ಮಡಿಕೇರಿ, ಜೂ. ೧೩: ಭಾರತೀಯ ಅಂಚೆ ಇಲಾಖೆ ವತಿಯಿಂದ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿರುವ ಮನೆ ಮನೆಗೆ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ತಲಪಿಸುವ ಯೋಜನೆಗೆ ಚಾಲನೆ ನೀಡಲಾಯಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಸಂಸ್ಥೆಯ ಡೀನ್ ಡಾ. ಕೆ.ಬಿ. ಕಾರ್ಯಪ್ಪ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಕೊಡಗು ಅಂಚೆ ವಿಭಾಗದ ಅಧೀಕ್ಷಕ ಎಸ್.ಪಿ. ರವಿ ಮಾತನಾಡಿ; ಇನ್ನು ಮುಂದಕ್ಕೆ ಜಿಲ್ಲಾ ಕೇಂದ್ರ ಮಡಿಕೇರಿ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳ ಹಾಗೂ ಮೃತರಾದವರ ಪ್ರಮಾಣ ಪತ್ರವನ್ನು ಪಡೆಯಲು ಪದೇ ಪದೇ ಆಸ್ಪತ್ರೆಗೆ ಅಲೆದಾಡಬೇಕಿಲ್ಲ. ಪ್ರಮಾಣ ಪತ್ರಗಳು ಅಂಚೆ ಇಲಾಖಾ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಲಿದೆ. ಆ ಸಮಯದಲ್ಲಿ ಸ್ಪೀಡ್ ಪೋಸ್ಟ್ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಜಿಲ್ಲೆಯ ಆಯ್ದ ಆಸ್ಪತ್ರೆಗಳಿಗೆ ವಿಸ್ತರಣೆ ಮಾಡಲಾಗುವದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೊಡಗು ಅಂಚೆ ವಿಭಾಗದ ಉಪ ಅಧೀಕ್ಷಕ ಹೆಚ್.ಜೆ.ಸೋಮಯ್ಯ, ಮಡಿಕೇರಿ ಉಪ ವಿಭಾಗದ ನಿರೀಕ್ಷಕ ಬಿ.ಡಿ.ಮಂಜುನಾಥ್, ಅಂಚೆ ಇಲಾಖೆ ಹಾಗೂ ವೈದ್ಯಕೀಯ ಸಂಸ್ಥೆಯ ಪ್ರಮುಖರುಗಳು ಹಾಜರಿದ್ದರು.