ಮಡಿಕೇರಿ, ಜೂ. ೧೦: ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡು ದಶಕಗಳ ಬಳಿಕ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಇದೀಗ ಕೊಡಗು ಜಿಲ್ಲೆಯಲ್ಲಿ ನಿಗಮ ಮಂಡಳಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಕೊಡವ ಹಾಗೂ ಗೌಡ ಜನಾಂಗದ ಪ್ರಮುಖ ನಾಯಕರು ನಿಗಮ ಮಂಡಳಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ.
ಇದೀಗ ಎಲ್ಲಾ ಜನಾಂಗಕ್ಕಿAತ ಕೊಡಗಿನ ಎರಡು ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿರುವ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯದ ನಾಯಕರಿಗೆ ನಿಗಮ ಮಂಡಳಿ ಹಾಗೂ ಎಂ.ಎಲ್.ಸಿ ಸ್ಥಾನ ನೀಡ ಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಪ್ರತೀ ಬಾರಿಯಂತೆ ಕೊಡವ ಜನಾಂಗ ಹಾಗೂ ಗೌಡ ಜನಾಂಗದವರು ವಿವಿಧ ನಿಗಮ ಮಂಡಳಿ ಸ್ಥಾನಕ್ಕೆ ಲಾಬಿ ನಡೆಸುವುದು ಸಹಜ. ಈಗಾಗಲೇ ಕಾಂಗ್ರೆಸ್ ಮುಖಂಡರು ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರು ಮಾಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ದೊಡ್ಡ ಸಮುದಾಯ ಮುಸ್ಲಿಮರಾಗಿದ್ದಾರೆ. ಈ ಬಾರಿ ಕೊಡಗಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಮುಸ್ಲಿಂ ಮತದಾರರು ದೊಡ್ಡ ಪಾತ್ರವಹಿಸಿದ್ದಾರೆ. ತಮ್ಮ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಿದರೂ ಕೂಡ ಈ ಬಾರಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದೆ.
ಈ ಬಾರಿ ಕಾಂಗ್ರೆಸ್ ಸರ್ಕಾರದಲ್ಲಿ ಕೊಡಗಿನ ಅಲ್ಪಸಂಖ್ಯಾತ ಮುಸ್ಲಿಂ ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಎಂ.ಎಲ್.ಸಿ ಮಾಡಬೇಕೆಂಬ ಕೂಗು ಮುಸ್ಲಿಂ ಸಮುದಾಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಪ್ರತೀ ಬಾರಿ ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೂ ಸಹಾ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಮುಸ್ಲಿಮರಿಗೆ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ ಎಂಬ ಅಸಮಾಧಾನ ಕೂಡ ಮುಸ್ಲಿಮ್ ಸಮುದಾಯದ ನಡುವೆ ಇದೆ.
ನಿಗಮ ಮಂಡಳಿ ಸ್ಥಾನಕ್ಕೆ ತೆರೆಮರೆಯಲ್ಲಿ ಪೈಪೋಟಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿರುವುದರಿಂದ ಕೊಡಗಿನ ಕಾಂಗ್ರೆಸ್ ಮುಸ್ಲಿಂ ನಾಯಕರು ತೆರೆಮರೆಯಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರ ಮೂಲಕ ಸರ್ಕಾರಕ್ಕೆ ಒತ್ತಡ ನೀಡುತ್ತಿದ್ದಾರೆ.
- ಕೆ.ಎಂ. ಇಸ್ಮಾಯಿಲ್ ಕಂಡಕೆರೆ