ವೀರಾಜಪೇಟೆ, ಜೂ. ೧೦: ಮಳೆಗಾಲದಲ್ಲಿ ಅವಶ್ಯಕತೆ ಉಂಟಾದಾಗ ಕಾಳಜಿ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಕೇಂದ್ರಗಳನ್ನು ಗುರುತಿಸಿ. ಅಪಾಯ ಪ್ರದೇಶದ ನಿವಾಸಿಗಳಿಗೆ ಅನಾವಶ್ಯಕ ಭಯಪಡಿಸುವ ಕೆಲಸ ಮಾಡಬೇಡಿ, ಅಗತ್ಯ ಬಿದ್ದಾಗ ಅವರನ್ನು ಸ್ಥಳಾಂತರಿಸುವ ಕೆಲsಸ ಮಾಡುವಂತೆ ಶಾಸಕ ಎ.ಎಸ್. ಪೊನ್ನಣ್ಣ ಸೂಚನೆ ನೀಡಿದರು.
ಇಲ್ಲಿನ ಪುರಭವನದಲ್ಲಿ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ವೀರಾಜಪೇಟೆ ಮತ್ತು ಮಡಿಕೇರಿಯ ಇಲಾಖಾಧಿಕಾರಿಗಳ ಸಭೆ ನಡೆಯಿತು.
ವೀರಾಜಪೇಟೆ ಅಯ್ಯಪ್ಪ ಬೆಟ್ಟದಿಂದ ಸ್ಥಳಾಂತರಗೊಳಿಸ ಬೇಕಾದವರಿಗೆ ಅಂಬಟ್ಟಿ ಬಳಿ ನಿವೇಶನದ ಬಗ್ಗೆ ಪ್ರಸ್ತಾಪಿಸಿದ ಪೊನ್ನಣ್ಣ ಅಲ್ಲಿ ಅರಣ್ಯ ಇಲಾಖೆ ಮರ ತೆರವು ಬಗ್ಗೆ ನಿಧಾನಗತಿ ಕೆಲಸ ಮಾಡುತ್ತಿರುವುದಕ್ಕೆ ಆಕ್ಷೇಪಿಸಿ ತಕ್ಷಣ ಈ ನಿಟ್ಟಿನಲ್ಲಿ ಮರ ತೆರವಿಗೆ ಕ್ರಮಕ್ಕೆ ಸೂಚಿಸಿ ಇಲಾಖೆಯ ಬೇಜವಾಬ್ದಾರಿ ನಡೆಯನ್ನು ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೆಸ್ಕ್ ವೀರಾಜಪೇಟೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಮಾಹಿತಿ ನೀಡಿ ಬಿಟ್ಟಂಗಾಲದಲ್ಲಿ ಕಂಬಗಳ ತಯಾರಿಕ ಕೇಂದ್ರ ಇರುವ ಹಿನ್ನೆಲೆ ವಿದ್ಯುತ್ ಕಂಬಗಳ ಸಮಸ್ಯೆ ಇಲ್ಲ. ಆದರೆ ಸಿಬ್ಬಂದಿಗಳ ಕೊರತೆ ಇದೆ. ಹೆಚ್ಚುವರಿಯಾಗಿ ನೀಡಿದ ೧೫ ಸಿಬ್ಬಂದಿ ಗಳಲ್ಲ್ಲಿ ೭ ಜನ ಮಾತ್ರ ಕರ್ತವ್ಯದಲ್ಲಿ ದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಇಲಾಖೆಯಲ್ಲಿ ನೇಮಕಾತಿ ಆಗದಿರುವುದರಿಂದ ಈ ಸಮಸ್ಯೆ ಯಾಗಿದೆ. ಸದ್ಯಕ್ಕೆ ಟಾಸ್ಕ್ ಪೋರ್ಸ್ ಮೂಲಕ ನೆರವು ನೀಡ ಲಾಗುತ್ತದೆ. ಮಳೆಗಾಲದಲ್ಲಿ ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಸ್ವಯಂ ಸೇವಕರು ಜೊತೆಗೂಡಿ ಕೆಲಸ ಮಾಡ ಬೇಕಾ ಗುತ್ತದೆ ಎಂದರು.
(ಮೊದಲ ಪುಟದಿಂದ) ವೀರಾಜಪೇಟೆಯ ಪ್ರಭಾರ ವೈದ್ಯಾಧಿಕಾರಿಗಳನ್ನು ಸಭೆಗೆ ಕರೆಸಿದ ಪೊನ್ನಣ್ಣ ಆಸ್ವತ್ರೆಯ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತಮ ಸೇವೆ ನೀಡುತ್ತಿರುವುದಾಗಿ ಹೇಳಿದಾಗ ಅಲ್ಲಿದ್ದ ಕಾಂಗ್ರೆಸ್ ಪ್ರಮುಖರು ಆಸ್ಪತ್ರೆ ಸಿಬ್ಬಂದಿಗಳ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ದೂರಿದರು.
ಪ್ರತಿಯೊಂದಕ್ಕು ಮಡಿಕೇರಿಗೆ ರೋಗಿಗಳನ್ನು ರವಾನಿಸಲಾಗುತ್ತಿದೆ. ಸಂಜೆ ವೇಳೆ ತುರ್ತು ಪ್ರಕರಣ ಬಂದರೆ ಇಲ್ಲಿಂದ ನೇರವಾಗಿ ಮಡಿಕೇರಿಗೆ ಹೋಗಬೇಕಾಗಿದೆ. ಈ ರೀತಿ ಘಟನೆಗಳಿಂದ ಕೆಲವರ ಪ್ರಾಣ ಹೋಗಿದೆ. ರಾತ್ರಿ ವೈದ್ಯರ ಲಭ್ಯತೆ ವಿರಳ, ಫೋನ್ ಕರೆ ಸ್ವೀಕರಿಸುವುದಿಲ್ಲ ಎಂದಾಗ, ಅಲ್ಲಿನ ಲೋಪಗಳ ಸಮಗ್ರ ಮಾಹಿತಿ ಇದೆ ಎಂದು ಪೊನ್ನಣ್ಣ ಹೇಳಿದರಲ್ಲದೆ ಈ ಕುರಿತು ಸಭೆಯನ್ನು ಕರೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವೀರಾಜಪೇಟೆಯ ಪಾರ್ಕಿಂಗ್ ಸಮಸ್ಯೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ಚಂದ್ರಕುಮಾರ್ ಹಾಗೂ ಡಿವೈಎಸ್ಪಿ ಮೋಹನ್ ಕುಮಾರ್ ಅವರಿಗೆ ಸೂಚನೆ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಕಾಳಜಿ ಕೇಂದ್ರದ ಹೆಸರಿನಲ್ಲಿ ಹಿಂದೆ ಅವ್ಯವಹಾರವಾಗಿದೆ. ಕಾಳಜಿ ಕೇಂದ್ರವನ್ನು ಅವಶ್ಯಕವಿದ್ದಾಗ ಮಾತ್ರ ಬಳಸಬೇಕು. ಬೆಟ್ಟ ಪ್ರದೇಶದ ನಿವಾಸಿಗಳಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಟಾರ್ಪಲ್ ವಿತರಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮಳೆಗಾಲದಲ್ಲಿ ಪೊಲೀಸ್ ಇಲಾಖೆ, ವೀರಾಜಪೇಟೆ ಮತ್ತು ಪೊನ್ನಂಪೇಟೆ ವಿಭಾಗದಲ್ಲಿ ಕೈಗೊಂಡಿರುವ ಮುಂಜಾಗ್ರತೆಯ ಮಾಹಿತಿಯನ್ನು ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ಮಡಿಕೇರಿಯ ಡಿವೈಎಸ್ಪಿ ಜಗದೀಶ್ ಸಭೆಗೆ ನೀಡಿದರು.
ಕೆಲವು ಶಿಕ್ಷಕರು ತಮ್ಮ ಕರ್ತವ್ಯ ಬಿಟ್ಟು ಖಾಸಗಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡ ಆರೋಪವಿದೆ. ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಆಹಾರ ಇಲಾಖೆ, ಜಿ.ಪಂ ತಾಂತ್ರಿಕ ವಿಭಾಗ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಮುಂತಾದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಪೊನ್ನಣ್ಣ ಅವರಿಗೆ ಮಾಹಿತಿ ನೀಡಿದರು,
ವೇದಿಕೆಯಲ್ಲಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್, ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ, ಮಡಿಕೇರಿ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಎರಡು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗಳಾದ ಅಪ್ಪಣ್ಣ ಮತ್ತು ಶೇಖರ್ ಮತ್ತಿತರರು ಉಪಸ್ಥಿತರಿದ್ದರು.