ಚೆಯ್ಯಂಡಾಣೆ, ಜೂ. ೨೦: ವೀರಾಜಪೇಟೆ ತಾಲೂಕಿನ ಚೆಂಬೆ ಬೆಳ್ಳೂರು ಗ್ರಾಮ ಪಂಚಾಯಿತಿ ಹಾಗೂ ಕದನೂರು ಗ್ರಾಮ ಪಂಚಾ ಯಿತಿಗೆ ಒಳಪಟ್ಟ ಮಲ್ಲಂಬಟ್ಟಿ-ದೇವಣಗೇರಿ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸಪಡುತ್ತಿದ್ದು ಕೂಡಲೇ ರಸ್ತೆ ದುರಸ್ತಿಪಡಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ರಸ್ತೆ ವೀರಾಜಪೇಟೆ, ಮೂರ್ನಾಡು, ಮಡಿಕೇರಿಗೆ ಸಂಪರ್ಕ ಕಲ್ಪಿಸಿದ್ದು, ಚಾಮಿಯಾಲದಿಂದ ದೇವಣಗೇರಿ ವರೆಗೆ ೩ ಕಿ.ಮೀ. ರಸ್ತೆ ತೀವ್ರ ಹದಗೆಟ್ಟಿದ್ದು ೧೦ ವರ್ಷದಿಂದ ಈ ರಸ್ತೆ ದುರಸ್ತಿ ಕಂಡಿಲ್ಲ ಎಂದು ಗ್ರಾಮಸ್ಥರು ಪತ್ರಿಕೆಯ ಮುಖಾಂತರ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ. ಈ ರಸ್ತೆಯಲ್ಲಿ ದಿನನಿತ್ಯ ಹಲವಾರು ಶಾಲಾ-ಕಾಲೇಜು ವಾಹನ ಸಂಚರಿಸುತ್ತಿದ್ದು, ಪ್ರಖ್ಯಾತ ಅರಮೇರಿ ಮಠಕ್ಕೂ ಕೂಡ ಇದೇ ರಸ್ತೆ ಸಂಪರ್ಕಿಸುತ್ತಿದ್ದು, ಅಲ್ಲಿ ಎಸ್.ಎಂ.ಎಸ್. ವಿದ್ಯಾಸಂಸ್ಥೆ ಕಾರ್ಯಾಚರಿಸುತ್ತಿದೆ.
ಚಾಮಿಯಾಲದಲ್ಲಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಮಸೀದಿ, ಮದರಸ, ಗಿರಿಜನ ಕಾಲೋನಿ, ದೇವಣಗೇರಿಯಲ್ಲಿ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ನ್ಯಾಯಬೆಲೆ ಅಂಗಡಿ, ಕೃಷಿ ಪತ್ತಿನ ಸಹಕಾರ ಸಂಘ, ದವಸ ಭಂಡಾರ ಮುಂತಾದವು ಇಲ್ಲಿ ಕಾರ್ಯಾಚರಿಸುತ್ತಿವೆ. ಆಸ್ಪತ್ರೆಗೆ ರೋಗಿಗಳನ್ನು ಕೊಂಡೊಯ್ಯುವುದೇ ಹರಸಾಹಸವಾಗಿದೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳಿ ಅಪಘಾತವಾದ ಹಲವಾರು ಉದಾಹರಣೆಗಳಿವೆ.
ಮೋರಿ ದುರಸ್ತಿಪಡಿಸಿ
ಮೂರು ಕಿ.ಮೀ. ರಸ್ತೆಯಲ್ಲಿ ಒಟ್ಟು ೩ ರಿಂದ ೪ ಮೋರಿಗಳಿದ್ದು ಒಂದು ಮೋರಿ ಕಳೆದ ವರ್ಷದ ಮಳೆಗೆ ಹಾನಿಯಾಗಿದ್ದು ರಸ್ತೆಯ ಒಂದು ಭಾಗದಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದೆ. ಈ ಗುಂಡಿಗೆ ವಾಹನ ಸರಿದರೆ ವಾಹನದ ಕೆಳಭಾಗವು ಬೃಹತ್ ಗುಂಡಿಗೆ ಬೀಳುವುದರಲ್ಲಿ ಸಂಶಯವಿಲ್ಲ. ಕೂಡಲೇ ಮೋರಿ ವ್ಯವಸ್ಥೆ ಸರಿಪಡಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೂಡಲೇ ಈ ರಸ್ತೆ ಕಾಮಗಾರಿ ಹಾಗೂ ಮೋರಿ ದುರಸ್ತಿ ಕಾಮಗಾರಿ ಆರಂಭಿಸಿ ಈ ಭಾಗದ ಗ್ರಾಮಸ್ಥರ ತೊಂದರೆಯನ್ನು ನೀಗಿಸುವಂತೆ ಸ್ಥಳೀಯ ಗ್ರಾಮಸ್ಥರು ಮಾಧ್ಯಮದ ಮುಖಾಂತರ ಆಗ್ರಹಿಸಿದ್ದಾರೆ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ನೂತನ ಶಾಸಕರು ಮುತುವರ್ಜಿ ವಹಿಸಿ ಕೂಡಲೇ ಈ ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಚಾಮಿಯಾಲದಿಂದ ದೇವಣ ಗೇರಿ ೩ ಕಿ.ಮೀ. ರಸ್ತೆ ಹದಗೆಟ್ಟು ವರ್ಷಗಳು ಹಲವಾರು ಕಳೆದಿವೆ. ಶಾಲಾ ವಿದ್ಯಾರ್ಥಿಗಳು, ಹಲವಾರು ಶಾಲಾ ವಾಹನ, ಆಸ್ಪತ್ರೆಗೆ ತೆರಳ ಬೇಕಾದರೆ ಇದೇ ರಸ್ತೆಯಲ್ಲಿ ಸಂಚರಿಸಬೇಕು. ಕೂಡಲೇ ಸಂಬAಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಗ್ರಾಮಸ್ಥ ಜೋಕೀರ ಜೀವನ್ ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಪರವಾಗಿ ವೀರಾಜ ಪೇಟೆ ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸೈಪುದ್ದಿನ್ ಚಾಮಿಯಾಲ ‘ಶಕ್ತಿ’ಗೆ ಮಾಹಿತಿ ನೀಡಿ ಈ ರಸ್ತೆ ಸರಿಸುಮಾರು ೧೦ ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ಈ ರಸ್ತೆಯಲ್ಲಿ ಸಂಚರಿಸುವುದೇ ಹರಸಾಹಸ. ಚುನಾವಣೆ ಸಂದರ್ಭ ಮಾತ್ರ ಅರ್ಧಂಬರ್ದ ತೇಪೆ ಕಾಮಗಾರಿ ಮಾಡಿ ಜನರನ್ನು ಓಲೈಸುವ ತಂತ್ರ ಮಾತ್ರ ನಡೆಯುತ್ತದೆ. ವೀರಾಜಪೇಟೆ ಪಟ್ಟಣ, ಮಡಿಕೇರಿಗೆ ತೆರಳ ಬೇಕಾದರೆ ಈ ರಸ್ತೆ ಮುಖ್ಯ ವಾಗಿದ್ದು, ಸಂಬAಧಪಟ್ಟ ನೂತನ ಶಾಸಕರು, ಸಂಸದರು, ಅಧಿಕಾರಿ ಗಳು ಕೂಡಲೇ ರಸ್ತೆ ದುರಸ್ತಿಪಡಿಸಿ ಗ್ರಾಮಸ್ಥರ ತೊಂದರೆ ನೀಗಿಸುವಂತೆ ಕೋರಿ ಕೊಂಡಿದ್ದಾರೆ.
- ಅಶ್ರಫ್