ಸೋಮವಾರಪೇಟೆ, ಜೂ. ೨೧: ಮೈಸೂರು-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಯಡವನಾಡು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಜೀಪ್, ರಸ್ತೆ ಬದಿಯ ಗುಂಡಿಗೆ ಬಿದ್ದು ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದ್ದು, ಇದರಲ್ಲಿ ಓರ್ವ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಪಟ್ಟಣ ಸಮೀಪದ ಬಜೆಗುಂಡಿ ಗ್ರಾಮದಿಂದ ಯಲಕನೂರು ಮಾರ್ಗವಾಗಿ ಹೇರೂರು ಗ್ರಾಮಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭ ಅವಘಡ ಸಂಭವಿಸಿದ್ದು, ರಸ್ತೆ ಬದಿಯಲ್ಲಿರುವ ಗುಂಡಿಗೆ ಜೀಪ್ ಬಿದ್ದಿದೆ. ಪರಿಣಾಮ ಬಜೆಗುಂಡಿ ಗ್ರಾಮದ ಬಾಬು ಅವರ ಗಂಟಲು ಭಾಗಕ್ಕೆ ಕಬ್ಬಿಣದ ವಸ್ತು ಚುಚ್ಚಿದ್ದು, ಗಂಭೀರ ಸ್ಥಿತಿಗೆ ತಲುಪಿದ್ದಾರೆ.
ಜೀಪ್ನೊಳಗಿದ್ದ ಬಜೆಗುಂಡಿ ಗ್ರಾಮದ ಗಣೇಶ್, ರಮೇಶ್, ಆನಂದ ಎಂಬವರುಗಳಿಗೂ ಗಾಯಗಳಾಗಿದ್ದು, ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ.
ಘಟನೆ ನಡೆದ ಕೆಲ ಕ್ಷಣಗಳಲ್ಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದು, ಜೀಪ್ನೊಳಗೆ ಸಿಲುಕಿದ್ದವರನ್ನು ಹೊರಗೆಳೆದಿದ್ದಾರೆ.
ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಅಲ್ಲಿಂದ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಗಣೇಶ್, ರಮೇಶ್, ಆನಂದ ಅವರುಗಳು ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದು, ಬಾಬು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.