ಗೋಣಿಕೊಪ್ಪ, ಜೂ. ೧೩: ಮಳೆ ಬಂತು, ವಿದ್ಯುತ್ ಕೈಕೊಡ್ತು ಎಂದರೆ ದಕ್ಷಿಣ ಕೊಡಗಿನಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರನ್ನು ಸಂಪರ್ಕಕ್ಕೆ ಸಿಗುವುದೇ ಅಸಾಧ್ಯ! ಸಣ್ಣ ಗಾಳಿ ಮಳೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಕಂಡುಬರುವ ಕೊಡಗಿನ ಪರಿಸ್ಥಿತಿಯಲ್ಲಿ ಬಿಎಸ್ ಎನ್‌ಎಲ್ ಸಂಸ್ಥೆ ತನ್ನ ಗ್ರಾಹಕರಿಗೆ ಪೂರಕ ವ್ಯವಸ್ಥೆ ಕಲ್ಪಿಸುವಲ್ಲಿ ಎಡವುತ್ತಿದೆ. ತಿತಿಮತಿ, ಕೋಣನಕಟ್ಟೆ, ಬಾಳೆಲೆ, ಕುಟ್ಟ, ಕುಂದ, ಪೊನ್ನಂಪೇಟೆ, ಮಾಯಮುಡಿ, ಕಿರುಗೂರು, ಬಲ್ಯಮುಂಡೂರು ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಗ್ರಾಹಕರನ್ನು ನಿರಂತರವಾಗಿ ಕಾಡುತ್ತಿದೆ.
ಪದೇ ಪದೇ ಎದುರಾಗುವ ಸಮಸ್ಯೆಯನ್ನು ಬಗೆ ಹರಿಸುವಂತೆ ಗ್ರಾಹಕರು ದೂರು ನೀಡಿದರು, ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಖಾಸಗಿ ಒಡೆತನದ ನೆಟ್‌ವರ್ಕ್ ಸಂಸ್ಥೆಗಳ ವೇಗಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದ ಬಿಎಸ್‌ಎನ್‌ಎಲ್ ಸಂಸ್ಥೆ ಗ್ರಾಹಕರಿಗೆ ಶ್ರೇಷ್ಠ ಸೇವೆ ನೀಡುವಲ್ಲಿ ವಿಫಲತೆಯ ಹೆಜ್ಜೆಯಲ್ಲಿ ಸಾಗುತ್ತಿದೆ.
ಕರೆಂಟ್ ಕೈಕೊಟ್ಟ ಸಂದರ್ಭದಲ್ಲಿ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಕೇಂದ್ರ ಕಛೇರಿಗೆ ಒಳಪಡುವ ಹನ್ನೊಂದು ಶಾಖೆಗಳು ತನ್ನ ಗ್ರಾಹಕರಿಗೆ ನೆಟ್‌ವರ್ಕ್ ಸಮಸ್ಯೆಯ ಒತ್ತಡವನ್ನು ನೀಡುತ್ತಿದೆ. ವಿದ್ಯುತ್ ವಿತರಣೆ ಸ್ಥಗಿತಗೊಂಡ ತಕ್ಷಣ ನೆಟ್‌ವರ್ಕ್ ಸಂಪರ್ಕ ಕಲ್ಪಿಸಲು ಪ್ರತಿ ಶಾಖೆಯಲ್ಲಿ ಜನರೇಟರ್ ವ್ಯವಸ್ಥೆ ಇದ್ದರು, ಜನರೇಟ್ ಚಾಲನೆ ಮಾಡುವಲ್ಲಿ ಸಿಬ್ಬಂದಿಯ ಕೊರತೆ ಇದೆ. ಪ್ರತಿ ತಿಂಗಳು ಜನರೇಟರ್ ಚಾಲನೆಗೆ ಸುಮಾರು ೩೫ ಲೀಟರ್‌ನಷ್ಟು ಡೀಸೆಲ್ ಖರೀದಿಸುವ ಸಂಸ್ಥೆ ಅದರ ಸದ್ಬಳಕೆ ಮಾಡಿಕೊಂಡು ಗ್ರಾಹಕರಿಗೆ ಸೇವೆ ನೀಡುವಲ್ಲಿ ವಿಫಲ ಪ್ರಯತ್ನ ಸಾಗಿದೆ. ಆದರೆ, ಪ್ರತಿ ತಿಂಗಳು ಖರೀದಿಸುವ ೩೫ ಲೀಟರ್
(ಮೊದಲ ಪುಟದಿಂದ) ಡೀಸೆಲ್ ಬಿಲ್ ಮಾತ್ರ ಸಕಾಲದಲ್ಲಿ ಪಾವತಿಯಾಗುತ್ತಿದೆ. ಡೀಸೆಲ್ ಮಾತ್ರ ಬಳಕೆಯಾಗುತ್ತಿಲ್ಲ! ವಿದ್ಯುತ್ ಸ್ಥಗಿತಗೊಂಡ ಸಂದರ್ಭದಲ್ಲಿ ನೆಟ್‌ವರ್ಕ್ ಗ್ರಾಹಕರಿಗೆ ಸಿಗುತ್ತಿಲ್ಲ. ಹಾಗಾದರೆ, ಡೀಸೆಲ್‌ಗೆಂದು ಪಾವತಿಯಾಗುವ ಹಣ ಎಲ್ಲಿ ಪೋಲಾಗುತ್ತಿದೆ ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.
ಈ ಬಗ್ಗೆ ಗಂಭೀರವಾದ ತನಿಖೆ ಆಗಬೇಕೆಂಬುದು ಬಿಎಸ್‌ಎನ್‌ಎಲ್ ಗ್ರಾಹಕರ ಒತ್ತಾಯವಾಗಿದೆ. ಬೀದಿಗಳ ಬದಿಯಲ್ಲಿ ಸಿಮ್‌ಗಳನ್ನು ಮಾರಾಟ ಮಾಡುವ ಬಿಎಸ್‌ಎನ್‌ಎಲ್ ಸಿಬ್ಬಂದಿಗಳು, ನಂತರ ಗ್ರಾಹಕರಿಗೆ ನೀಡುವ ಸೇವೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ.
ಈ ಭಾಗದ ಹನ್ನೊಂದು ಶಾಖೆಗಳಲ್ಲಿ ಜನರೇಟರ್ ನಿರ್ವಹಣೆ ಮಾಡಲು ಒಬ್ಬನೇ ಸಿಬ್ಬಂದಿ ನೇಮಕವಾಗಿದ್ದು, ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ತೆರಳಲು ಕನಿಷ್ಟ ಎಂದರು ಐದರಿಂದ ಹತ್ತು ಕಿಲೋಮೀಟರ್ ಅಂತರವಿದೆ.
ಒAದು ಕಡೆ ಕರೆಂಟ್ ಹೋದ ಗಳಿಗೆಯಲ್ಲಿ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತಿಲ್ಲ. ಹೀಗಾಗಿ ಸಕಾಲದಲ್ಲಿ ಜನರೇಟರ್‌ಗೆ ಚಾಲನೆ ಸಿಗುತಿಲ್ಲ. ಸಂಸ್ಥೆಯನ್ನು ನಿಭಾಯಸಲು ಖಾಸಗಿತನಕ್ಕೆ ನೀಡಿದರ ಪರಿಣಾಮದ ಫಲವೇ ಗ್ರಾಹಕರನ್ನು ನೆಟ್‌ವರ್ಕ್ ಸಮಸ್ಯೆಯಲ್ಲಿ ಬಳಲುವಂತೆ ಮಾಡುತ್ತಿದೆ. ಗ್ರಾಹಕರು ನೆಟ್‌ವರ್ಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದು ಬಿಎಸ್‌ಎನ್‌ಎಲ್‌ನಿಂದ ಖಾಸಗಿ ಸಂಸ್ಥೆಗಳಿಗೆ ಪೋರ್ಟ್ ಆಗಲು ಬಯಸಿದ್ದಾರೆ. ತನ್ನ ಗ್ರಾಹಕರನ್ನು ಕಾಯ್ದುಕೊಳ್ಳಲು ಉತ್ತಮ ಸೇವೆ ನೀಡುವತ್ತ ಅಧಿಕಾರಿಗಳು ಚಿತ್ತ ಹರಿಸಬೇಕಾಗಿದೆ. ಇಲ್ಲವಾದಲ್ಲಿ ಸಂಪೂರ್ಣವಾಗಿ ತನ್ನ ಗ್ರಾಹಕರನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ನರಳಬೇಕಾದ ಪರಿಸ್ಥಿತಿ ಎದುರಾಗಲಿದೆ.
-ಎನ್.ಎನ್. ದಿನೇಶ್