ಪೆನ್ನು, ಪುಸ್ತಕ, ಹಿಡಿಯಬೇಕಾದ ಪುಟ್ಟ ಕೈಗಳು ಸಮಾಜದಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿವೆ.

ವಿಶ್ವದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ೨೦೦೨ ರಿಂದ ಪ್ರತೀ ವರ್ಷ ಜೂನ್ ೧೨ ವಿಶ್ವದಾದ್ಯಂತ "ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ" ದಿನವನ್ನು ಆಚರಿಸುತ್ತಾ ಬರುತ್ತಿದ್ದೇವೆ.

ಆದರೂ ಕೂಡ ಸಮಾಜದಲ್ಲಿ ಬಡತನ, ಪೋಷಕರ ಅನಕ್ಷರತೆ, ನಿರ್ಲಕ್ಷö್ಯ, ಅನಾರೋಗ್ಯ, ತಂದೆ-ತಾಯಿಯ ಅಕಾಲಿಕ ನಿಧನ, ಕುಟುಂಬಗಳ ಶೋಷಣೆಗಳಿಗೆ ಒಳಗಾಗಿ ೧೪ ವರ್ಷದ ಒಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ದುಡಿಮೆಯಲ್ಲಿ ತೊಡಗಿಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ೨೨ ಬಾಲ ಕಾರ್ಮಿಕರು ಹಾಗೂ ೧೮ ಕಿಶೋರ ಕಾರ್ಮಿಕರನ್ನು ಪತ್ತೆಹಚ್ಚಿ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ರಕ್ಷಿಸಿವೆ.

ತೋಟದಲ್ಲಿ ಬಾಲ ಕಾರ್ಮಿಕರು: ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ತೋಟಗಳಲ್ಲಿ ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಪೋಷಕರೊಂದಿಗೆ ಮಕ್ಕಳು ಕೂಡ ತೋಟದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ತೋಟಗಳಲ್ಲಿನ ಲೈನ್ ಮನೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರು ಬಾಲ್ಯದಿಂದಲೇ ಶಿಕ್ಷಣದಿಂದ ವಂಚಿತರಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅದಲ್ಲದೇ ೧೪ ವರ್ಷದ ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಿ ಗ್ಯಾರೇಜ್ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಯ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಗ್ಯಾರೇಜ್‌ಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಮಕ್ಕಳನ್ನು ಪತ್ತೆಹಚ್ಚಿ ಮರಳಿ ಶಾಲೆಗೆ ಸೇರಿಸಿವೆ.

೧೬ ವರ್ಷದಿಂದ ೧೮ ವರ್ಷದವರೆಗಿನ ಮಕ್ಕಳನ್ನು ಕಿಶೋರ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ೧೮ ಕಿಶೋರ ಕಾರ್ಮಿಕರು ಕೂಡ ಪತ್ತೆಯಾಗಿದ್ದಾರೆ.

ದುಶ್ಚಟಗಳಿಗೆ ಬಲಿಯಾಗುತ್ತಿರುವ ಮಕ್ಕಳು...!

ಬಾಲ್ಯದಿಂದಲೇ ಶಿಕ್ಷಣದಿಂದ ವಂಚಿತರಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡಿರುವ ಬಾಲ ಕಾರ್ಮಿಕರು ದುಶ್ಚಟಗಳಿಗೆ ದಾಸರಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಕಳೆದ ಐದು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಪತ್ತೆಯಾಗಿರುವ ೨೨ ಬಾಲ ಕಾರ್ಮಿಕರಲ್ಲಿ ಬಹುತೇಕರು ತೋಟ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಪತ್ತೆಯಾದ ಬಾಲ ಕಾರ್ಮಿಕರು ಧೂಮಪಾನ ಹಾಗೂ ಮದ್ಯಪಾನಕ್ಕೆ ದಾಸರಾಗಿದ್ದರು ಎಂದು ತಿಳಿದು ಬಂದಿದೆ.

ಶಿಕ್ಷಣದಿAದ ವಂಚಿತರಾಗಿ ಬಾಲ್ಯಕಾರ್ಮಿಕರಾಗಿ, ಹಣ ಕೈ ಸೇರುವಾಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದಲ್ಲದೇ ಬಾಲ್ಯದಲ್ಲೇ ದುಡಿಮೆಯಲ್ಲಿ ಹಣ ಕೈ ಸೇರುವುದರಿಂದ ಶಿಕ್ಷಣದ ಕಡೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಇದುವರೆಗೆ ಜಿಲ್ಲೆಯ ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಅತೀ ಹೆಚ್ಚಾಗಿ ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ.

ಕೋವಿಡ್ ನಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಬಾಲ ಕಾರ್ಮಿಕರಾಗಿದ್ದಾರೆ. ಕೊಡಗು ಜಿಲ್ಲೆ ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಲು ಎಲ್ಲರೂ ಕೈಜೋಡಿಸಬೇಕಾಗಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ