ಹೆಚ್.ಜೆ. ರಾಕೇಶ್

ಮಡಿಕೇರಿ, ಜೂ. ೧೨: ೨೦೦ ಯೂನಿಟ್ ಉಚಿತ ವಿದ್ಯುತ್ ದೊರೆಯುವ ಆಸೆಯಲ್ಲಿದ್ದ ಜನರು ಇಂದು ವಿದ್ಯುತ್ ಬಿಲ್ ನೋಡಿ ‘ಶಾಕ್’ಗೆ ಒಳಗಾಗಿದ್ದಾರೆ. ವಿದ್ಯುತ್ ದರದಲ್ಲಿ ಗಣನೀಯ ಏರಿಕೆಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಕೆಲವರಿಗಂತೂ ಮಾಸಿಕ ಬರುತ್ತಿದ್ದ ಬಿಲ್‌ಗಿಂತ ದುಪ್ಪಟ್ಟು ಬಂದಿರುವುದರಿAದ ಆಘಾತಕ್ಕೆ ಒಳಗಾಗಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಇದೀಗ ವಿದ್ಯುತ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿವಿಧ ಸ್ತರದ ವಿದ್ಯುತ್ ದರವನ್ನು ಹೆಚ್ಚಿಸಿದೆ. ನಿಗದಿತ ದರ, ಯೂನಿಟ್ ದರಗಳು ಹೆಚ್ಚಳ ಮಾಡಿ ನಷ್ಟವನ್ನು ಸರಿದೂಗಿಸಲು ದರ ಪರಿಷ್ಕರಿಸಿದ ಪರಿಣಾಮ ಮೇ ತಿಂಗಳ ಬಿಲ್ ಮೊತ್ತ ಹೆಚ್ಚಾಗಿ ಜನರ ಮೇಲೆ ಹೊರೆ ಬಿದ್ದಿದೆ.

ವಿಧಾನಸಭಾ ಚುನಾವಣಾ ಫಲಿತಾಂಶ ಹಿಂದಿನ ದಿನದಂದು ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗ ವಿದ್ಯುತ್ ದರ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿತ್ತು. ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಇದು ನಮ್ಮ ನಿರ್ಧಾರವಲ್ಲ. ಬಿಜೆಪಿಯ ನಿರ್ಧಾರ ಎಂದರೆ ಬಿಜೆಪಿ ಕಾಂಗ್ರೆಸ್ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ. ಇದರ ನಡುವೆ ಜನರು ಸಂದಿಗ್ಧ ಪರಿಸ್ಥಿತಿಗೆ ಒಳಗಾಗಿ ಹೈರಾಣಾಗಿದ್ದಾರೆ.

ಕೊಡಗಿನಲ್ಲಿ ಜನಾಕ್ರೋಶ

ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತವಾಗಿದೆ. ಚೆಸ್ಕಾಂ ಈ ರೀತಿ ದಿಢೀರ್ ದರ ಏರಿಸಿರುವುದರಿಂದ ಸಮಸ್ಯೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದು, ದರ ಇಳಿಕೆಗೆ ಆಗ್ರಹಿಸಿದ್ದಾರೆ.

ನಿಗದಿತ ದರ, ಯೂನಿಟ್ ವೆಚ್ಚ, ಎನರ್ಜಿ ಚಾರ್ಜ್ ಸೇರಿದಂತೆ ವಿವಿಧ ವೆಚ್ಚಗಳನ್ನು ಹೆಚ್ಚಿಸಿ ವಿದ್ಯುತ್ ಗ್ರಾಹಕರು ಆರ್ಥಿಕ ಹೊಡೆತಕ್ಕೆ ಸಿಲುಕಿದ್ದಾರೆ. ಇದರೊಂದಿಗೆ ವಾಣಿಜ್ಯ ಹಾಗೂ ಕೈಗಾರಿಕಾ ವಲಯಗಳಲ್ಲಿಯೂ ದರ ಹೆಚ್ಚಿಸಿದ ಪರಿಣಾಮ ಬಿಲ್ ಸಾವಿರಾರು ರೂಪಾಯಿ ಹೆಚ್ಚಳವಾಗಿದೆ.

ಸಂಸ್ಥೆಯೊAದಕ್ಕೆ ಮಾಸಿಕ ಗರಿಷ್ಠ ಬರುತ್ತಿದ್ದ ರೂ. ೮ ಸಾವಿರ ವಿದ್ಯುತ್ ಬಿಲ್ ಈ ತಿಂಗಳು ೧೪ ಸಾವಿರಕ್ಕೆ ಏರಿದೆ. (ಮೊದಲ ಪುಟದಿಂದ) ಇನ್ನಿತರ ಅನೇಕರಿಗೆ ಇದೇ ರೀತಿ ಅನುಭವವಾಗಿ ಚೆಸ್ಕಾಂ ಯಾವುದಕ್ಕೂ ಸರಿಯಾದ ಉತ್ತರ ನೀಡದೆ ಮೌನವಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಆರ್ಥಿಕ ಸಂಕಷ್ಟ - ದರ ಹೆಚ್ಚಳದ ಬಿಸಿ

ಗೃಹಬಳಕೆ ಹಾಗೂ ವಾಣಿಜ್ಯೋದ್ಯಮ ಬಳಕೆಯ ವಿದ್ಯುತ್ ದರ ಹೆಚ್ಚಳದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಹೊಟೇಲ್, ಹೋಂಸ್ಟೇ, ಅಂಗಡಿಗಳು ಸೇರಿದಂತೆ ವಿವಿಧ ಸ್ತರದ ವಿದ್ಯುತ್ ದರ ಏರಿಕೆಯಿಂದ ದರ ಹೆಚ್ಚಳ ಮಾಡುವ ಪರಿಸ್ಥಿತಿ ಬಂದೊದಗಿದೆ.

ಕುಶಾಲನಗರದ ಹೊಟೇಲ್ ಒಂದಕ್ಕೆ ಮೊದಲು ಬರುತ್ತಿದ್ದ ವಿದ್ಯುತ್ ದರಕ್ಕಿಂತ ರೂ. ೨೦ ಸಾವಿರ ಹೆಚ್ಚು ಬಂದಿದೆ. ಇದೇ ರೀತಿ ಅನೇಕ ಕಡೆಗಳಲ್ಲಿ ವಿದ್ಯುತ್ ದರ ಬಂದಿದೆ. ದರ ಹೆಚ್ಚಳದಿಂದ ಹೊಟೇಲ್ ಮಾಲೀಕರು ಊಟದ ದರವನ್ನು ಹೆಚ್ಚಿಸುವ ನಿರ್ಧಾರಕ್ಕೆ ಬರುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ದರ ಏರಿಕೆಯಿಂದ ಫ್ರಿಡ್ಜ್ನಲ್ಲಿಟ್ಟು ಮಾರುವ ಮಾಂಸ, ಮೀನಿನ ದರದಲ್ಲೂ ಏರಿಕೆ ಕಾಣಬಹುದು. ವಿದ್ಯುತ್ ಅವಲಂಬಿತ ಉದ್ಯಮದ ದರಗಳು ಹೆಚ್ಚಿಗೆ ಆಗುವ ಲಕ್ಷಣಗಳಿವೆ. ಇದರ ಪರಿಣಾಮ ಜನಸಾಮಾನ್ಯರಿಗೆ ಆರ್ಥಿಕ ಹೊಡೆತ ಬೀಳುವ ಆತಂಕ ಸೃಷ್ಟಿಯಾಗಿದೆ. ಹೋಂಸ್ಟೇ ಸಂಸ್ಥೆಯ ಮಾಜಿ ಪದಾಧಿಕಾರಿ ಕರುಂಬಯ್ಯ ಅವರ ಪ್ರಕಾರ ಜಿಲ್ಲೆಯ ಹೋಂಸ್ಟೇಗಳಿಗೂ ಈ ವಿದ್ಯುತ್ ದರ ಏರಿಕೆ ನುಂಗಲಾರದ ತುತ್ತಾಗಿದೆ.