ಕೂಡಿಗೆ, ಜೂ. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಕೇಂದ್ರದ ಕಟ್ಟಡದ ಕಾಮಗಾರಿಯು ನೆನೆಗುದ್ದಿಗೆ ಬಿದ್ದಿದೆ, ಈ ಜಾಗದ ಸರ್ವೆ ಕಾರ್ಯವನ್ನು ನಡೆಸಿ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುವಂತೆ ಮದಲಾಪುರ, ಶಿರಹೊಳಲು ಗ್ರಾಮಸ್ಥರು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.
ಮದಲಾಪುರ ಗ್ರಾಮದಲ್ಲಿರುವ ಸರ್ವೆ ನಂಬರ್ ೧ರ ಊರುಗುಪ್ಪೆ ಜಾಗವನ್ನು ಸಮರ್ಪಕವಾಗಿ ಸರ್ವೆ ನಡೆಸಿ ಅದರ ಅಚ್ಚುಕಟ್ಟನ್ನು ಗುರುತಿಸಿ, ಅದೇ ಜಾಗದಲ್ಲಿರುವ ಉಪ ಆರೋಗ್ಯ ಕೇಂದ್ರ ಕಟ್ಟಡದ ಕಾಮಗಾರಿಯನ್ನು ಪೂರ್ಣ ಗೊಳಿಸಲು ಮತ್ತು ಈ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬದವರು ಮತ್ತು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ಸಾವಿರಾರು ಸಂಖ್ಯೆಯ ನಿವಾಸಿಗಳು ವಾಸಿಸು ತ್ತಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಗೆ ಉಪಆರೋಗ್ಯ ಕೇಂದ್ರ ಅವಶ್ಯಕತೆ ಇದೆ. ಅದರಿಂದಾಗಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಆರೋಗ್ಯ ಸೇವೆಯನ್ನು ಒದಗಿಸು ವಂತೆ ಗ್ರಾಮಸ್ಥರು ಮನವಿ ಮಾಡಿದರು. ಸಂಬAಧಿಸಿದ ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರ ಮಾಹಿತಿಯನ್ನು ತಿಳಿದು ಸರ್ವೆ ನಡೆಸಲು ಸೂಚನೆ ನೀಡಲಾಗುವುದು, ಅಲ್ಲದೆ ಪ್ರಮುಖವಾಗಿ ಆರೋಗ್ಯ ಕೇಂದ್ರದ ಕಾಮಗಾರಿಯನ್ನು ಪೂರ್ಣ ಗೊಳಿಸಲು ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ, ಕೆಪಿಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕಾಂಗ್ರೆಸ್ ಪಕ್ಷದ ಮುಖಂಡ ನಟೇಶ್ ಗೌಡ, ಗ್ರಾಮಸ್ಥರಾದ ಚಿದಂಬರ, ಧರ್ಮ, ವಿಜಯ, ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು