೨೦೦೮ರಲ್ಲಿ ಮೊದಲ್ಗೊಂಡು ಇತ್ತೀಚೆಗಷ್ಟೆ ೧೬ನೆ ಆವೃತ್ತಿಯನ್ನು ಪೂರೈಸಿದ ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಐ.ಪಿ.ಎಲ್. ಕ್ರಿಕೆಟ್ ವಿಶ್ವದಲ್ಲಿಯೇ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಲೀಗ್ ಆಗಿ ಹೆಸರು ಪಡೆದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಅಥವಾ ಬಿ.ಸಿ.ಸಿ.ಐ. ಇದರ ಮಾಲೀಕತ್ವವನ್ನು ಪಡೆದಿದೆ. ಪ್ರತಿ ವರ್ಷ ಕೋಟ್ಯಂತರ ಅಭಿಮಾನಿಗಳನ್ನು ತನ್ನತ್ತ ಸೆಳೆಯುವ ಈ ಐ.ಪಿ.ಎಲ್ ಸಾವಿರ ಕೋಟಿ ಮೌಲ್ಯದಲ್ಲಿ ಬಿ.ಸಿ.ಸಿ.ಐ.ಗೆ ಆದಾಯವನ್ನೂ ತಂದುಕೊಡುತ್ತದೆ. ಆದರೆ ಈ ಮೊತ್ತದಲ್ಲಿ ಲಾಭ ಗಳಿಸುವ ಬಿ.ಸಿ.ಸಿ.ಐ. ಐ.ಪಿ.ಎಲ್.ನಿಂದ ಸಂಪಾದಿಸಿದ ಹಣಕ್ಕೆ ಯಾವುದೇ ರೀತಿಯ ಆದಾಯ ಕಟ್ಟುವ ಅಗತ್ಯವೇ ಇಲ್ಲ. ಕಾರಣ, ಐ.ಪಿ.ಎಲ್. ಒಂದು ಮನೋರಂಜನಾ ಚಟುವಟಿಕೆಯಾಗಿದ್ದು, ಭಾರತದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಪ್ರೋತ್ಸಾಹಿಸುವುದು ಮಾತ್ರ ಇದರ ಉದ್ದೇಶ..!

೨೦೧೬-೧೭ ರಂದು ಕಂದಾಯ ಇಲಾಖೆಯಿಂದ ಐ.ಪಿ.ಎಲ್. ಲಾಭಾಂಶದ ಮೇಲೆ ತೆರಿಗೆ ಕಟ್ಟದೆ ಇದ್ದ ಬಗ್ಗೆ ಬಿ.ಸಿ.ಸಿ.ಐ.ಗೆ ನೋಟೀಸ್ ಜಾರಿ ಮಾಡಲಾಗಿತ್ತು. ಕೋರ್ಟ್ ಮೆಟ್ಟಿಲು ಹತ್ತಿದ ಈ ವಿಚಾರ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ೧೨ ಎ ಅಡಿಯಲ್ಲಿ, ಆದಾಯ ತೆರಿಗೆ ವಿನಾಯಿತಿ ಮಾಡುವಂತೆ ಬಿ.ಸಿ.ಸಿ.ಐ. ಕೋರಿತ್ತು. ಬಿ.ಸಿ.ಸಿ.ಐ ಐ.ಪಿ.ಎಲ್. ಮೂಲಕ ಆದಾಯಗಳಿಸಿದರೂ, ಅದರ ಪ್ರಮುಖ ಉದ್ದೇಶ ಕ್ರಿಕೆಟ್‌ಅನ್ನು ಪ್ರೋತ್ಸಾಹಿಸುವುದು ಎಂಬ ಆಧಾರದಲ್ಲಿ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಆದಾಯ ತೆರಿಗೆ ಇಲ್ಲದಿದ್ದರೂ ಗಳಿಸುವುದು ಮಾತ್ರ ಸಾವಿರ ಕೋಟಿ ಲೆಕ್ಕದಲ್ಲಿ ...!

ಐ.ಪಿ.ಎಲ್. ಆದಾಯ ತೆರಿಗೆಯಿಂದ ವಿನಾಯಿತಿ ಹೊಂದಿದ್ದರೂ ಐ.ಪಿ.ಎಲ್. ಮೂಲಕ ಬಿ.ಸಿ.ಸಿ.ಐ.ಗಳಿಸುವುದು ಮಾತ್ರ ಸಾವಿರ - ಕೋಟಿ ಲೆಕ್ಕದಲ್ಲಿ. ಪ್ರಸರಣಾ ಹಕ್ಕು, ಅಧಿಕೃತ ಸ್ಪಾನ್ಸರ್‌ಗಳು, ಟೈಟಲ್ ಸ್ಪಾನ್ಸರ್‌ಗಳು, ತಂಡಗಳ ಮಾರಾಟ ಹಾಗೂ ಇತ್ಯಾದಿ ಮೂಲಗಳಿಂದ ಸಾವಿರ ಕೋಟಿ ಲೆಕ್ಕದಲ್ಲಿಯೇ ಪ್ರತಿ ವರ್ಷ ಆದಾಯ ಗಳಿಸುತ್ತದೆ. ಇದರೊಂದಿಗೆ ಪಂದ್ಯಾವಳಿ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಆಗಮಿಸುವ ಪ್ರೇಕ್ಷಕರ ಟಿಕೆಟ್ ಮೊತ್ತದಲ್ಲಿಯೂ ಬಿ.ಸಿ.ಸಿ.ಐ.ಗೆ ಇಂತಿಷ್ಟು ಹಣ ಸೇರುತ್ತದೆ.

ಪ್ರಸರಣಾ ಹಕ್ಕು ರೂ.೪೮,೩೯೦ ಕೋಟಿಗೆ ಮಾರಾಟ - ಇದಕ್ಕೂ ಇಲ್ಲ ತೆರಿಗೆ..!

೨೦೨೩ ರಿಂದ ೨೦೨೭ ರವರೆಗೆ ನಡೆಯುವ ಒಟ್ಟು ೪೧೦ ಐ.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿಗಳ ಪ್ರಸರಣ ಹಕ್ಕನ್ನು ಮಾರುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿ.ಸಿ.ಸಿ.ಐ) ಪಡೆದಿರವ ಒಟ್ಟು ಮೊತ್ತ ರೂ. ೪೮,೩೯೦ ಕೋಟಿ. ಟಿ.ವಿ. ಹಕ್ಕು ಮೂಲಕ ಸ್ಟಾರ್ ಸ್ಪೋರ್ಟ್ಸ್ನಿಂದ ರೂ. ೨೩,೫೭೫ ಕೋಟಿ ಪಡೆದುಕೊಂಡರೆ, ಡಿಜಿ.ಟಲ್ ಹಕ್ಕು ಮಾರಾಟ ಮೂಲಕ ವಯಾಕಾಮ್ ೧೮ ನಿಂದ ರೂ. ೨೩,೭೫೮ ಕೋಟಿ ಪಡೆದುಕೊಂಡಿದೆ. ಇದೆಲ್ಲವೂ ಕ್ರಿಕೆಟ್ ಪ್ರೋತ್ಸಾಹ ಉದ್ದೇಶವೆ ಆಗಿರುವ ಕಾರಣ ಯಾವುದಕ್ಕೂ ತೆರಿಗೆ ಇಲ್ಲ.

ಟೈಟಲ್ ಸ್ಪಾನ್ಸರ್, ಇತರ ಸ್ಪಾನ್ಸರ್‌ಗಳಿಂದ ಮತ್ತಷ್ಟು ಹಣ

೨೦೨೨ ಹಾಗೂ ೨೦೨೩ರ ಆವೃತ್ತಿಯ ಐ.ಪಿ.ಎಲ್. ಟೈಟಲ್ ಸ್ಪಾನ್ಸರ್ ಆಗಿ ಟಾಟಾ ಸಂಸ್ಥೆ ವಾರ್ಷಿಕ ರೂ. ೪೩೯.೮ ಕೋಟಿ ಖರ್ಚು ಮಾಡಿತು. ಉಳಿದಂತೆ ೨೦೨೩ರ ಆವೃತ್ತಿಯ ಐ.ಪಿ.ಎಲ್.ನ ಅಧಿಕೃತ ಸ್ಪಾನ್‌ರ‍್ಸ್ಗಳಾಗಿ ಬೆಟ್ಟಿಂಗ್ ಆ್ಯಪ್ ಡ್ರೀಮ್-೧೧, ಅತಿ ಹೆಚ್ಚು ದೂರ ಸಿಕ್ಸರ್ ಬಾರಿಸುವವರಿಗೆ ಪ್ರೋತ್ಸಾಹಿಸಲು ಸೌದಿ ಟೂರಿಸಂ ಅಥಾರಿಟಿ, ‘ಪವರ್‌ಪ್ಲೇ’- ಮೊದಲ ೬ ಓವರ್‌ಗಳ ಸ್ಪಾನ್ಸರ್ ಕ್ರೆಡಿಟ್ ಕಾರ್ಡ್ ಸಂಸ್ಥೆ ಕ್ರೆಡ್, ಪಂದ್ಯದ ಮೊದಲ ವಿಕೆಟ್‌ಗೆ ಪ್ರೋತ್ಸಾಹಿಸುವ ಹಣ ಹೂಡಿಕೆ ಸಂಸ್ಥೆ ಅಪ್‌ಸ್ಟಾಕ್ಸ್, ಅತಿ ಹೆಚ್ಚು ಬೌಂಡರಿ ಭಾರಿಸುವವರಿಗೆ ಪ್ರೋತ್ಸಾಹಿಸಲು ಕ್ರೆಡಿಟ್ ಕಾರ್ಡ್ ಯು.ಪಿ.ಐ. ಸಂಸ್ಥೆ ರೂ-ಪೇ, ಪಂದ್ಯದಲ್ಲಿ ಆಕರ್ಷಣೀಯ ಕ್ಯಾಚ್ ಪಡೆದ ಆಟಗಾರನಿಗೆ ಪ್ರೋತ್ಸಾಹಿಸಲು ನ್ಯೂಟ್ರಿಷಿಯನ್ ಸಂಸ್ಥೆ ಹರ್ಬಲ್‌ಲೈಫ್, ಅತಿ ಹೆಚ್ಚು ರನ್‌ಗಳಿಸುವ ಹಾಗೂ ವಿಕೆಟ್ ಗಳಿಸುವ ಆಟಗಾರನಿಗೆ ಪ್ರಶಸ್ತಿ ನೀಡುವ ಇಂಧನ ಸಂಸ್ಥೆ ಅರಾಮ್ಕೋ, ತೀರ್ಪುಗಾರರಿಗೆ ಸ್ಪಾನ್ಸರ್‌ಗಳಾದ ಪೇ-ಟಿಎಮ್ ಹಾಗೂ ಪಂದ್ಯದ ನಡುವೆ ಬ್ರೇಕ್ ಸಂದರ್ಭದಲ್ಲಿನ ಸ್ಪಾನ್ಸರ್‌ಗಳಾದ ಸಿಯೇಟ್ ಟೈರ್ ಸಂಸ್ಥೆಗಳಿAದ ಬಿ.ಸಿ.ಸಿ.ಐ. ಐ.ಪಿ.ಎಲ್. ಮೂಲಕ ಕೋಟ್ಯಂತರ ಆದಾಯಗಳಿಸುತ್ತದೆ. ಇಲ್ಲಿ ಪೇ-ಟಿಎಂ ಸಂಸ್ಥೆ ರೂ. ೨೮ ಕೋಟಿ ವ್ಯಯ ಮಾಡಿದರೆ, ಸಿಯೇಟ್ ಟೈರ್ ಸಂಸ್ಥೆ ರೂ. ೩೦ ಕೋಟಿ ಖರ್ಚು ಮಾಡಿದೆ. ಉಳಿದಂತೆ ಇನ್ನೆಲ್ಲಾ ಅಧಿಕೃತ ಸ್ಪಾನ್‌ಸರ್‌ಗಳಿಂದ ಒಟ್ಟು ರೂ. ೨೧೦ ಕೋಟಿಯನ್ನು ಬಿ.ಸಿ.ಸಿ.ಐ. ೨೦೨೩ ರಲ್ಲಿಯೇ ಪಡೆದಿದೆ. ೨೦೨೨ ರ ಅವಧಿಯಲ್ಲಿ ಗುಜರಾತ್ ಹಾಗೂ ಲಕ್‌ನೋ ಹೆಸರಿನ ೨ ನೂತನ ತಂಡಗಳನ್ನು ಐ.ಪಿ.ಎಲ್‌ಗೆ ಸೇರಿಸಲು ಬಿ.ಸಿ.ಸಿ.ಐ. ಈ ನೂತನ ತಂಡದ ಮಾಲಿಕರಿಂದ ಪಡೆದದ್ದು ಬರೋಬ್ಬರಿ ರೂ. ೧೨,೭೧೫ ಕೋಟಿ. - ಪಿ.ಜಿ.ಆರ್.