ವೀರಾಜಪೇಟೆ, ಜೂ. ೧೦: ನನ್ನ ಕ್ಷೇತ್ರದ ಅಭಿವೃದ್ಧಿಗೆ ಸದಾ ನಾನು ಬದ್ಧನಾಗಿರುತ್ತೇನೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು ಮತದಾರರಿಗೆ ನಾನು ಗೆದ್ದರೆ ಸ್ವಚ್ಛ ಆಡಳಿತವನ್ನು ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದೆ. ಅದೇ ರೀತಿ ನಡೆಯುವವನಿದ್ದೇನೆ. ಚುನಾವಣಾ ಸಮಯದಿಂದಲೂ ನನ್ನ ಮೇಲೆ ವೈಯಕ್ತಿಕ ತೇಜೋವಧೆ, ಸುಳ್ಳು ಸುದ್ದಿ ಹಬ್ಬಿಸುವಿಕೆ ನಡೆಯು ತ್ತಿದೆ. ಯಾವುದಕ್ಕೂ ಕಡಿವಾಣ ಬೀಳುತ್ತಿಲ್ಲ. ಈ ಕ್ಷಣದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ದ್ವೇಷ ಹರುಡುವಿಕೆ, ಅಪಪ್ರಚಾರ ನಡೆಸುವವರ ವಿರುದ್ಧ ಕಠಿಣ ಕ್ರಮಜರುಗಿಸಿ ಇಲ್ಲ ಜಿಲ್ಲೆ ಯಿಂದ ಹೊರನಡೆಯಲು ಸಿದ್ಧರಾಗಿ ಎಂದು ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದರು. ಯಾವ ಕಾರ್ಯ ಕರ್ತರು ಕೂಡಾ ಭ್ರಷ್ಟ ಅಧಿಕಾರಿ ಗಳನ್ನು ನನ್ನ ಬಳಿ ಕರೆದುಕೊಂಡು ಬರಬೇಡಿ. ಜಿಲ್ಲೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಯಬೇಕು. ನಿಮ್ಮಿಂದ ಗೆದ್ದು ಬಂದವನು ಮಾತಿಗೆ ತಕ್ಕ ಹಾಗೇ ನಡೆಯಬೇಕಾದರೆ ನೀವೆಲ್ಲರೂ ನನ್ನೊಡನೆ ಹೆಜ್ಜೆ ಹಾಕಬೇಕು. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರೆಂಟಿ ಕಾರ್ಡ್ ಬಗ್ಗೆ ಯಾವುದೇ ಗೊಂದಲ ಬೇಡ. ನಮ್ಮ ಸರ್ಕಾರ ಮಾಡಿರುವ ಅಷ್ಟು ಗ್ಯಾರೆಂಟಿ ಯೋಜನೆಗಳು ಸಂವಿಧಾನ ಬದ್ಧವಾಗಿವೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಗೆಲ್ಲಬೇಕು ಎನ್ನುವುದು ನಮ್ಮೆಲರ ಕನಸಾಗಿತ್ತು. ಅದು ನನಸಾಗಿದೆ. ಈ ಚುನಾವಣೆ ಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು ಮುತುವರ್ಜಿ ವಹಿಸಿ ಕೆಲಸ ಮಾಡಿದ ಕಾರಣ ಗೆಲುವು ಒಲಿದಿದೆ. ಮುಂಬರುವ ಸ್ಥಳೀಯ ಆಡಳಿತಗಳ ಚುನಾವಣೆಗೂ ನಾವೂ ಇದೇ ಸೂತ್ರ ಅನುಸರಿಸಿ ಗೆಲುವು ಸಾಧಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ನೂತನ ಶಾಸಕರು ಜನರ ಸಂಕಷ್ಟಕ್ಕೆ ಸ್ಪಂದಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸು ತ್ತಾರೆ ಎಂಬ ವಿಶ್ವಾಸ ಜನರಲ್ಲಿದೆ ಅದು ಫಲಪ್ರದವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ ಇದೊಂದು ಐತಿಹಾಸಿಕ ಗೆಲುವು. ಇಲ್ಲಿ ಕೆಪಿಸಿಸಿ ಸಮರ್ಥ ನಾಯಕನನ್ನು ಆಯ್ಕೆ ಮಾಡಿ ಕಳುಹಿಸಿದ್ದರಿಂದ ಗೆಲುವು ದೊರಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ ರಮೇಶ್, ಕಾಂಗ್ರೆಸ್ ಪ್ರಮುಖ ನರೇಂದ್ರನಾಥ್ ಕಾಮತ್ ಮಾತನಾಡಿದರು. ಇದೇ ಸಂದರ್ಭ ನೂತನ ಶಾಸಕ ಎ.ಎಸ್ ಪೊನ್ನಣ್ಣನವರಿಗೆ ತೋರೇರ ಬಿದ್ದಪ್ಪ ಅವರು ಕೊಡವ ಸಾಂಪ್ರದಾಯಿಕ ಪೇಟಾ ಮತ್ತು ಪೀಚೆಕತ್ತಿ ನೀಡಿ ಸನ್ಮಾನಿಸಿದರು. ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯೆಯೊಬ್ಬರು ಎ.ಎಸ್ ಪೊನ್ನಣ್ಣ ಹಾಗೂ ಅವರ ಪತ್ನಿ ಕಾಂಚನ್ ಅವರ ಚಿತ್ರ ಬರೆದು ಉಡುಗೊರೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್, ಕಾಂಗ್ರೆಸ್ ನಗರಾಧ್ಯಕ್ಷ ಮಾದಂಡ ತಿಮ್ಮಯ್ಯ, ವೀರಾಜಪೇಟೆ ಅಲ್ಪಸಂಖ್ಯಾತ ಘಟಕದ ರಫೀಕ್, ಮಹಿಳಾ ಘಟಕದ ಅಧ್ಯಕ್ಷೆ ಪೊನ್ನಕ್ಕಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಸದಸ್ಯರು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.