ವೀರಾಜಪೇಟೆ, ಜೂ. ೧೩: ರಾಜ್ಯ ಸರ್ಕಾರದ ನಗರೋತ್ಥಾನ ವಿಶೇಷ ಅನುದಾನದಲ್ಲಿ ವೀರಾಜಪೇಟೆ ನಗರದ ಸುಭಾಷ್ ನಗರದಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ರಾಜ್ಯ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಉದ್ಘಾಟಿಸಿದರು.

ರಸ್ತೆ ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ನಗರವು ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿದೆ. ನಗರದ ಹಲವಾರು ಸಮಸ್ಯೆಗಳು ಈ ಭಾಗದ ಜನತೆಯನ್ನು ಕಾಡುತ್ತಿದೆ. ರಸ್ತೆ, ಕುಡಿಯುವ ನೀರು, ಬೀದಿ ದೀಪ ಹೀಗೆ ಹಲವು ಸಮಸ್ಯೆಗಳಿವೆ. ಮಳೆಗಾಲ ಎದುರಾಗುತ್ತಿದೆ, ಪ್ರಸ್ತುತ ಭಾಗದಲ್ಲಿ ಮಳೆ ನೀರು ಸಂಗ್ರಹಗೊAಡು ಮುಳುಗಡೆಯ ಭೀತಿಯ ಆತಂಕ ಇದೆ. ಈ ನಿಟ್ಟಿನಲ್ಲಿ ಪುರಸಭೆಯ ಅಭಿಯಂತರರು ಮತ್ತು ಸಿಬ್ಬಂದಿಗಳು ತುರ್ತು ಕ್ರಮ ವಹಿಸಲು ಮುಂದಾಗಬೇಕು. ಅಲ್ಲದೆ ನಗರಾಭಿವೃದ್ಧಿಗೆ ಸರ್ಕಾರದೊಂದಿಗೆ ಚರ್ಚಿಸಿ ವಿಶೇಷ ಅನುದಾನ ತರುವಲ್ಲಿ ಪ್ರಯತ್ನಿಸುತ್ತೇನೆ. ನಗರ ಅಭಿವೃದ್ಧಿಯಲ್ಲಿ ಸರ್ವರು ಕೈಜೋಡಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ನಗರವು ವಿಶಾಲವಾಗಿ ಬೆಳೆಯುತ್ತಾ ಸಾಗಿದೆ, ಹಲವಡೆ ವಿವಿಧ ಸಮಸ್ಯೆಗಳನ್ನು ನಗರದ ಜನತೆ ಎದುರಿಸುತ್ತಿದ್ದಾರೆ. ಸರ್ವರಿಗೂ ಸೌಕರ್ಯಗಳು ಒದಗಿಸುವುದು ಸರ್ಕಾರದ ಕೆಲಸ. ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಪುರಸಭೆಯ ಸದಸ್ಯ ಮೊಹಮ್ಮದ್ ರಾಫಿ ಸುಭಾಶ್ ನಗರದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರುಗಳಿಗೆ ವಿವರಿಸಿದರು.

ಪುರಸಭೆಯ ಅಭಿಯಂತರರಾದ ಹೇಮ ಕುಮಾರ್ ಅನುದಾನ ಹಂಚಿಕೆ, ಕಾಮಗಾರಿಗಳಿಗೆ ವೆಚ್ಚವಾದ ಅಂಕಿ ಅಂಶಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ರಸ್ತೆ ಕಾಮಗಾರಿಗಳ ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್, ಪುರಸಭೆಯ ಅಧ್ಯಕ್ಷೆ ಸುಶ್ಮಿತಾ, ಸದಸ್ಯರಾದ ಹೆಚ್.ಎಸ್ ಮತೀನ್, ಜೂನಾ ಸುನೀತಾ, ದೇಚಮ್ಮ ಕಾಳಪ್ಪ, ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಸಿಬ್ಬಂದಿಗಳು, ಗುತ್ತಿಗೆದಾರ, ನಾಮೇರ ಬಿ. ನವೀನ್, ನಿಶಾಂಕ್, ಮತ್ತು ನಾಗರಿಕರು ಹಾಜರಿದ್ದರು.