ವೀರಾಜಪೇಟೆ, ಜೂ. ೧೦: ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿ ಜೆಸಿಬಿ ಮೂಲಕ ಬರೆಯನ್ನು ಕೊರೆದ ಪರಿಣಾಮ ಮೇಲ್ಭಾಗದ ಮನೆ ಕುಸಿಯುವ ಹಂತದಲ್ಲಿದೆ. ಹಲವಾರು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನ ಆಗದ ಕಾರಣ ನಾನು ನನ್ನ ಕುಟುಂಬ ದೊಂದಿಗೆ ಪುರಸಭೆ ಮುಂಭಾಗದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ನೆಹರುನಗರ ನಿವಾಸಿ ಪಿ. ಶಂಕರ್ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರಿಗೆ ದೂರು ನೀಡಿದ್ದಾರೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಶಂಕರ್‌ಗೆ ಮೂರು ಸೆಂಟು ಜಾಗದಲ್ಲಿ ವಾಸದ ಮನೆ ಇದೆ. ಮನೆಯ ಕೆಳ ಭಾಗದಲ್ಲಿ ಅಂದಾಜು ೩೦ ಅಡಿ ಎತ್ತರದ ಬೃಹತ್ ಬರೆ ಇದೆ. ೨೦೧೮ರ ಮೇ ತಿಂಗಳಲ್ಲಿ ಇಬ್ಬರು ವ್ಯಕ್ತಿಗಳು ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಮನೆಯ ಅಡಿಪಾಯದವರೆಗೆ ಬರೆಯನ್ನು ಕೊರೆದು ಮನೆಗೆ ಹಾನಿ ಮಾಡಿದ್ದಾರೆ. ವಿಚಾರಣೆ ನಡೆಸಿದಾಗ ೧೫ ದಿನಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಆಶ್ವಾಸನೆ ನೀಡಲಾಗಿತ್ತು. ಏಕಾಏಕಿ ಮಳೆಗಾಲ ಪ್ರಾರಂಭಗೊAಡ ಹಿನ್ನೆಲೆಯಲ್ಲಿ ತಡೆಗೋಡೆ ನಿರ್ಮಾಣ ಹಾಗೆಯೇ ಉಳಿದುಕೊಂಡು ಈವರೆಗೂ ನಿರ್ಮಾಣಗೊಂಡಿಲ್ಲ. ಪುರಸಭೆಗೆ ಹಲವಾರು ಬಾರಿ ದೂರು ನೀಡಿದರು ಅಧಿಕಾರಿಗಳು ಮತ್ತು ಸದಸ್ಯರು ಬಂದು ಸ್ಥಳ ಪರಿಶೀಲನೆ ನಡೆಸಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಮಳೆಗಾಲ ಬರುತ್ತಿದೆ ಎಂದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ಎದುರಾಗಿದೆ ಎಂದರು. ಸ್ಥಳ ಪರಿಶೀಲನೆ ನಡೆಸಿ ಈಗಾಗಲೇ ಒಂದು ನೋಟೀಸ್ ಜಾರಿ ಮಾಡಲಾಗಿದೆ. ಇವತ್ತೆ ಮತ್ತೊಂದು ನೋಟೀಸ್ ಜಾರಿ ಮಾಡಲಾಗುವುದು. ಸ್ಪಂದಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಚಂದ್ರಕುಮಾರ್ ‘ಶಕ್ತಿ’ಗೆ ತಿಳಿಸಿದ್ದಾರೆ.