ಮಕ್ಕಳ ದಿನನಿತ್ಯದ ಹಾಗೂ ದೀರ್ಘಾವಧಿ ದುಡಿಮೆಯ ಉದ್ಯೋಗವನ್ನು ಬಾಲ ಕಾರ್ಮಿಕತೆ ಎಂದು ಕರೆಯಲಾಗುತ್ತದೆ. ೫ ವರ್ಷದಿಂದ ೧೪ ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕಾರ್ಖಾನೆ, ಹೊಲ-ಗದ್ದೆ, ಶ್ರೀಮಂತರ ಮನೆಗಳಲ್ಲಿ ಕಡಿಮೆ ಸಂಬಳಕ್ಕೆ ಹೆಚ್ಚು ಸಮಯ ತಮ್ಮ ದೈಹಿಕ ಆರೋಗ್ಯದ ರಕ್ಷಣೆಯನ್ನು ನಿರ್ಲಕ್ಷಿಸಿ ದುಡಿಯುತ್ತಾರೆ. ಕೆಲವು ಕಡೆ ದಿನಕ್ಕೊಂದು ಬಾರಿ ಸರಿಯಾದ ಊಟ ನೀಡದೇ ದುಡಿಸಿಕೊಳ್ಳುವ ಮಾಲೀಕರು ಇರುವರು. ಸರಿಯಾದ ಮಾರ್ಗದರ್ಶನ ಇಲ್ಲದೇ ಕೆಲಸದಲ್ಲಿ ತೊಡಗಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.

ಮೂಲಭೂತ ಸೌಕರ್ಯದಿಂದ ವಂಚಿತರಾಗಿ ಅದನ್ನು ಗಳಿಸುವ ಸಲುವಾಗಿ ಮಕ್ಕಳು ದುಡಿಯಲು ಮುಂದಾಗುತ್ತಾರೆ. ತಮ್ಮ ದುಡಿಮೆಯ ಹಣವನ್ನು ದುರುಪಯೋಗ ಪಡಿಸಿಕೊಳ್ಳುವರು. ಕೆಟ್ಟ ಚಟಗಳಿಗೆ ದಾಸರಾಗುವರು. ಬಾಲ ಕಾರ್ಮಿಕ ಪದ್ಧತಿ ಜಾಗತಿಕ ಸಮಸ್ಯೆಯಾಗಿದ್ದು, ಇದು ಅಭಿವೃದ್ಧಿಶೀಲ ರಾಷ್ಟçಗಳಲ್ಲಿ ಸಾಮಾನ್ಯವಾಗಿದೆ. ಬಡತನದ ರೇಖೆಗಿಂತ ಕೆಳಗಿರುವ ಜನರು ತಮ್ಮ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸಲು ಸಾಧ್ಯವಾಗದೇ ಮಕ್ಕಳನ್ನು ದುಡಿಯಲು ಕಳುಹಿಸುವರು.

ಹಾಗಾಗಿ ನಮ್ಮ ಸರಕಾರ ೫ ವರ್ಷದಿಂದ ೧೪ ವರ್ಷದವರೆಗೆ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ಶಾಲೆಯಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ, ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ ಪೌಷ್ಟಿಕಾಂಶಗಳ ಕೊರತೆಯಿಂದ ಮಕ್ಕಳ ಆರೋಗ್ಯದ ರಕ್ಷಣೆಕಡೆ ಗಮನ ಹರಿಸುವಲ್ಲಿ ಶಿಕ್ಷಣ ಇಲಾಖೆ ಪ್ರಮುಖ ಪಾತ್ರ ವಹಿಸಿದೆ.

ಶಾಲೆಯಿಂದ ಹೊರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವ ಪ್ರಯತ್ನವನ್ನು ಶಿಕ್ಷಕರು ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ವಸತಿ ಶಾಲೆಗಳನ್ನು ಆರಂಭಿಸಿವೆ.

ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ರಕ್ಷಿಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಇದನ್ನು ಬೇರು ಸಮೇತ ಕಿತ್ತೊಗೆಯಬೇಕು. ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೆಷನ್ (ಐ.ಎಲ್.ಓ.) ೨೦೨೨ರ ಜೂನ್ ೧೨ ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನವನ್ನು ಆಚರಿಸಲು ಪ್ರಾರಂಭಿಸಿತು.

- ಬಿ.ಯು. ಯಶೋಧ, ಶ್ರೀಮಂಗಲ.