ಗೋಣಿಕೊಪ್ಪಲು, ಜೂ. ೧೩: ಕೊಡಗು ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪೊನ್ನಂಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪಶುವೈದ್ಯ ಆಸ್ಪತ್ರೆಯ ಕಟ್ಟಡಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು. ಕರ್ನಾಟಕ ಸರ್ಕಾರದಿಂದ ಮಂಜೂರಾಗಿರುವ ರೂ. ೫೩ ಲಕ್ಷ ಅನುದಾನದಲ್ಲಿ ನೂತನ ಪಶುವೈದ್ಯ ಆಸ್ಪತ್ರೆಯು ನಿರ್ಮಾಣವಾಗಲಿದ್ದು ಸಾರ್ವಜನಿಕರಿಗೆ ಮುಂದಿನ ದಿನದಲ್ಲಿ ಇದರ ಸೇವೆ ಲಭ್ಯವಾಗಲಿದೆ ಎಂದು ಪಶುವೈದ್ಯ ಇಲಾಖೆಯ ಕೊಡಗು ಜಿಲ್ಲಾ ಉಪ ನಿರ್ದೇಶಕ ಡಾ. ಲಿಂಗರಾಜು ದೊಡ್ಡಮನಿ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿದರು.

ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಎ.ಎಸ್.ಪೊನ್ನಣ್ಣ, ಸರ್ಕಾರದ ಕಾರ್ಯಕ್ರಮಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು. ಕಾಮಗಾರಿಯ ಗುಣಮಟ್ಟ ಉತ್ತಮವಾಗಿರಬೇಕು. ಇಲಾಖೆಯು ತಿಳಿಸಿರುವ ನಿರ್ದೇಶನದಂತೆ ಕಾಮಗಾರಿಯು ೬ ತಿಂಗಳೊಳಗೆ ಪೂರೈಸಿ ನಾಗರಿಕರಿಗೆ ಇದರ ಪ್ರಯೋಜನ ದೊರೆಯಲು ಅನುವು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೊನ್ನಂಪೇಟೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎ.ಎಸ್. ಶಾಂತೇಶ್ ಹಾಗೂ ಶ್ರೀಮಂಗಲ ಪಶು ವೈದ್ಯಾಧಿಕಾರಿ ಬಿ.ಜಿ. ಗಿರೀಶ್ ತಾಲೂಕಿನಲ್ಲಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಕೊರತೆ ನಡುವೆ ಕೆಲಸ ನಿರ್ವಹಿಸುತ್ತಿದ್ದೇವೆ. ತಾವುಗಳು ಸರ್ಕಾರ ಮಟ್ಟದಲ್ಲಿ ಸಿಬ್ಬಂದಿಗಳ ನೇಮಕಾತಿ ಬಗ್ಗೆ ಗಮನ ಸೆಳೆಯಬೇಕೆಂದು ಮನವಿ ಮಾಡಿದರು. ಶಾಸಕರು ಆಸ್ಪತ್ರೆಯ ಒಳಭಾಗದಲ್ಲಿರುವ ಔಷಧಿಗಳನ್ನು ಪರಿಶೀಲಿಸಿದರು, ನಾಗರಿಕರಿಗೆ ಉತ್ತಮ ಸೇವೆ ನೀಡಲು ನಿರ್ದೇಶನ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೋಳೇರ ಭಾರತಿ, ಅಣ್ಣಿರ ಹರೀಶ್, ಕರ್ತಮಾಡ ರಶಿಕ, ಜುನೈದ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ಹಿರಿಯ ನಾಯಕರಾದ ಎರ್ಮು ಹಾಜಿ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಗಿರೀಶ್ ಮತ್ರಂಡ ದಿಲ್ಲು, ಅನೀಶ್, ಶಿವಕುಮಾರ್, ಸೇರಿದಂತೆ ಬಾಳೆಲೆ ಆಸ್ಪತ್ರೆಯ ಪಶು ವೈದ್ಯಾಧಿಕಾರಿಗಳಾದ ಜಿ.ಜಿ. ಭವಿಷ್ಯಕುಮಾರ್, ಕಾನೂರು ಆಸ್ಪತ್ರೆಯ ಡಾ.ಚಂದ್ರಶೇಖರ್ ನಿರೀಕ್ಷಕರಾದ ವಿ.ಎಂ. ಸ್ವಾತಿ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.