ಸೋಮವಾರಪೇಟೆ, ಜೂ.೧೩ : ತಾಲೂಕಿನ ಬಾಣಾವರ ಕಲ್ಲುಕೋರೆ ಕೆರೆಯಲ್ಲಿ ಅಂದಾಜು ೪೫ ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಗಡಿಭಾಗದ ಬಾಣಾವರ ಗ್ರಾಮದಲ್ಲಿನ ಮೀಸಲು ಅರಣ್ಯಕ್ಕೆ ಒಳಪಡುವ ಕಲ್ಲುಕೋರೆ ಕೆರೆಯಲ್ಲಿ ಇಂದು ಮಧ್ಯಾಹ್ನ ಸುಮಾರಿಗೆ ಮೃತದೇಹವೊಂದು ತೇಲುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಮೇರೆ, ಸ್ಥಳಕ್ಕಾಗಮಿಸಿದ ಪೊಲೀಸರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸದಸ್ಯರು ಶವವನ್ನು ಮೇಲೆತ್ತಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಮೃತದೇಹವನ್ನು ಸೋಮವಾರಪೇಟೆ ಶವಾಗಾರಕ್ಕೆ ಸಾಗಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆಯೇ ವ್ಯಕ್ತಿ ಕೆರೆಗೆ ಬಿದ್ದಿರ ಬಹುದೆಂದು ಅಂದಾಜಿಸಲಾಗಿದೆ. ಎರಡು ದಿನಗಳ ಹಿಂದೆ ಕೆರೆ ಸಮೀಪದ ಮೀಸಲು ಅರಣ್ಯದಲ್ಲಿ ಕೆಲ ವ್ಯಕ್ತಿಗಳು ಮೋಜಿನ ಪಾರ್ಟಿ ಮಾಡಿದ್ದು, ಈ ಪಾರ್ಟಿಯಲ್ಲಿದ್ದ ವ್ಯಕ್ತಿಯೋರ್ವರು ಕೆರೆಯಲ್ಲಿ ಮುಳುಗಿರಬಹುದು ಎಂದು ಸ್ಥಳೀಯರು ಸಂಶಯಿಸಿದ್ದಾರೆ. ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಸತ್ಯತೆ ತಿಳಿಯಬೇಕಿದೆ.