ಕೂಡಿಗೆ ಜೂ. ೨೨: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ, ಎನ್.ಎಸ್.ಎಸ್. ಘಟಕ, ರೆಡ್ ಕ್ರಾಸ್ ಸಂಸ್ಥೆ, ಇಕೋ ಕ್ಲಬ್ ವತಿಯಿಂದ ಎಸ್.ಡಿ.ಎಂ.ಸಿ. ಸಮಿತಿ ಹಾಗೂ ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಕ್ತದಾನದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ. ಇಂತಹ ಮಹತ್ವದ ಕಾರ್ಯದ ಕುರಿತು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಜೂ. ೧೪ ರಂದು ವಿಶ್ವ ರಕ್ತ ದಾನಿಗಳ ದಿನ ಆಚರಿಸಲಾಗುತ್ತಿದೆ ಎಂದರು.
ರಕ್ತದಾನದ ಉಪಯೋಗಗಳ ಕುರಿತು ಮಾತನಾಡಿದ ಇಕೋ ಕ್ಲಬ್ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು.
ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್, ಎಸ್.ಎಂ. ಗೀತಾ, ಬಿ.ಎಸ್. ಅನ್ಸಿಲಾ ರೇಖಾ ಇದ್ದರು.