ಮಡಿಕೇರಿ, ಜೂ. ೧೮: ಎಲ್ಲಾ ರಂಗಗಳಲ್ಲಿಯೂ ಬದಲಾವಣೆ ಆಗುತ್ತಿರುವ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿಯೂ ಬದಲಾವಣೆ ಅನಿವಾರ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು.
ಮಡಿಕೇರಿಯ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿತ ಉಪನ್ಯಾಸಕಿ ಮತ್ತು ಲೇಖಕಿ ಕೆ.ಜಯಲಕ್ಷಿö್ಮ ವಿರಚಿತ ‘ಚಪ್ಪಾಳೆಗೂ ಬೆಲೆ ಇದೆ’ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಚಿದ್ವಿಲಾಸ್, ಸಮಾಜದಲ್ಲಿನ ಪ್ರತೀ ಕ್ಷೇತ್ರವೂ ಆಧುನಿಕ ದಿನಮಾನಗಳ ಬೇಡಿಕೆಗೆ ತಕ್ಕಂತೆ ಬದಲಾವಣೆ ಆಗುತ್ತಿದೆ. ಎಲ್ಲಾ ರಂಗಗಳಲ್ಲಿಯೂ ಹೊಸತನದ ಗಾಳಿ ಬೀಸುತ್ತಿದೆ. ಸಾಹಿತ್ಯ ಕ್ಷೇತ್ರ ಕೂಡ ಅದಕ್ಕೆ ಹೊರತಾಗಿಲ್ಲ. ಸಾಹಿತ್ಯ ರಂಗದಲ್ಲಿಯೂ ಬದಲಾವಣೆ ಅನಿವಾರ್ಯವಾಗಿದೆ. ಮುಖ್ಯವಾಗಿ ಯುವ ಪೀಳಿಗೆಯನ್ನು ಆಕರ್ಷಿಸುವ ಸಾಹಿತ್ಯದ ಅನಿವಾರ್ಯತೆ ಇದೆ. ಮಕ್ಕಳಲ್ಲಿ ಆಸಕ್ತಿ ಸೃಷ್ಟಿಸುವ ಸಾಹಿತ್ಯದ ಆದ್ಯತೆ ಸಾಹಿತಿಗಳದ್ದಾಗಬೇಕಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಲೇಖಕರಿಗೆ ಸಾಹಿತ್ಯ ಲೋಕದ ಬದಲಾವಣೆ ಮತ್ತು ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಕಮ್ಮಟದ ಅಗತ್ಯವಿದ್ದು ಕನ್ನಡ ಪರ ಸಂಘಸAಸ್ಥೆಗಳು ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆಯೂ ಸಲಹೆ ನೀಡಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕೊಡಗಿನಲ್ಲಿ ಬರಹಗಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಕ್ಷೇತ್ರದತ್ತ ಒಲವು ತೋರುವ ಮೂಲಕ ಲೇಖಕಿಯರ ಕೊರತೆಯನ್ನು ನೀಗಿಸುತ್ತಿದ್ದಾರೆ. ಈಗಾಗಲೇ ಪರಿಷತ್ ವತಿಯಿಂದ ದಿ. ಗೌರಮ್ಮ ದತ್ತಿ ನಿಧಿ ಪ್ರಶಸ್ತಿಯನ್ನು ೧೮ ಲೇಖಕಿಯರ ಚೊಚ್ಚಲ ಕೃತಿಗಳಿಗೆ ನೀಡಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಲೇಖಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನೇ ಕೊಡುಗೆಯಾಗಿ ನೀಡುವ ಸಂಪ್ರದಾಯ ಪ್ರಾರಂಭಿಸಲಾಗಿದ್ದು ಇದರಿಂದಾಗಿ ಅನೇಕ ಲೇಖಕರ ಕೃತಿಗಳು ಖರೀದಿಯಾಗಿದೆ ಎಂದು ನುಡಿದರು. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ದಿನದಲ್ಲಿ ಕೆಲ ಸಮಯವನ್ನು ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ, ಅವರಿಗೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸಲು ಪೋಷಕರು ಮುಂದಾಗಬೇಕು ಎಂದು ಕಾಮತ್ ಕರೆ ನೀಡಿದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ೧೦ ವರ್ಷಗಳಿಂದ ನೂರಾರು ಲೇಖನಗಳನ್ನು ಬರೆದಿರುವ ಜಯಲಕ್ಷಿö್ಮ ಸಮಾಜಕ್ಕೆ ಉಪಯುಕ್ತವಾಗಬಲ್ಲ ತಮ್ಮ ಅನಿಸಿಕೆಗಳನ್ನು ‘ಚಪ್ಪಾಳೆಗೂ ಬೆಲೆ ಇದೆ’ ಕೃತಿಯನ್ನು ತನ್ನದೇ ಆದ ಹೇರಂಭ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಈ ಮೂಲಕ ಕೊಡಗಿನ ಸಾಹಿತ್ಯಲೋಕಕ್ಕೆ ಮತ್ತೊಂದು ಪ್ರಕಾಶನ ಸಂಸ್ಥೆಯ ಕೊಡುಗೆ ದೊರಕಿದಂತಾಗಿದೆ ಎಂದರು. ಉಪನ್ಯಾಸಕಿಯಾಗಿರುವ ಜಯಲಕ್ಷಿö್ಮ ತಮ್ಮ ಅನುಭವಕ್ಕೆ ಬಂದ ಅನೇಕ ಘಟನೆಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಇದು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ನಡುವಿನ ಬೆಸುಗೆಯಂತಿದೆ ಎಂದು ಅನಿಲ್ ಶ್ಲಾಘಿಸಿದರು.
ಲೇಖಕಿ ಕೆ.ಜಯಲಕ್ಷಿö್ಮ ಮಾತನಾಡಿ, ಶಿಕ್ಷಕ ವೃತ್ತಿಯೊಂದಿಗೆ ಬರವಣಿಗೆಯನ್ನೂ ಹವ್ಯಾಸವಾಗಿ ರೂಡಿಸಿಕೊಂಡು ಬಂದಿದ್ದು, ೧೦ ವರ್ಷಗಳಿಂದ ಬೇರೆ ಬೇರೆ ವಿಚಾರಗಳ ಬಗ್ಗೆ ಬರೆದಿರುವ ಲೇಖನಗಳನ್ನೇ ಇದೀಗ ಚಪ್ಪಾಳೆಗೂ ಬೆಲೆ ಇದೆ ಎಂಬ ಪುಸ್ತಕವಾಗಿ ಪ್ರಕಟಿಸಲಾಗಿದೆ. ಚಪ್ಪಾಳೆಯು ಪ್ರತಿಯೋರ್ವ ವ್ಯಕ್ತಿಯ ಜೀವನದಲ್ಲಿಯೂ ಪ್ರೋತ್ಸಾಹದ ಮೂಲಕ ಸಾಧನೆಗೆ ಕಾರಣವಾಗುತ್ತದೆ. ಹೀಗಾಗಿಯೇ ಇದೇ ಶೀರ್ಷಿಕೆಯಲ್ಲಿ ಪುಸ್ತಕ ಪ್ರಕಟಿಸಿ ೪೦ ಲೇಖನಗಳನ್ನು ದಾಖಲಿಸಿದ್ದಾಗಿ ಹೇಳಿದರು.
ತ್ರಿಭಾಷಾ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ಚಪ್ಪಾಳೆಗೆ ಬೆಲೆ ಇದೆ ಎಂಬುದು ನಿಜವಾದರೂ ಕೆಲವೊಂದು ರಾಜಕೀಯ ಕಾರ್ಯಕ್ರಮಗಳನ್ನು ಗಮನಿಸಿದಾಗ ಅಲ್ಲಿ ಚಪ್ಪಾಳೆ ಹೊಡೆಯಲೆಂದೇ ಜನರನ್ನು ಸೇರಿಸಿರುತ್ತಾರೆ ಎಂದು ವಿಷಾದಿಸಿದರು. ಚಪ್ಪಾಳೆಯನ್ನು ಪ್ರೋತ್ಸಾಹಕ್ಕಿಂತ ಬೇರೆ ಕಾರಣಗಳಿಗಾಗಿ ಬಳಸುತ್ತಾರೆ ಎಂದು ವಿಷಾದಿಸಿದರು. ಆಧುನಿಕ ದಿನಗಳಲ್ಲಿ ಮಕ್ಕಳಲ್ಲಿ ಶಿಸ್ತು ಕಡಿಮೆಯಾಗಿದೆ. ಮಕ್ಕಳಲ್ಲಿ ಅತೀ ಹೆಚ್ಚಿನ ಶಿಸ್ತು ಕೂಡ ಮಾರಕ ಎಂದು ಶೋಭಾ ಸುಬ್ಬಯ್ಯ ಕಿವಿಮಾತು ಹೇಳಿದರು. ಇತ್ತೀಚಿನ ಕೆಲವು ಲೇಖಕರ ಬರಹಗಳು ಸ್ವಂತಿಕೆ ಕಳೆದುಕೊಂಡಿದೆ. ಕಂಪ್ಯೂಟರ್ ಜ್ಞಾನದ ಮೂಲಕ ಬರೆದಂತೆ ಕಂಡುಬರುತ್ತಿದೆ. ಜಯಲಕ್ಷಿö್ಮ ಇದಕ್ಕೆ ಅಪವಾದ ಎಂಬAತೆ ನಮ್ಮ ಸುತ್ತಲಿನಲ್ಲಿಯೇ ಕಾಣುವ ಘಟನೆಗಳ ಆಧಾರದ ಮೇಲೆ ಲೇಖನ ಬರೆಯುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬರಹಗಳು ಕೇವಲ ಅಕ್ಷರಗಳ ಜೋಡಣೆಯಾಗದೆ ಜೀವಂತಿಕೆಯನ್ನು ತುಂಬಿರಬೇಕು ಎಂದರು.
ಚಿತ್ರದುರ್ಗದ ಸಿರಿಗನ್ನಡ ಬಳಗದ ಸಂಚಾಲಕ ಚಳ್ಳಕೆರೆ ಯರ್ರಿ ಸ್ವಾಮಿ ಮಾತನಾಡಿ, ಬರಹಗಾರರು ಪ್ರೋತ್ಸಾಹವನ್ನು ಸಮಾಜದಿಂದ ಸಹಜವಾಗಿಯೇ ನಿರೀಕ್ಷಿಸುತ್ತಾರೆ. ಮಾಧ್ಯಮಗಳ ಬೆಂಬಲ ಕೂಡ. ನವಪೀಳಿಗೆಯ ಲೇಖಕರಿಗೆ ಅತ್ಯಗತ್ಯ ಎಂದರಲ್ಲದೇ, ಮೊಬೈಲ್‌ನಿಂದ ಮಕ್ಕಳನ್ನು ದೂರವಿಡುವ ಅತ್ಯಗತ್ಯವಿದೆ ಎಂದು ಕರೆ ನೀಡಿದರು. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಮಕ್ಕಳು ಪುಸ್ತಕಗಳನ್ನು ಓದುವುದನ್ನೇ ಕಡಮೆ ಮಾಡಿದ್ದಾರೆ. ಇದರಿಂದಾಗಿ ಪೋಷಕರು, ಮಕ್ಕಳ ನಡುವಿನ ಭಾವನಾತ್ಮಕ ಸಂಬAಧ ಕಡೆಗಣಿಸಲ್ಪಡುತ್ತಿದೆ. ತಮ್ಮ ಪೋಷಕರಿಗೆ ಇತ್ತೀಚಿನ ತಂತ್ರಜ್ಞಾನದ ಬಗ್ಗೆ ಏನೂ ಗೊತ್ತಿಲ್ಲ ಎಂಬ ಭಾವನೆ ಮಕ್ಕಳಲ್ಲಿ ಮೂಡಿದ್ದು, ಹೀಗಾಗಿಯೇ ಹಿರಿಯರನ್ನು ನಿರ್ಲಕ್ಷö್ಯ ದೃಷ್ಟಿಯಿಂದ ಮಕ್ಕಳು ನೋಡುವಂತಾಗಿದೆ. ಈ ರೀತಿಯ ಕಲ್ಪನೆಗಳಿಗೆ ಅವಕಾಶ ಮಾಡಿಕೊಡದಂತೆ ಹಿರಿಯರು ಗಮನ ಹರಿಸಬೇಕೆಂದು ಅವರು ಸಲಹೆ ನೀಡಿದರು.
ಶಾಂತಹೆಗಡೆ ಸ್ವಾಗತಿಸಿ, ಸಂತೋಷ್ ಕುಡೆಕಲ್ ವಂದಿಸಿದ ಕಾರ್ಯಕ್ರಮವನ್ನು ಲೇಖಕಿ ಪ್ರತಿಮಾರೈ ನಿರೂಪಿಸಿದರು. ಗಾಯಕರಾದ ಚಿತ್ರಾ ಆರ್ಯನ್, ಅನ್ವಿತ್, ರೇಖಾ ಉಲ್ಲಾಸ್, ಶಾಂತಿ ಅಚ್ಚಯ್ಯ ಮತ್ತು ತಂಡದಿAದ ಹಾಡುಗಾರಿಕೆ ಜರುಗಿತು. ಲೇಖಕಿ ಕೆ.ಜಯಲಕ್ಷಿö್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.