ಚೆಯ್ಯಂಡಾಣೆ, ಜೂ. ೨೧: ತಮ್ಮ ಮನೆಯ ಅಂಗಳದಲ್ಲಿನ ಕೈತೋಟದಲ್ಲಿ ಹೂ ಕುಯ್ಯುತ್ತಿದ್ದ ಮಹಿಳೆಯೋರ್ವರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಚೆಯ್ಯಂಡಾಣೆಯ ಚೇಲಾವರ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅಲ್ಲಿನ ನಿವಾಸಿ ಮುಂಡ್ಯೋಳAಡ ಅಪ್ಪಯ್ಯ ಅವರ ಪತ್ನಿ ಜಾನಕಿ ಅಪ್ಪಯ್ಯ (೬೨) ಅವರು ಬೆಳಿಗ್ಗೆ ೭-೩೦ರ ಸುಮಾರಿಗೆ ಅಂಗಳದಲ್ಲಿ ಹೂವು ಸಂಗ್ರಹಿಸುತ್ತಿದ್ದಾಗ ಏಕಾಏಕಿ ಮನೆಯಂಗಳಕ್ಕೆ ಬಂದ ಒಂಟಿ ಸಲಗ ಇವರ ಮೇಲೆ ಹಿಂಬದಿಯಿAದ ದಾಳಿ ನಡೆಸಿದೆ. ಆನೆ ಇನ್ನೇನು ಇವರನ್ನು ತುಳಿಯಲು ಮುಂದಾಗಿದ್ದ ವೇಳೆ ಇದನ್ನು ಗಮನಿಸಿದ ಸನಿಹದಲ್ಲಿದ್ದ ಕಾರ್ಮಿಕರು ಬೊಬ್ಬೆ ಹಾಕಿದ್ದರಿಂದ ಆನೆ ಸ್ಥಳದಿಂದ ತೆರಳಿದೆ ಎನ್ನಲಾಗಿದೆ. ಘಟನೆಯಿಂದ ಜಾನಕಿ ಅವರ ಕಾಲರ್‌ಬೋನ್ ಮುರಿದಿದ್ದು, ಪಕ್ಕೆಲುಬುಗಳಿಗೂ ಗಾಯವಾಗಿದೆ. ಬಳಿಕ ಇವರನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಮಹಜರು ನಡೆಸಿದರು.

(ಮೊದಲ ಪುಟದಿಂದ) ಚೇಲಾವರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಎಲ್ಲೆಮೀರುತ್ತಿದ್ದು, ಹಿಂಡು ಹಿಂಡಾಗಿ ಆನೆಗಳು ಸಂಚರಿಸುತ್ತಿವೆ. ಎಲ್ಲಾ ಬೆಳೆಗಳು ನಾಶವಾಗುತ್ತಿರುವುದಲ್ಲದೆ ತೋಟಕ್ಕೆ ತೆರಳಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ ಎಂದು ಅಪ್ಪಯ್ಯ ಅವರ ಸಹೋದರ ನಿವೃತ್ತ ಸುಬೆದಾರ್ ಮೇಜರ್ ಸುಬ್ಬಯ್ಯ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಪಟಾಕಿ ಸಿಡಿಸಿ ಮರಳುತ್ತಾರೆ. ಆದರೆ ತಕ್ಷಣವೇ ಆನೆಗಳು ಮತ್ತೆ ಹಿಂತಿರುಗುತ್ತಿವೆ. ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಶಾಸಕರ ಭೇಟಿ: ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹಾಗೂ ಕುಟುಂಬಸ್ಥರೊAದಿಗೆ ಚರ್ಚಿಸಿ ಸಾಂತ್ವನ ಹೇಳಿದರು. ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳಾದ ಡಿ.ಸಿ.ಎಫ್. ಶರಣ ಬಸಪ್ಪ, ಎ.ಸಿ.ಎಫ್ ನೆಹರು ಹಾಗೂ ಸಿಬ್ಬಂದಿಗಳಿಗೆ ತಕ್ಷಣ ಕಾರ್ಯಾಚರಣೆ ನಡೆಸಲು ಅವರು ಸೂಚಿಸಿದರು. ಗಾಯಾಳುವಿನ ಚಿಕಿತ್ಸೆ ಬಗ್ಗೆ ವೈದ್ಯರೊಂದಿಗೆ ಅವರು ಸಮಾಲೋಚಿಸಿದರು. ಶಾಸಕರೊಂದಿಗೆ ಕಾಂಗ್ರೆಸ್ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಹಾಜರಿದ್ದರು.