ಕುಶಾಲನಗರ, ಜೂ.೧೫: ಬೆಳಗಿನ ಜಾವ ಅಂಗಡಿ ಬದಿಯಲ್ಲಿರಿಸಿದ್ದ ದಿನ ಪತ್ರಿಕೆಗಳ ಬಂಡಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಚೋರನೊಬ್ಬನನ್ನು ಪತ್ತೆ ಮಾಡಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಕುಶಾಲನಗರ ಪಟ್ಟಣದಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಮಂಗಳೂರು, ಬೆಂಗಳೂರು ಕಡೆಯಿಂದ ದಿನನಿತ್ಯ ರಾಜ್ಯಮಟ್ಟದ ಪತ್ರಿಕಾ ಬಂಡಲ್‌ಗಳನ್ನು ಕುಶಾಲನಗರ ಪಟ್ಟಣಕ್ಕೆ ವಾಹನಗಳ ಮೂಲಕ ತರಲಾಗುತ್ತಿದ್ದು, ಕುಶಾಲನಗರದ ಬಸ್ ನಿಲ್ದಾಣದ ಮುಂಭಾಗದ ಪತ್ರಿಕಾ ವಿತರಕರ ಕೇಂದ್ರಕ್ಕೆ ತಲುಪಿಸಲಾಗುತ್ತದೆ. ಇತ್ತೀಚಿನ ಕೆಲವು ದಿನಗಳಲ್ಲಿ ದಿನಪತ್ರಿಕೆಗಳ ಬಂಡಲ್‌ಗಳು ಕಾಣೆಯಾಗುತ್ತಿರುವ ಪ್ರಕರಣಗಳು ನಡೆಯುತ್ತಿದ್ದು ಈ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಘಟನೆ ಬಗ್ಗೆ ಸ್ಥಳೀಯ ಸಿಸಿ ಕ್ಯಾಮೆರಾ ಮೂಲಕ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಬಂದು ಪತ್ರಿಕೆಗಳನ್ನು ಕಳವು ಮಾಡುತ್ತಿರುವ ದೃಶ್ಯಗಳು ದಾಖಲಾಗಿರುವುದು ಗೋಚರಿಸಿದೆ. ಈ ಚೋರನನ್ನು ಹಿಡಿಯಲು ಸ್ಥಳೀಯ ಹಿರಿಯ ಪತ್ರಿಕಾ ವಿತರಕರಾದ ಚಂದ್ರಯ್ಯ ಮತ್ತು ಬಳಗದವರು ಹೊಂಚು ಹಾಕಿ ಹಲವು ದಿನಗಳ ಕಾಲ ಕಾದರೂ ಚೋರನ ಸುಳಿವು ಪತ್ತೆಯಾಗಿರಲಿಲ್ಲ.

ಗುರುವಾರ ಬೆಳಗ್ಗೆ ಸುಮಾರು ನಾಲ್ಕು ಗಂಟೆಗೆ ಪತ್ರಿಕೆ ಸಾಗಿಸುವ ವಾಹನದ ಚಾಲಕ ರವಿ ಎಂಬವರಿಗೆ ಕುಶಾಲನಗರದ ಹಳೆ ಮಾರುಕಟ್ಟೆ ರಸ್ತೆಯ ನಿವಾಸಿ ಜಗ್ಗ ಎಂಬಾತ ಬಂಡಲ್‌ಗಳನ್ನು ಎಗರಿಸುವ ಸಂದರ್ಭ ಸಿಕ್ಕಿಹಾಕಿಕೊಂಡಿದ್ದಾನೆ. ಆತನನ್ನು ಪ್ರಶ್ನಿಸಿದಾಗ ತಾನು ಪತ್ರಕರ್ತನೆಂದು ನಕಲಿ ಗುರುತಿನ ಚೀಟಿ ತೋರಿಸಿದ್ದು, ಸ್ಥಳಕ್ಕೆ ಪತ್ರಿಕಾ ವಿತರಕರನ್ನು ಕರೆದು ಗೂಸಾ ನೀಡಿದಾಗ ಸತ್ಯ ಬಯಲಾಗಿದೆ.

ದಿನ ನಿತ್ಯ ಬರುತ್ತಿದ್ದ ೩೦೦ ರಿಂದ ೫೦೦ ಪತ್ರಿಕೆಗಳನ್ನು ಒಳಗೊಂಡ ಬಂಡಲ್‌ಗಳನ್ನು ಕದ್ದು ನಂತರ ಗುಜರಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ತಾನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಿಕೊAಡಿದ್ದು, ಆರೋಪಿಯನ್ನು ಕುಶಾಲನಗರ ಪೊಲೀಸರಿಗೆ ಒಪ್ಪಿಸಲಾಗಿದೆ , ಪತ್ರಿಕಾ ವಿತರಕ, ಪತ್ರಕರ್ತನ ಸೋಗಿನಲ್ಲಿರುವ ಆರೋಪಿ ಜಗ್ಗನ ಬಗ್ಗೆ ವಿಚಾರಣೆ ನಡೆಯುತ್ತಿದೆ.

- ಸಿಂಚು, ಟಿ. ಜಿ. ಸತೀಶ್