ಮಡಿಕೇರಿ, ಜೂ. ೨೧: ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆಯಲ್ಲಿ ಈ ವೇಳೆಗೆ ಕೃಷಿ ಕೆಲಸ ಕಾರ್ಯಗಳು ಆರಂಭಗೊಳ್ಳಬೇಕಿತ್ತಾದರೂ ಪ್ರಸಕ್ತ ವರ್ಷ ವಿಳಂಬವಾಗುತ್ತಿದೆ. ಬಹುತೇಕ ಜೂನ್ ತಿಂಗಳ ಕೊನೆಯ ವಾರ ಎದುರಾಗಿದ್ದರೂ ಜಿಲ್ಲೆಯಲ್ಲಿ ಇನ್ನೂ ವಾಡಿಕೆಯಂತೆ ಮುಂಗಾರು ಮಳೆ ಕಂಡು ಬಾರದೆ ಕೃಷಿ ಸಂಬAಧಿತ ಕೆಲಸಗಳಿಗೆ ಅಡಚಣೆಯಾಗುತ್ತಿದೆ. ವಾಡಿಕೆಯಂತೆ ಈ ವೇಳೆಗೆ ಜಿಲ್ಲೆಯಲ್ಲಿ ಮುಂಗಾರು ಮಳೆ ರಭಸಗೊಳ್ಳುತ್ತಿತ್ತು. ಆದರೆ ಪ್ರಸಕ್ತ ವರ್ಷ ಮಳೆ ಕ್ಷೀಣಗೊಂಡಿದೆ. ಆಗಾಗ್ಗೆ ಮೋಡದ ವಾತಾವರಣದೊಂದಿಗೆ ಮಳೆಯ ಸಿಂಚನವಾಗುತ್ತಿದ್ದರೂ ಕೆಲವೇ ಕ್ಷಣದಲ್ಲಿ ಮತ್ತೆ ಬಿಸಿಲಿನ ಸನ್ನಿವೇಶ ಎದುರಾಗುತ್ತಿದೆ.
ಬಹುತೇಕ ಕೆರೆ, ತೋಡು, ನದಿಗಳಲ್ಲೂ ಬೇಸಿಗೆಯಲ್ಲಿ ನೀರಿನಮಟ್ಟ ಕಡಿಮೆಯಾಗಿದ್ದು, ಇದು ಹಾಗೆಯೇ ಮುಂದುವರಿದಿದೆ. ಮಳೆಯ ಕೊರತೆಯಿಂದಾಗಿ ಕಾಫಿ ತೋಟಗಳಿಗೆ ಗೊಬ್ಬರ ಹಾಕುವ ಕೆಲಸವೂ ವಿಳಂಬವಾಗಿದೆ. ಗೊಬ್ಬರ ಸಂಗ್ರಹಿಸಿಟ್ಟಿರುವ ಬೆಳೆಗಾರರು ಅಗತ್ಯ ಮಳೆಗಾಗಿ ಕಾಯುತ್ತಿದ್ದಾರೆ. ಇದು ತೋಟಗಳ ನಿರ್ವಹಣೆಯ ಸಮಸ್ಯೆಯಾದರೆ, ಭತ್ತದ ಕೃಷಿಗೆ ಸಂಬAಧಿಸಿದAತೆ ಈಗಾಗಲೇ ಸಸಿಮಡಿಗಳಿಗೆ ಬಿತ್ತನೆ ಕಾರ್ಯದ ಸಿದ್ಧತೆ ಮಾತ್ರವಲ್ಲದೆ ಹಲವರು ಬಿತ್ತನೆ ಕೆಲಸವನ್ನೂ ಪೂರೈಸಿಕೊಂಡಿರುತ್ತಿದ್ದರು. ಆದರೆ ಈಗಿನ ಸನ್ನಿವೇಶದಿಂದಾಗಿ ಎಲ್ಲಾ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು, ಮಳೆಗಾಗಿ ರೈತಾಪಿ ವರ್ಗ ಕಾಯುವಂತಾಗಿದೆ.
ಮಳೆಯ ಕೊರತೆಯಿಂದಾಗಿ ಜಿಲ್ಲೆಯ ವಿವಿಧೆಡೆ ಕಂಡುಬರುತ್ತಿರುವ ಚಿತ್ರಣವನ್ನು ಇಲ್ಲಿ ನೀಡಲಾಗಿದೆ.
ಕೃಷಿ ಇಲಾಖೆ ಸಿದ್ಧತೆ
ಪ್ರಸ್ತುತ ಜಿಲ್ಲೆಯಲ್ಲಿ ಅಂದಾಜು ೩೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. ಕಳೆದ ಸಾಲಿನಲ್ಲೂ ಇಷ್ಟು ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ಇದರಲ್ಲಿ ಶೇ. ೮೦ ರಷ್ಟು ಸಾಧನೆಯಾಗಿತ್ತು. ಈ ವರ್ಷವೂ ಇಷ್ಟೇ ಗುರಿ ಹೊಂದಿರುವುದಾಗಿ ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ. ಶೇಕ್ ಅವರು ತಿಳಿಸಿದ್ದಾರೆ. ಆದರೆ ಮಳೆ ವಿಳಂಬವಾಗುತ್ತಿರುವುದು ಈಗಿನ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿಯ ಭತ್ತದ ತಳಿಯನ್ನು ಬೆಳೆಯಲಾಗುತ್ತಿದೆ. ತುಂಗ, ಅತಿರ, ಐ.ಆರ್. ೬೪ ಸೇರಿದಂತೆ ಆಂತರಿಕ ತಳಿಯಾದ ಬಿಕೆಬಿ ಮತ್ತಿತರ ತಳಿಯ ಭತ್ತವನ್ನು ರೈತರು ಬೆಳೆಯುತ್ತಾರೆ.
ಜಿಲ್ಲೆಯಲ್ಲಿ ಒಟ್ಟು ೧೪ ರೈತ ಸಂಪರ್ಕ ಕೇಂದ್ರಗಳಿದ್ದು, ಇಲ್ಲಿ ಈಗಾಗಲೇ ಎರಡು ಸಾವಿರ ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದೆ ಎಂದು ಶಬನಾ ಅವರು ತಿಳಿಸಿದ್ದಾರೆ. ಅಗತ್ಯ ಪ್ರಮಾಣದ ಗೊಬ್ಬರದ ಸಂಗ್ರಹವೂ ಇರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಮಳೆಯ ವಿಳಂಬದಿAದಾಗಿ ನಿರೀಕ್ಷಿತ ಮಟ್ಟದಲ್ಲಿ ರೈತರು ಬಿತ್ತನೆ ಬೀಜವನ್ನಾಗಲಿ, ಗೊಬ್ಬರವನ್ನಾಗಲಿ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ.
ಉಳುಮೆ ಮಾಡಿ ಮಳೆಗೆ ಕಾಯುತ್ತಿರುವ ರೈತರು
ಸೋಮವಾರಪೇಟೆ: ವಾಡಿಕೆಯಂತೆ ಬೀಳಬೇಕಿದ್ದ ಮುಂಗಾರು ಮಳೆ ಈ ವರ್ಷ ಕೈಕೊಟ್ಟಿದ್ದು, ಕೃಷಿಕ ವರ್ಗದಲ್ಲಿ ಆತಂಕದ ಕಾರ್ಮೋಡವನ್ನು ಉಂಟುಮಾಡಿದೆ. ಪ್ರತಿದಿನ ದಟ್ಟ ಮೋಡಗಳು ಕಂಡುಬAದರೂ ಮಳೆ ಮಾತ್ರ ಬೀಳದ ಹಿನ್ನೆಲೆ, ಕೃಷಿ ಕಾರ್ಯಗಳು ಸ್ಥಗಿತಗೊಂಡಿವೆ.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಹೆಚ್ಚು ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಬಹಳಷ್ಟು ಕಡೆಗಳಲ್ಲಿ ಗದ್ದೆಗಳನ್ನು ಉಳುಮೆ ಮಾಡಿ ಮಳೆಗಾಗಿ ಕಾಯುವಂತಾಗಿದೆ. ಜೂನ್ ಮೊದಲ ವಾರದಲ್ಲಿಯೇ ಮಳೆಯಾಗಲಿದೆ ಎಂಬ ಮಾಹಿತಿಯನ್ವಯ ಬಹುತೇಕ ರೈತರು ತಮ್ಮ ಗದ್ದೆಗಳನ್ನು ಉಳುಮೆ ಮಾಡಿದ್ದರು.
ಆದರೆ ಜೂನ್ ಮೂರನೇ ವಾರದಲ್ಲೂ ಮಳೆಯಾಗದಿರುವ ಹಿನ್ನೆಲೆ, ಕೃಷಿ ಕಾರ್ಯಗಳು ವಿಳಂಬವಾಗುವ ಸನ್ನಿವೇಶ ನಿರ್ಮಾಣವಾಗಿದೆ. ತಾಲೂಕಿನ ಶಾಂತಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ, ತಾಕೇರಿ, ಕಿರಗಂದೂರು, ಶನಿವಾರಸಂತೆ, ಗೌಡಳ್ಳಿ, ಕೊಡ್ಲಿಪೇಟೆ, ಗಣಗೂರು
(ಮೊದಲ ಪುಟದಿಂದ) ಭಾಗದಲ್ಲಿ ಬಹುತೇಕ ಕೃಷಿಕರು ತಮ್ಮ ಗದ್ದೆಗಳನ್ನು ಉಳುಮೆ ಮಾಡಿದ್ದಾರೆ.
ಮಳೆಯನ್ನು ನಂಬಿ ಭತ್ತದ ಸಸಿಮಡಿಗಳನ್ನು ತಯಾರು ಮಾಡಿದ್ದ ರೈತರು ಇದೀಗ ನೀರಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ. ಕೆಲವರು ಗದ್ದೆಯ ಸನಿಹದಲ್ಲಿರುವ ಜಲಮೂಲಗಳಿಂದ ಸಸಿಮಡಿಗೆ ನೀರು ಹಾಯಿಸುತ್ತಿದ್ದರೆ, ಮಳೆಯನ್ನೇ ನಂಬಿದ್ದ ರೈತರು ಹೊಸದಾಗಿ ಸಸಿಮಡಿ ತಯಾರಿಗೆ ಆಗಸದತ್ತ ದೃಷ್ಟಿ ನೆಟ್ಟಿದ್ದಾರೆ.
ಇನ್ನು ಕಾಫಿ ತೋಟಗಳಲ್ಲಿಯೂ ಕೆಲಸ ಮಾಡಲು ಮಳೆಯ ಅವಕೃಪೆ ಇದೆ. ಕಾಫಿ ಗಿಡಗಳಿಗೆ ಗೊಬ್ಬರ ಹಾಕುವ ಸಮಯವಾಗಿದ್ದರೂ ಮಳೆ ಬಾರದಿರುವುದರಿಂದ ಬಹಳಷ್ಟು ರೈತರು ಗೊಬ್ಬರವನ್ನು ಗೋದಾಮು, ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ.
ಮಳೆಯನ್ನು ನಂಬಿ ಕಾಫಿ ಗಿಡದ ಬುಡಗಳನ್ನು ಬಿಡಿಸಿಟ್ಟಿದ್ದ ಬೆಳೆಗಾರರು, ಕಳೆದ ವಾರ ಮತ್ತೆ ತರಗೆಲೆಗಳನ್ನು ಮುಚ್ಚಿದ್ದಾರೆ. ಬಿಸಿಲಿನ ಬೇಗೆ ಹೆಚ್ಚಾದರೆ ಮಣ್ಣಿನಲ್ಲಿನ ತೇವಾಂಶ ಇಂಗಿ ಕಾಫಿ ಗಿಡಗಳು ಒಣಗಬಹುದೆಂಬ ಕಾರಣದಿಂದ ತರಗೆಲೆಗಳನ್ನು ಗಿಡಗಳ ಬುಡಕ್ಕೆ ಮುಚ್ಚಿದ್ದಾರೆ. ಬೋರ್‌ವೆಲ್, ಕೆರೆ ಸೇರಿದಂತೆ ಇನ್ನಿತರ ಜಲಮೂಲಗಳ ಸೌಕರ್ಯ ಹೊಂದಿರುವ ಬೆಳೆಗಾರರು ತಮ್ಮ ಗದ್ದೆ ಹಾಗೂ ತೋಟಗಳಿಗೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಿದ್ದಾರೆ.
ಮಳೆ ದೂರವಾದರೆ ಈ ವರ್ಷದ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಮೊದಲೇ ಸಂಕಷ್ಟದಲ್ಲಿರುವ ಬೆಳೆಗಾರರು ಇನ್ನಷ್ಟು ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ತಾಕೇರಿ ಗ್ರಾಮದ ಕೃಷಿಕ ಎಂ.ಸಿ. ಮುದ್ದಪ್ಪ ಅಭಿಪ್ರಾಯಿಸಿದ್ದಾರೆ.
-ವಿಜಯ್ ಹಾನಗಲ್ ಸುಂಟಿಕೊಪ್ಪ: ಜೂನ್ ತಿಂಗಳಿನಲ್ಲಿ ಮೃಗಶಿರ ಮಳೆ ಬೆಳೆಗಾರರ ರೈತರ ಚಟುವಟಿಕೆಗಳಿಗೆ ಆಶಾದಾಯಕವಾಗಿರುತ್ತದೆ. ಆದರೆ ಈ ವರ್ಷ ಮಳೆ ಕರಿಮೆಣಸಿನ ಫಸಲಿಗೆ ಹೊಡೆತ ಬಿದ್ದಿದೆ. ಭತ್ತದ ಬಿತ್ತನೆಗಾಗಿ ಗದ್ದೆ ಹದ ಮಾಡಿದ ರೈತ ಮಳೆಗಾಗಿ ಆಕಾಶದತ್ತ ನೋಡುವಂತಾಗಿದೆ.
ಬಿಸಿಲು ಮಿಶ್ರಿತ ಮೋಡ ಇಣುಕುತ್ತಿದ್ದರೂ ಜೂನ್ ತಿಂಗಳಿನಲ್ಲಿ ಸರಿಯಾಗಿ ಮಳೆ ಬಾರದೆ ಕರಿಮೆಣಸಿನ ಕೊತ್ತು ಬಿಡುವ ಸಕಾಲ ಮಳೆ ಮಾಯವಾಗಿದೆ. ಮುಂದಿನ ವರ್ಷದ ಕರಿಮೆಣಸು ಇಳುವರಿಗೆ ಭಾರೀ ಹಿನ್ನಡೆಯಾಗಲಿದೆ. ಬಿಸಿಲಿನಿಂದ ಕಾಫಿ ವರ‍್ರಿ ಬೋರಲ್ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಕಾಫಿ ಗಿಡಕ್ಕೂ ಜೂನ್ ತಿಂಗಳ ಮಳೆ ಅನಿವಾರ್ಯವಾಗಿದ್ದು, ಬೆಳೆಗಾರರು ವರುಣನ ಕೃಪೆಗಾಗಿ ಕಾದು ಕುಳಿತಿದ್ದಾರೆ.
ಭತ್ತದ ಕೃಷಿ ಚಟುವಟಿಕೆಗೆ ರೈತರು ಗದ್ದೆಯನ್ನು ಹದಮಾಡಿ ಇಟ್ಟಿದ್ದು, ಬಿತ್ತನೆ ಬೀಜ ಖರೀದಿಸಿ ಶೇಖರಿಸಿಟ್ಟಿದ್ದು, ಮಳೆ ಬಾರದೆ ಕಂಗಾಲಾಗಿದ್ದಾರೆ. ಸಾಧಾರಣವಾಗಿ ಜೂನ್ ತಿಂಗಳಿನಲ್ಲಿ ಭತ್ತದ ಬಿತ್ತನೆ ಕಾರ್ಯ ರೈತರು ಆರಂಭಿಸುತ್ತಾರೆ. ಹೈಬ್ರೀಡ್ ತಳಿಯನ್ನು ಜುಲೈ ತಿಂಗಳಿನಲ್ಲಿ ರೈತರು ಗದ್ದೆಯನ್ನು ಉಳುವೆ ಮಾಡಿ ಹದವಾಗಿಸಿಕೊಂಡು ಭತ್ತದ ಬೀಜ ಬಿತ್ತನೆ ಮಾಡುತ್ತಾರೆ. ಈ ವರ್ಷ ಜೂನ್ ೨೦ ಕಳೆದರೂ ಕೊಡಗಿನಲ್ಲಿ ಮಳೆ ಸರಿಯಾಗಿ ಬಾರದೆ ಕೃಷಿಕರ ಮೊಗದಲ್ಲಿ ಆತಂಕದ ಛಾಯೆ ಮನೆ ಮಾಡಿದೆ.
ಕಾಫಿ, ಕರಿಮೆಣಸಿನಿಂದ ಜೀವನದ ಬಂಡಿ ಸರಿದೂಗಿಸುತ್ತಿರುವ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ಮಳೆ ಕೈಕೊಟ್ಟರೆ, ಸರಿಯಾಗಿ ಇಳುವರಿ ಬರದಿದ್ದರೆ ಬ್ಯಾಂಕ್ ಸಾಲ ಹೇಗೆ ಕಟ್ಟುವುದು? ವಿದ್ಯಾರ್ಥಿಗಳ ಶಾಲೆ ಕಾಲೇಜಿನ ಶುಲ್ಕ ಹೇಗೆ ಪಾವತಿಸುವುದು? ಗೊಬ್ಬರ ಖರೀದಿಸುವುದು ಎಲ್ಲಿಂದ? ಕೂಲಿ ಕಾರ್ಮಿಕರಿಗೆ ಸಂಬಳ ನೀಡುವುದು ಕಷ್ಟವಾಗಲಿದೆ. ಮನೆ ದಿನ ನಿತ್ಯದ ಖರ್ಚು ನಿಭಾಯಿಸುವುದು ಕಷ್ಟವಾಗಬಹುದೆಂದು ಅನ್ನದಾತ ರೈತರ ಕೊರಗಾಗಿದೆ.
೨೦೧೮ರ ಮೇಘಾ ಸ್ಪೋಟದ ಅತಿವೃಷ್ಟಿಯಿಂದ ಹಳದಿ ರೋಗ ಕೊಳೆರೋಗದಿಂದ ನಶಿಸುತ್ತಿದೆ. ಇದಕ್ಕೆ ಮಣ್ಣಿನ ಫಲವತ್ತತೆ ಕಡಿಮೆಯಾಗಿರುವುದೇ ಕಾರಣವಾಗಿದೆ. ವಿಜ್ಞಾನಿಗಳು ಏನೇ ಪರಿಹಾರ ಸೂಚಿಸಿದರೂ ಕರಿಮೆಣಸಿನ ಬಳ್ಳಿಗೆ ಬರುವ ರೋಗ ತಡೆಯಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಜೂನ್‌ನಲ್ಲಿ ಮಳೆ ಬಾರದೆ ಇರುವುದರಿಂದ ಕರಿಮೆಣಸು ಗಿಡಕ್ಕೆ ಸಿಗಬೇಕಾದ ಪೌಷ್ಟಿಕತೆ ಕಡಿಮೆಯಾಗಲಿದ್ದು, ಇಳುವರಿ ತೀರಾ ಕುಂಠಿತವಾಗಲಿದೆ ಎಂದು ಬೆಳೆಗಾರರಾದ ಟಿ.ಪಿ.ಸಂದೇಶ ಹೇಳುತ್ತಾರೆ.
ಜೂನ್‌ನಲ್ಲಿ ಮಳೆ ಬಂದರೆ ಭತ್ತ ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗಲಿದೆ. ಗದ್ದೆ ಉಳುಮೆ ಮಾಡಿ ಹದಮಾಡಿ ಇಟ್ಟಿದ್ದೇವೆ. ಬೀಜ ಶೇಖರಿಸಿದ್ದರೂ ಮಳೆ ಬಾರದೆ ಬೀಜ ಬಿತ್ತನೆ ಕಾರ್ಯ ಮಾಡಲಾಗಿದೆ ಅಸಹಾಯಕರಾಗಿದ್ದೇವೆ ಎಂದು ಹರದೂರು ಗ್ರಾಮದ ಅಮೆಮನೆ ಸುಬ್ಬಯ್ಯ ಅಭಿಪ್ರಾಯಿಸಿದ್ದಾರೆ.
-ರಾಜುರೈ
ಗೋಣಿಕೊಪ್ಪಲು: ಜೂನ್ ತಿಂಗಳ ಮೂರನೇ ವಾರ ಕಳೆದರೂ ಮುಂಗಾರು ಇನ್ನೂ ಕೂಡ ರಾಜ್ಯವನ್ನು ಪ್ರವೇಶಿಸಿಲ್ಲ. ವಿಶೇಷವಾಗಿ ಕೊಡಗಿನಲ್ಲಿ ನದಿ ತೊರೆಗಳು ಬತ್ತಿ ಹೋಗಲಾರಂಭಿಸಿವೆ. ನಗರ ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಹವಾಮಾನ ಇಲಾಖೆಯು ಸದ್ಯದ ಮಟ್ಟಿಗೆ ಮಳೆಯ ಮುನ್ಸೂಚನೆಯನ್ನು ಇನ್ನೂ ನೀಡಿಲ್ಲ.
ಇದರಿಂದಾಗಿ ವಾಡಿಕೆಯಂತೆ ಜೂನ್ ತಿಂಗಳಿನಲ್ಲಿ ನಡೆಯುವ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ. ರೈತರು ಭತ್ತದ ಕೃಷಿಗೆ ಬೇಕಾದ ಬಿತ್ತನೆ ಬೀಜವನ್ನು ತಮ್ಮ ಗದ್ದೆಯಲ್ಲಿ ಬಿತ್ತಿದ್ದಾರೆ. ಆದರೆ ಮುಂಗಾರು ಬೀಳದೆ ಇರುವುದರಿಂದ ಭತ್ತದ ಗದ್ದೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಇನ್ನು ಮೊಳಕೆ ಒಡೆದಿಲ್ಲ. ಹಲವು ಕಡೆ ಮೊಳಕೆ ಒಡೆದಿದ್ದರೂ, ಮಳೆ ಇಲ್ಲದೆ ಒಣಗುತ್ತಿವೆ. ಮಳೆಯ ಬರುವಿಕೆಗಾಗಿ ರೈತರು ಎದುರು ನೋಡುತ್ತಿದ್ದಾರೆ.
ಭತ್ತದ ಗದ್ದೆಗಳಲ್ಲಿ ಬಿತ್ತಿರುವ ಬೀಜಗಳು ಈಗಾಗಲೇ ಪಾರಿವಾಳಗಳು ಸೇರಿದಂತೆ ಇತರ ಪಕ್ಷಿಗಳಿಗೆ ಆಹಾರವಾಗುತ್ತಿವೆ. ಸಾವಿರಾರು ಬೆಲೆ ತೆತ್ತು ಖರೀದಿ ಮಾಡಿದ ಭತ್ತದ ಬೀಜಗಳನ್ನು ರೈತರು ಬಿತ್ತಿದರಾದರೂ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತೊಂದರೆಯೊAದಿಗೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ದ.ಕೊಡಗಿನ ಬಹುತೇಕ ಭತ್ತ ಬೆಳೆಯುವ ರೈತರು ಕಂಗಾಲಾಗಿದ್ದಾರೆ.
ಕಳೆದ ೪೫ ವರ್ಷಗಳಿಂದ ಭತ್ತದ ಕೃಷಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿರುವ ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು, ಹುದೂರು ಗ್ರಾಮದ ಪ್ರಗತಿಪರ ರೈತರಾದ ಬಿ.ಪಿ.ರವಿಶಂಕರ್‌ರವರು ತಮ್ಮ ಅವಿಭಕ್ತ ಕುಟುಂಬದೊAದಿಗೆ ಕೃಷಿಯಲ್ಲಿ ತೊಡಗಿದ್ದಾರೆ. ನಾನಾ ರೀತಿಯ ಭತ್ತದ ಬೀಜಗಳನ್ನು ಬೆಳೆಸುವ ಇವರು ತಾವು ಬೆಳೆದ ಬೀಜವನ್ನು ಕೊಡಗು ಜಿಲ್ಲೆಯ ನೂರಾರು ರೈತರಿಗೆ ನೀಡುವ ಮೂಲಕ ಬೀಜೋತ್ಪಾದನೆಯಲ್ಲಿ ವಿಶೇಷ ಗಮನ ಸೆಳೆದಿದ್ದಾರೆ.
ತಮ್ಮ ಕೃಷಿ ೪೦ ಎಕರೆ ಭೂಮಿಯನ್ನು ಇಲ್ಲಿಯ ತನಕ ಪಾಳು ಬಿಡದ ಪ್ರಗತಿಪರ ರೈತರಾಗಿರುವ ಇವರು ಕಳೆದ ಬಾರಿ ತಾವೇ ಬೆಳೆದ ವಿವಿಧ ತಳಿಯ ಉತ್ತಮ ಭತ್ತದ ಬೆಳೆಯನ್ನು ಬೀಜದ ರೂಪದಲ್ಲಿ ಸಂಗ್ರಹಿಸಿ ೨೧೦ ಕ್ವಿಂಟಾಲ್‌ನಷ್ಟು ರೈತರಿಗೆ ಮಾರಾಟ ಮಾಡಿದ್ದರು. ಈ ಬಾರಿ ಜೂನ್ ತಿಂಗಳ ಮೊದಲ ವಾರದಲ್ಲಿ ಕೆ.ಎಂ.ಟಿ. ಕೆ.ಹೆಚ್.ಪಿ.೧೦.ಬೇವುಬೆಲ್ಲ ಹಾಗೂ ಗೌರಿ ಸಣ್ಣ ಎಂಬ ಬೀಜವನ್ನು ಎರಡು ಎಕರೆಯಲ್ಲಿ ಬಿತ್ತನೆ ಮಾಡಿದ್ದರು.
೮ ಕ್ವಿಂಟಾಲ್ ಬೀಜವನ್ನು ಬೀಜೋತ್ಪಾದನೆಗೆ ಬಳಸಿದ್ದರು. ಆದರೆ ನಿರೀಕ್ಷಿತ ಮಳೆಯು ಕೈಕೊಟ್ಟ ಹಿನ್ನಲೆಯಲ್ಲಿ ಈ ಬಾರಿ ರೈತ ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಇವರು ಬೆಳೆಯುತ್ತಿದ್ದ ಉತ್ತಮ ತಳಿಯ ಬೀಜಗಳು ಜಿಲ್ಲೆಯ ವಿವಿಧ ಭಾಗಕ್ಕೆ ರೈತರು ಖುದ್ದಾಗಿ ಕೊಂಡೊಯ್ಯುತ್ತಿದ್ದರು. ಇದೀಗ ಜೂನ್ ತಿಂಗಳಿನಲ್ಲಿ ಮುಂಗಾರು ಕಾಣಿಸಿಕೊಳ್ಳದೆ ಇರುವುದರಿಂದ ಮೊದಲ ಹಂತದಲ್ಲಿ ಬೀಜೋತ್ಪಾದನೆಗೆ ಹಿನ್ನಡೆಯಾಗಿದೆ. ಇದರಿಂದಾಗಿ ಮುಂದಿನ ವರ್ಷಕ್ಕೆ ಬೆಳೆಯಬಹುದಾಗಿದ್ದ ಭತ್ತದ ಬೀಜಗಳು ಲಭ್ಯವಿಲ್ಲದಂತಾಗಿದೆ. ಈ ಕಾರಣದಿಂದ ಜಿಲ್ಲೆಯ ವಿವಿಧ ಭಾಗದ ರೈತರಿಗೆ ಮುಂದಿನ ಸಾಲಿನಲ್ಲಿ ಭತ್ತದ ಬೀಜಗಳು ಇವರಿಂದ ಲಭ್ಯವಾಗುವುದು ಕಷ್ಟಕರವಾಗಿದೆ.
- ಹೆಚ್.ಕೆ. ಜಗದೀಶ್ ಭಾಗಮಂಡಲ : ವ್ಯಾಪ್ತಿಯಲ್ಲಿ ಮಳೆ ಕ್ಷೀಣಿಸಿದೆ ಜೂನ್ ಮೂರನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ .ವಾಡಿಕೆಯಂತೆ ಮುಂಗಾರು ಮಳೆ ಸುರಿದಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದೀಗ ಮಳೆ ಕೊರತೆಯಿಂದ ರೈತರು ಕೃಷಿ ಚಟುವಟಿಕೆಗಳಿಗೆ ಹಿಂದೇಟು ಹಾಕುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಆಗುತ್ತಿರುವುದರಿಂದ ಕಾಫಿ ಬೆಳೆಗಾರರು ಕಾಫಿಯ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕುತ್ತಿದ್ದಾರೆ. ಭತ್ತದ ಕೃಷಿಗೆ ನೀರಿನ ಕೊರತೆಯಿಂದ ಹಿನ್ನಡೆ ಉಂಟಾಗಿದೆ. ಪ್ರತಿವರ್ಷದಂತೆ ಜೂನ್ ಮೊದಲ ವಾರದಲ್ಲಿ ಭತ್ತದ ಬಿತ್ತನೆ ಆಗುತ್ತಿತ್ತು. ಕಳೆದ ವರ್ಷ ಜೂನ್ ೬ರಂದು ಭತ್ತದ ಬಿತ್ತನೆ ಕಾರ್ಯ ನಡೆದಿದೆ. ಈ ವರ್ಷ ಇದುವರೆಗೂ ಬಿತ್ತನೆ ಕಾರ್ಯ ನಡೆದಿಲ್ಲ. ಹೊಳೆಯ ಬದಿಯ ಕೆಲವರು ಗದ್ದೆಗೆ ನೀರು ಹಾಯಿಸಿ ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಅಂತರ್ಜಲ ಹಾಗೂ ಜಲಮೂಲ ಅವಲಂಭಿಸಿರುವ ರೈತರು ಮಳೆಗಾಗಿ ಕಾತರಿಸುತ್ತಿದ್ದಾರೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರು ಇಳಿಮುಖಗೊಂಡಿದೆ .ಕೆಲವೆಡೆ ಬಾವಿಯಲ್ಲಿ ನೀರು ಏರಿಕೆ ಆಗಿಲ್ಲ. ಈ ವರ್ಷ ಇದುವರೆಗೆ ೪೧೮ ಮಿಲಿ ಮೀಟರ್ ಮಳೆ ಆಗಿದೆ. ಕಳೆದ ವರ್ಷ ಇದೇ ಅವಧಿಗೆ ೭೬೩ ಮಿಲಿಮೀಟರ್ ಮಳೆ ಆಗಿತ್ತು. ೨೦೨೧ ರಲ್ಲಿ ಇದೇ ದಿನಕ್ಕೆ ೧೭೯೪.೫ ಮಿಲಿಮೀಟರ್ ಮಳೆ ಆಗಿತು.ಕಳೆದ ಎರಡು ವರ್ಷಗಳ ಮಳೆ ಪ್ರಮಾಣವನ್ನು ಹೋಲಿಸಿದರೆ ಈ ವರ್ಷ ಬಹಳಷ್ಟು ಮಳೆ ಪ್ರಮಾಣ ಕಡಿಮೆ ಆಗಿದೆ. ರೈತರು ಭತ್ತದ ಕೃಷಿ ನೆರವೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ಕಾವೇರಿ ತವರಿನಲ್ಲಿ ಮಳೆ ಕೊರತೆ ಕಂಡುಬAದಿದ್ದು ಜಿಲ್ಲೆಯಾದ್ಯಂತ ಜನರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
-ಸುನಿಲ್
ಕೂಡಿಗೆ : ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮಳೆಯನ್ನೇ ಅವಲಂಭಿಸಿ ನೂರಾರು ರೈತರು ಮೆಕ್ಕೆಜೋಳವನ್ನು ಬೆಳೆಯುವುದು ಸಾಮಾನ್ಯವಾಗಿದೆ ಅದರೆ ಈ ಸಾಲಿನಲ್ಲಿ ಜೂನ್ ತಿಂಗಳು ಕಳೆಯುತ್ತಿದ್ದರೂ ಸಹ ತಾಲೂಕು ವ್ಯಾಪ್ತಿಯಲ್ಲಿ ಮುಂಗಾರು ಮಳೆ ಹದವಾಗಿ ಬಾರದೇ ಇರುವುದರಿಂದಾಗಿ ಆತಂಕದಲ್ಲಿದ್ದಾರೆ ರೈತರು.
ಜಮೀನಿಗೆ ಬಿತ್ತನೆ ಮಾಡಿದ ಮೆಕ್ಕೆಜೋಳ ಬೀಜವು ಕೆಲ ಪ್ರದೇಶದಲ್ಲಿ ಅರ್ಧ ಭಾಗದಷ್ಟು ಮಾತ್ರ ಹುಟ್ಟಿದೆ. ಇನ್ನುಳಿದ ಭಾಗದ ಬೆಳೆ ಮಳೆಯಿಲ್ಲದೆ ಒಣಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮೆಕ್ಕೆಜೋಳವನ್ನು ಮಳೆಯನ್ನೇ ಅವಲಂಭಿಸಿ ಬೆಳೆಯುತ್ತಾರೆ, ಆದರೆ ಕೆಲ ರೈತರು ತಮ್ಮ ಕೊಳವೆ ಬಾವಿಯಿಂದ ನೀರಾವರಿ ಮಾಡಿಕೊಳ್ಳುತ್ತಿದ್ದಾರೆ, ಇನ್ನೂ ಕೆಲವು ರೈತರು ಮಳೆಯನ್ನೇ ಅವಲಂಭಿಸಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೀಜವು ಭೂಮಿಯಲ್ಲಿ ಇದ್ದು, ೧೦ ದಿನಗಳು ಕಳೆದರೂ ಸಹ ಮೊಳಕೆಯಾಗಿರುವುದಿಲ್ಲ.
ಈ ಸಾಲಿನಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಮುಂಗಾರು ಬಿದ್ದ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ಬೆಳೆಯನ್ನು ಬೆಳೆಯುವ ರೈತರು ಭೂಮಿಯನ್ನು ಸಿದ್ಧತೆ ಮಾಡಿ ಮುಂದಿನ ದಿನಗಳಲ್ಲಿ ಮಳೆ ಬರಬಹುದೆಂದು ನಂಬಿ ಮೆಕ್ಕೆಜೋಳವನ್ನು ಬಿತ್ತನೆ ಮಾಡಿರುತ್ತಾರೆ, ಅದರೆ ತಿಂಗಳುಗಳು ಕಳೆಯುತ್ತಾ ಬಂದರು ಸಹ ಮಳೆ ಮಾತ್ರ ಬೀಳುತ್ತಿಲ್ಲ ಎಂದು ತಾಲೂಕು ವ್ಯಾಪ್ತಿಯ ಸಿದ್ದಲಿಂಗಪುರ ಹುದುಗೂರು, ಸೀಗೆಹೊಸೂರು ಭುವನಗಿರಿ ತೊರೆನೂರು ಶಿರಂಗಾಲ ಭಾಗದ ರೈತರು ತಮ್ಮ ಅಳಲನ್ನು ತೊಡಿಕೊಂಡಿರುತ್ತಾರೆ.
ಮಳೆ ಬಿದ್ದರೆ ಜೋಳದ ಮೊಳಕೆ ಬಂದು ಬೆಳೆ ಬರಬಹುದು. ನಂತರದ ಬೇಸಾಯ ಮಾಡಲು ಅನುಕೂಲವಾಗುವುದು ಎಂಬ ಆಸೆ ರೈತರದಾಗಿದೆ. ಈ ಭಾಗ ಅನೇಕ ರೈತರು ಮಳೆಗಾಗಿ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ವ್ಯಾಪ್ತಿಗಳಲ್ಲಿ ಕಳೆದ ಒಂದು ವಾರದಿಂದಲೂ ಸಹ ಮೋಡ ಕವಿದ ವಾತಾವರಣ ಇದ್ದರೂ ಸಹ ಮಳೆಯಾಗಿಲ್ಲ.
-ಕೆ.ಕೆ. ನಾಗರಾಜಶೆಟ್ಟಿ
ಸಿದ್ದಾಪುರ : ಮುಂಗಾರು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಸಿದ್ದಾಪುರ, ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಕೃಷಿ ಗದ್ದೆಗಳು ಚಟುವಟಿಕೆ ಇಲ್ಲದೆ ಒಣಗುತ್ತಿರುವುದು ಕಂಡುಬರುತ್ತಿದೆ.
ಮಳೆಬಾರದ ಹಿನ್ನೆಲೆಯಲ್ಲಿ ಶುಂಠಿ ಕೆಲಸ ಮಾಡುವ ಕೃಷಿಕರಿಗೂ ಕೂಡ ಸಮಸ್ಯೆ ಎದುರಾಗಿದೆ. ಅಡಿಕೆ ಮರಗಳಲ್ಲಿ ಹೂಗಳು ಬಿಡುವ ಸಂದರ್ಭದಲ್ಲಿ ಮುಂಗಾರು ಮಳೆ ವಿಳಂಬವಾದ ಕಾರಣ ಬೆಳೆಗಾರರು ಮಳೆ ನಿರೀಕ್ಷೆಯಲ್ಲಿದ್ದಾರೆ. ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖಗೊಂಡಿತು. ಆದರೆ ಮುಂಗಾರು ಮಳೆಯ ಪ್ರಾರಂಭವಾಗುವ ಮುಂಚಿತವೇ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಈಗಾಗಲೇ ಕಂದಾಯ ಇಲಾಖೆ ವತಿಯಿಂದ ಮುಂಜಾಗ್ರತ ಕ್ರಮವಾಗಿ ನೋಟೀಸ್ ಜಾರಿ ಮಾಡಲಾಗಿದೆ ಮುಂಗಾರು ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಕಾರ್ಮಿಕರಿಗೂ ಕೂಡ ಸಮರ್ಪಕವಾಗಿ ಕೆಲಸ ಕಾರ್ಯಗಳು ಸಿಗುತ್ತಿಲ್ಲ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಕಾಫಿ ತೋಟಗಳಲ್ಲಿ ಕರಿಮೆಣಸಿನ ಬಳ್ಳಿಗಳಲ್ಲಿ ಮಳೆ ಇಲ್ಲದೆ ಮೆಣಸಿನ ಚಿಗುರುಗಳು ಹೊರಬರಲು ತಡವಾಗುತ್ತಿದೆ ಇದು ಕೂಡ ಬೆಳೆಗಾರರಿಗೆ ಮತ್ತಷ್ಟು ಸಮಸ್ಯೆಯಾಗಿದೆ. -ವಾಸು
ಬಾಗುತ್ತಿರುವ ಜೋಳದ ಗಿಡಗಳು
ಕಣಿವೆ : ಕುಶಾಲನಗರ ತಾಲೂಕು ವ್ಯಾಪ್ತಿಯ ಅನೇಕ ಹಳ್ಳಿಗಳಲ್ಲಿ ರೈತರು ಕೈಗೊಂಡಿರುವ ಮುಂಗಾರು ಪೂರ್ವದ ಮುಖ್ಯ ಬೆಳೆಯಾಗಿರುವ ಮುಸುಕಿನ ಜೋಳದ ಗಿಡಗಳು ಬೆಳೆದಿರುವ ಹೊಲ ಗದ್ದೆಗಳು ಮಳೆಯಿಲ್ಲದೇ ಸಂಪೂರ್ಣ ಒಣಗಲಾರಂಭಿಸಿವೆ. ಜೋಳವನ್ನು ಬೆಳೆಯಲು ಸಹಕಾರ ಸಂಘಗಳಲ್ಲಿ, ಸ್ವ ಸಹಾಯ ಸಂಘಗಳಲ್ಲಿ ಹಾಗೂ ಲೇವಾದೇವಿದಾರರ ಬಳಿ ಸಾಲ ಸೋಲ ಮಾಡಿರುವ ರೈತರ ನೆತ್ತಿಯ ಮೇಲೆ ಬೆಳೆ ನಷ್ಟದ ಕಾರ್ಮೋಡ ಆವರಿಸಿದೆ. ಈ ವರ್ಷದ ಜನವರಿಯಿಂದ ಮೇ ತಿಂಗಳ ಅರ್ಧದವರೆಗೂ ಮಳೆಯೇ ಬಾರದ ಕಾರಣ ಕೃಷಿಕ ವಲಯ ಆತಂಕದಲ್ಲಿತ್ತು.
ಮೇ ತಿಂಗಳ ಮೂರನೇ ವಾರದಲ್ಲಿ ಸುರಿದ ಒಂದಷ್ಟು ಮುಂಗಾರು ಪೂರ್ವ ಮಳೆಯಿಂದಾಗಿ ಜೋಳದ ಬಿತ್ತನೆಗೆ ತೊಡಗಿದ ರೈತರಿಗೆ ನೀಡಿರುವ ವರುಣನ ಭಾರೀ ಹೊಡೆತವನ್ನು ನೀಡಿದ್ದಾನೆ. - ಮೂರ್ತಿ