ಸೋಮವಾರಪೇಟೆ, ಜೂ. ೧೮: ಪರಿಸರ ಸಂರಕ್ಷಣೆಯಲ್ಲಿ ಅರಣ್ಯಗಳು ಮಹತ್ತರ ಪಾತ್ರ ವಹಿಸಿದ್ದು, ಇವುಗಳ ಸಂರಕ್ಷಣೆಯಿAದ ಮಾತ್ರ ಮಾನವನ ಉಳಿವು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಅಭಿಪ್ರಾಯಿಸಿದರು.
ಸೋಮವಾರಪೇಟೆ ವಲಯ ಅರಣ್ಯ ಇಲಾಖೆ ಆಶ್ರಯದಲ್ಲಿ ಸಮೀಪದ ಯರಪಾರೆ ಗ್ರಾಮದಲ್ಲಿ ಆಯೋಜಿಸಿದ್ದ ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅರಣ್ಯ ಉಳಿದರೆ ಮಾತ್ರ ಜೀವ ಸಂಕುಲದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳ ಬೇಕೆಂದು ಶಾಸಕರು ಕಿವಿಮಾತು ನುಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್, ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್ ಹೆಚ್.ಪಿ. ಅವರುಗಳು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಬಿದಿರು ಗಿಡಗಳನ್ನು ನೆಡಲಾಯಿತು. ಹಲಸು, ತಾರಿ, ಹೊನ್ನೆ, ನೇರಳೆ, ಬೇಲ ಇನ್ನಿತರ ಮರಗಳ ಬೀಜಗಳನ್ನು ಬಿತ್ತಲಾಯಿತು. ಸುಮಾರು ೨೦೦೦ ಬೀಜ ದುಂಡೆಗಳನ್ನು ೧೦ ಎಕರೆ ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡಲಾಯಿತು.
ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ನಾಯಕ್, ಕುಶಾಲನಗರ ವಲಯದ ಅರಣ್ಯಾಧಿಕಾರಿ ಶಿವರಾಮ್, ಪುಷ್ಪಗಿರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ವಿಮಲ್ ಬಾಬು, ಗೋಣಿಮರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿದ್ದಲಿಂಗಪ್ಪ, ಮುಖ್ಯೋಪಾಧ್ಯಾಯ ನೂತನ್ ಕುಮಾರ್, ರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.