ಮಡಿಕೇರಿ, ಜೂ. ೧೮: ಭತ್ತದ ಬೀಜದಿಂದ ಬರುವ ಬೆಂಕಿರೋಗ, ಊದು ಬತ್ತಿರೋಗ, ಕಂದು ಎಲೆಚುಕ್ಕಿ ರೋಗ ಮತ್ತು ಹುಸಿಕಾಡಿಗೆ ರೋಗಾಣುಗಳು ಮಣ್ಣು, ನೀರು, ಗಾಳಿ, ಬಿತ್ತನೆ ಬೀಜ ಮತ್ತು ಇತರೆ ಮಾಧ್ಯಮಗಳಿಂದ ಬೀಜದ ಮುಖಾಂತರ ಪ್ರಸಾರಗೊಂಡು ರೈತರಿಗೆ ಅಪಾರ ಆರ್ಥಿಕ ಹಾನಿಯನ್ನು ಉಂಟುಮಾಡುತ್ತವೆ. ರೈತರು ಅತಿ ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಬೀಜದಿಂದ ಪ್ರಸಾರವಾಗುವ ಈ ರೋಗಗಳನ್ನು ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೀಜಗಳಿಗೆ, ಮೊಳಕೆಯೊಡೆಯುವ ಸಸಿಗಳಿಗೆ ಹಾಗೂ ಮುಂದಿನ ಸಸ್ಯ ಬೆಳವಣಿಗೆ ಹಂತದಲ್ಲಿ ಬರುವ ಅನೇಕ ರೋಗಗಳಿಂದ ರಕ್ಷಣೆ ಒದಗಿಸಬಹುದಾಗಿದೆ.
ಬೀಜದಿಂದ ಪ್ರಸಾರವಾಗುವ ಅನೇಕ ರೋಗಗಳಲ್ಲಿ ಹಾನಿಕಾರಕ ರೋಗಾಣುಗಳಾದ ಶಿಲೀಂಧ್ರ, ದುಂಡಾಣು ಮತ್ತು ನಂಜಾಣು ಸೂಕ್ಷö್ಮ ಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿ ಬೀಜಗಳು ಮೊಳಕೆಯೊಡೆಯುವಾಗ ಸಸಿಗಳು ಬೆಳೆಯುವಾಗ ಜೊತೆಯಲ್ಲೆ ಇದ್ದು ಬೆಳೆಯ ವಿವಿಧ ಬೆಳವಣಿಗೆಯ ಹಂತದಲ್ಲಿ ರೋಗವು ಉಲ್ಬಣಿಸಿ ಬೆಳೆಯ ಹಾನಿಗೆ ಕಾರಣವಾಗುತ್ತವೆ.
ಬೀಜೋಪಚಾರ ಮಾಡುವ ವಿಧಾನ: ಪ್ರತೀ ಎಕರೆಗೆ ಶಿಫಾರಸ್ಸು ಮಾಡಿದ ೨೫-೩೦ ಕೆ.ಜಿ. ಭತ್ತದ ಬೀಜವನ್ನು ತೆಗೆದುಕೊಂಡು ೧:೪ ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (೪ ಲೀ. ನೀರಿಗೆ ೧ ಕೆ.ಜಿ. ಉಪುö್ಪ) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು.
ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ ೨-೩ ಬಾರಿ ತಣ್ಣೀರಿನಲ್ಲಿ ತೊಳೆದು ಸುಮಾರು ೮ ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆÀಸಬೇಕು. ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ ೨೫-೩೦ ಕೆ.ಜಿ ಬಿತ್ತನೆ ಬೀಜಕ್ಕೆ ೧೦೦ ರಿಂದ ೧೨೦ ಗ್ರಾಂ ಕಾರ್ಬೆಂಡೆಜಿಮ್ ಅಥವಾ ೫೦ ರಿಂದ ೬೦ ಗ್ರಾಂ ಕಾರ್ಬೆಂಡೆಜಿಮ್ + ಮ್ಯಾಂಕೊಜೆಬ್ ಅಥವಾ ೫೦- ೬೦ ಗ್ರಾಂ ಟ್ರೆöÊಸೈಕ್ಲಜೋಲ್ ಎಂಬ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಒಂದು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮೊಳಕೆಯೊಡೆಯಲು ಇಟ್ಟು ನಂತರ ಸಸಿಮಡಿಗೆ ಉಪಯೋಗಿಸಬೇಕು.
ಬೀಜೋಪಚಾರ ಮಾಡುವಾಗ ಗಮನಿಸಬೇಕಾದ ಅಂಶಗಳು: ಶಿಫಾರಸು ಮಾಡಿದ ಶಿಲೀಂಧ್ರ ನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ ಬೀಜೋಪಚಾರ ಮಾಡಬೇಕು. ಬೀಜೋಪಚಾರ ಮಾಡಿದ ಬಿತ್ತನೆ ಬೀಜಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಎರಡು ಮೂರು ಶಿಲೀಂಧ್ರ ನಾಶಕಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡಬಾರದು. ಬಿತ್ತನೆ ಬೀಜಕ್ಕೆ ಬೀಜೋಪಚಾರ ಮಾಡುವ ಸಂದರ್ಭದಲ್ಲಿ ಕೈಗಳಿಗೆ ಪ್ಲಾಸ್ಟಿಕ್ ಚೀಲ ಅಥವಾ ಗ್ಲೌಸ್ಗಳನ್ನು ಬಳಸಿ ಬೀಜೋಪಚಾರ ಮಾಡಬೇಕು.
ಅಝೋಸ್ಪೆöÊರಿಲಂ: ಅಝೋಸ್ಪೆöÊರಿಲಂ ಎನ್ನುವ ಏಕಾಣುಗಳು ಭತ್ತದ ಬೆಳೆಯ ಬೇರಿನ ಹೊರವಲಯದಲ್ಲಿ ಜೀವಿಸಿ, ಸಾರಜನಕ ಸ್ಥಿರೀಕರಣ ಮಾಡುತ್ತವೆ. ಅಝೋಸ್ಪೆöÊರಿಲಂ ಜೀವಾಣು ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ನೇರವಾಗಿ ಸಾರಜನಕ ಲಭ್ಯವಾಗುವುದರಿಂದ ಜೊತೆಗೆ ಈ ಏಕಾಣುಗಳು ಹಾರ್ಮೋನುಗಳನ್ನು ಉತ್ಪನ್ನ ಮಾಡಿ ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುತ್ತವೆ. ಅಝೋಸ್ಪೆöÊರಿಲಂನಿAದ ಬೀಜೋಪಚಾರ ಮಾಡುವ ವಿಧಾನ ೫೦ ಗ್ರಾಂ ಬೆಲ್ಲ ಅಥವಾ ಸಕ್ಕರೆಯನ್ನು ಅರ್ಧ ಲೀಟರ್ ನೀರಿನಲ್ಲಿ ಕರಗಿಸಿ ೫ ನಿಮಿಷಗಳ ಕಾಲ ಕುದಿಸಿ ಅಂಟು ದ್ರಾವಣವನ್ನು ತಯಾರಿಸಬೇಕು. ತಣ್ಣಗಾದ ಬೆಲ್ಲ ಅಥವಾ ಸಕ್ಕರೆ ದ್ರಾವಣವನ್ನು ೨೫ ಕೆ.ಜಿ ಬಿತ್ತನೆ ಬೀಜದ ಮೇಲೆ ಸಮನಾಗಿ ಲೇಪಿಸಿ ನಂತರ ೪೦೦ ಗ್ರಾಂ ಅಝೋಸ್ಪೆöÊರಿಲಂ ಎಂಬ ಜೈವಿಕ ಗೊಬ್ಬರದಿಂದ ಮಿಶ್ರಣ ಮಾಡಿ, ಅರ್ಧಗಂಟೆ ನೆರಳಿನಲ್ಲಿ ಒಣಗಿಸಿ ಸಸಿಮಡಿಗೆ ಉಪಯೋಗಿಸಬೇಕು.
ಅಝೋಸ್ಪೆöÊರಿಲಂನ್ನು ನಾಟಿ ಮಾಡುವ ಪ್ರದೇಶದಲ್ಲಿ ಉಪಯೋಗ: ೮೦೦ ಗ್ರಾಂ ಅಝೋಸ್ಪೆöÊರಿಲಂ ಜೈವಿಕ ಗೊಬ್ಬರವನ್ನು ಪುಡಿಮಾಡಿದ ೧೦ ಕೆ.ಜಿ. ಕೊಟ್ಟಿಗೆ ಗೊಬ್ಬರ ಮತ್ತು ೧೦ ಕೆ.ಜಿ. ಮಣ್ಣಿನೊಡನೆ ಮಿಶ್ರಣಗೊಳಿಸಿ ಗದ್ದೆಗೆ ನಾಟಿ ಮಾಡುವ ಸಮಯದಲ್ಲಿ ಎರಚಬೇಕು.
ಅಝೋಸ್ಪೆöÊರಿಲಂನಿAದ ಸಸಿಗಳ ಉಪಚಾರ: ೬ ಅಡಿ ಉದ್ದ ಮತ್ತು ಅಗಲದ ಹೊಂಡವನ್ನು ಮಾಡಿ ಇದರಲ್ಲಿ ಮುಕ್ಕಾಲು ಅಡಿ ನೀರು ನಿಲ್ಲಿಸಿ ಅದರಲ್ಲಿ ೪೦೦ ಗ್ರಾಂ ಅಝೋಸ್ಪೆöÊರಿಲಂ ಜೈವಿಕ ಗೊಬ್ಬರವನ್ನು ಮಿಶ್ರಣಮಾಡಿ ಸಸಿ ಮಡಿಯಿಂದ ಕಿತ್ತ ಸಸಿಗಳ ಬೇರುಗಳನ್ನು ೧೦ ರಿಂದ ೧೫ ನಿಮಿಷಗಳ ಕಾಲ ಅದ್ದಿ ನಂತರ ನಾಟಿ ಮಾಡುವುದು.
ಈ ರೀತಿಯಾಗಿ ರೈತರು ಶಿಫಾರಸು ಮಾಡಿದ ಶಿಲೀಂಧ್ರನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ ಬೀಜೋಪಚಾರ ಮಾಡುವುದರಿಂದ ಬೀಜಗಳಿಂದ ಪ್ರಸಾರವಾಗುವ ಅನೇಕ ರೋಗಗಳನ್ನು ಅತಿ ಸುಲಭವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಹತೋಟಿ ಮಾಡಬಹುದಲ್ಲದೆ, ರೋಗರಹಿತ ಬೆಳೆಯಿಂದ ಅಧಿಕ ಇಳುವರಿಯನ್ನು ಪಡೆಯಬಹುದು.