ಸೋಮವಾರಪೇಟೆ, ಜೂ. ೨೨: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗೌಡಳ್ಳಿ ಸಹಯೋಗದಲಿ,್ಲ ಗ್ರಾ.ಪಂ. ವ್ಯಾಪ್ತಿಯ ನಂದಿಗುAದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿಬಿರವನ್ನು ಗೌಡಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್ ಉದ್ಘಾಟಿಸಿದರು. ನಂತರ ಮಾತನಾಡಿ, ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ಯಾವುದೇ ಅಂಜಿಕೆಯಿಲ್ಲದೆ, ರಕ್ತದಾನ ಮಾಡಬಹುದು. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ರಕ್ತದಾನಕ್ಕೆ ಮುಂದಾಗದಿರುವುದು ವಿಷಾದನೀಯ ಎಂದರು.

ಮಡಿಕೇರಿ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯವಿಲ್ಲ. ಅದಕ್ಕಾಗಿ ಮತ್ತೊಬ್ಬರ ರಕ್ತವನ್ನು ಪಡೆಯಬೇಕಿದೆ. ಒಬ್ಬರು ರಕ್ತದಾನ ಮಾಡಿದಲ್ಲಿ, ಅದು ನಾಲ್ಕು ಜನರಿಗೆ ಉಪಯೋಗಕ್ಕೆ ಬರುವುದು. ಹೆಚ್ಚಿನವರು ಇಂದಿಗೂ ರಕ್ತದಾನ ಮಾಡಲು ಭಯಭೀತರಾಗುತ್ತಿದ್ದು, ಅವರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಿಸಿದರು.

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಬೇಡಿಕೆ ಅಧಿಕವಾಗಿದ್ದು, ತುರ್ತು ಸಂದರ್ಭ ಬೇರೆ ಜಿಲ್ಲೆಯಿಂದಲೂ ರಕ್ತವನ್ನು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ಇದರಿಂದ ಮಾನವೀಯ ಸಮಾಜ ಕಾಣಲು ಸಾಧ್ಯ. ಅಲ್ಲದೆ, ದಾನಿಗಳಿಗೆ ಸಂಘ ಸಂಸ್ಥೆಗಳು ಉತ್ತಮ ವೇದಿಕೆಗಳ ಅವಕಾಶ ಮಾಡಿಕೊಡುವ ಮೂಲಕ ರಕ್ತಸಂಗ್ರಹಕ್ಕೆ ಮುಂದಾಗಬೇಕೆAದು ತಿಳಿಸಿದರು.

ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಗ್ರಾ.ಪಂ., ಕಳೆದ ವರ್ಷದಿಂದ ನಿರಂತರವಾಗಿ ರಕ್ತದಾನ ಶಿಬಿರ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ಅಜ್ಜಳ್ಳಿ ನವೀನ್ ಕುಮಾರ್, ಮಂಜುನಾಥ್, ವಿಶಾಲಾಕ್ಷಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಗಣಪತಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಭಾನು, ಧರಣೀಶ ರಾಜ್ ಮತ್ತಿತರರು ಇದ್ದರು. ಶಿಬಿರದಲ್ಲಿ ೪೦ ಮಂದಿ ಗ್ರಾಮಸ್ಥರು ರಕ್ತದಾನ ಮಾಡಿದರು. ೬೦ಕ್ಕೂ ಹೆಚ್ಚಿನ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.