀತಾ ಭೀಮಯ್ಯ, ಸಿದ್ದಾಪುರ ಶಾಖೆಯ ಅಧ್ಯಕ್ಷ ದೇವಣೀರ ಬೋಪಣ್ಣ, ಕಾರ್ಯದರ್ಶಿ ಕುಕ್ಕುನೂರು ಲಿಖಿತ್ ಸೋಮಣ್ಣ, ಹೋಬಳಿ ಕೋಶಾಧಿಕಾರಿ ಎಂ.ವಿ. ಸಜೀವನ್, ಅಮ್ಮತ್ತಿ ಹೋಬಳಿ ಸಂಚಾಲಕ ಸಿ.ಬಿ. ಪೂಣಚ್ಚ ಉಪಸ್ಥಿತಿತರಿದ್ದರು.

ಮಂಡೇಪAಡ ಪ್ರವೀಣ್ ಬೋಪಯ್ಯ ಸ್ವಾಗತಿಸಿ, ಲಿಖಿತ್ ಸೋಮಣ್ಣ ನಿರೂಪಿಸಿ, ಸಿ.ಬಿ. ಪೂಣಚ್ಚ ವಂದಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಅಮ್ಮತ್ತಿ ಹೋಬಳಿ ಸಿದ್ದಾಪುರ ಘಟಕದ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಭಾಗಗಳಿಂದ ಆಗಮಿಸಿದ ರೈತ ಸಂಘದ ಸದಸ್ಯರು ಹಾಜರಿದ್ದರು.