ಮಡಿಕೇರಿ, ಜೂ. ೨೧ : ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತಕ್ಕೆ ತಾನು ಆದ್ಯತೆ ನೀಡುವುದಾಗಿ ಕೊಡಗಿನ ನೂತನ ಜಿಲ್ಲಾಧಿಕಾರಿ ವೆಂಕಟ್ ರಾಜ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಿರ್ಗಮಿತ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಿಂದಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೊಡಗಿನಲ್ಲಿ ಜನಸ್ನೇಹಿಯಾಗಿ ಪಾರದರ್ಶಕ ಆಡಳಿತ ನಡೆಸುವುದು ತನ್ನ ಗುರಿಯಾಗಿದೆ. ಕೊಡಗಿನ ಬಗ್ಗೆ ತನಗೆ ಹಮ್ಮೆಯಿದ್ದು, ಮಳೆಗಾಲದಲ್ಲಿ ಇಲ್ಲಿ ಸಂಭವಿಸುವ ಅವಘಡಗಳ ಬಗ್ಗೆ ಅರಿತಿದ್ದೇನೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಳೆಗಾಲವನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ
ಒತ್ತು ನೀಡಲಾಗುವುದು ಎಂದು ವೆಂಕಟ್ ರಾಜ ನುಡಿದರು.
ರಾಜಸ್ಥಾನ ಮೂಲದವರಾದ ವೆಂಕಟ್ರಾಜ ೨೦೧೩ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರೊಬೇಷನರಿಯಾಗಿ ಹಾಸನ ಜಿಲ್ಲೆಯಲ್ಲಿ ವೃತ್ತಿ ಆರಂಭಿಸಿದ ಇವರು ಬೀದರ್ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ, ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿರುವ ಇವರು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ, ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ವಿಭಾಗದ ನೋಡಲ್ ಅಧಿಕಾರಿಯಾಗಿ ಹಾಗೂ ಕೋಲಾರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಕೊಡಗು ಜಿಲ್ಲಾಧಿಕಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಡಾ. ಬಿ.ಸಿ. ಸತೀಶ ಅವರು ಒಂದು ವರ್ಷ ಎಂಟು ತಿಂಗಳ ಕಾಲ ಕೊಡಗು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.