ಕೂಡಿಗೆ, ಜೂ. ೧೬: ಸಮೀಪದ ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಬೀಜೋತ್ಸವ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸೋಮವಾರಪೇಟೆ ಪ್ರಾದೇಶಿಕ ವಲಯ ಮಡಿಕೇರಿ ವಿಭಾಗದ ಹಾಗೂ ಹುದುಗೂರು ಉಪ ವಲಯ ಅರಣ್ಯ ಇಲಾಖೆ, ಯಡವನಾಡು ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಏರ್ಪಡಿಸಿದ್ದ ಬೀಜೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಭೂಮಿಯ ನೈಸರ್ಗಿಕ ಸಮತೋಲನದಲ್ಲಿ ಅರಣ್ಯಗಳ ಪಾತ್ರ ದೊಡ್ಡದು. ಕಾಡಿದ್ದರೆ ನಾಡು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದರು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರು ಹಾಕಿದ ಸಿಬ್ಬಂದಿಗಳು ಬೀಜೋತ್ಸವದ ಮಹತ್ವದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಚೇತನ್, ಸಿದ್ದರಾಜು, ಭೀಮಣ್ಣ, ಮುಖ್ಯ ಶಿಕ್ಷಕಿ ಮಮತಾ, ಶಿಕ್ಷಕರಾದ ಲತಾಮಣಿ, ನಿರ್ಮಾಲ ಹಾಗೂ ಸಿಬ್ಬಂದಿಗಳು ಇದ್ದರು.