ಮಡಿಕೇರಿ, ಜೂ. ೯: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಏರ್ಪಟ್ಟಿರುವ ನೀರಿನ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ರೀತಿ ಸಮಸ್ಯೆ ಬಾರದ ರೀತಿಯಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಲು ಮಡಿಕೇರಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಡಾ. ಮಂಥರ್ ಗೌಡ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ದೊಡ್ಡ ನಗರವಾಗಿರುವ ಮಡಿಕೇರಿಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಕೂಟುಹೊಳೆಯಲ್ಲಿ ಮೋಟಾರು ಕೆಟ್ಟು ನಿಂತ ಪರಿಣಾಮ ನೀರು ಸರಬರಾಜು ಕಷ್ಟಕರವಾಗಿದೆ. ಬದಲಿ ವ್ಯವಸ್ಥೆ ಇಲ್ಲದ ಕಾರಣ ಕುಡಿಯುವ ನೀರು ಪೂರೈಸಲಾಗುತ್ತಿಲ್ಲ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ ಚಿಂತಿಸಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ಇರುವ ೨ ಮೋಟಾರ್ ದುರಸ್ತಿಯಾದ ಪರಿಣಾಮ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಮತ್ತೊಂದು ಮೋಟಾರ್ ಖರೀದಿ ಮಾಡುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿ ಶಾಸಕರು, ತಾಂತ್ರಿಕವಾಗಿ ಸಮಸ್ಯೆ ಸರಿಪಡಿಸಲು ಪ್ರತ್ಯೇಕ ಸಿಬ್ಬಂದಿಯ ಅವಶ್ಯಕತೆ ಇದೆ. ಹೊರಗುತ್ತಿಗೆ ಆಧಾರದಲ್ಲಿ ಓರ್ವ ಸಿಬ್ಬಂದಿಯನ್ನು ನೇಮಿಸಿಕೊಂಡು ಮೇಲ್ವಿಚಾರಣೆಯ ಜವಾಬ್ದಾರಿ ನೀಡಿ. ಮಳೆಗಾಲದಲ್ಲಿಯೂ ನೀರು ಪೂರೈಕೆ ಕಷ್ಟಕರವಾಗಬಾರದು. ಮೋಟಾರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದರೆ ತ್ವರಿತವಾಗಿ ಸರಿಪಡಿಸುವ ಕೆಲಸವಾಗಬೇಕು. ಮತ್ತೊಂದು ಮೋಟಾರ್ ಖರೀದಿಸಲು ‘ಶಾರ್ಟ್ಟೈಂ ಟೆಂಡರ್’ ಆಹ್ವಾನಿಸಿ ನಿಯಮ ಪ್ರಕಾರ ಪ್ರಕ್ರಿಯೆ ಆರಂಭಿಸುವAತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು. ಸಹಾಯಕ ಅಭಿಯಂತರ ರಂಗರಾಮ್ ಮಾತನಾಡಿ, ಕೂಟುಹೊಳೆಯ ಒಂದು ಮೋಟಾರ್ ಸರಿಪಡಿಸಲಾಗಿದೆ. ಇದೀಗ ನೀರು ಪೂರೈಸಬಹುದಾಗಿದೆ. ಮತ್ತೊಂದು ಮೋಟಾರ್ ವಾರದೊಳಗೆ ಸರಿಪಡಿಸಲಾಗುವುದು. ನೀರಿನ ಮೂಲವಾಗಿರುವ ಕುಂಡಾಮೇಸ್ತಿçಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದ್ದು, ನಗರದಲ್ಲಿ ೯ ತೆರೆದ ಬಾವಿಗಳಿವೆ ಎಂದು ಮಾಹಿತಿ ನೀಡಿದರು. ನಗರದ ಪೈಪ್‌ಲೈನ್ ಹಳೆಯಾದಾದ ಹಿನ್ನೆಲೆ ನೀರು ಪೂರೈಕೆಗೆ ಸಮಸ್ಯೆಯಾಗಿದೆ. ಅಲ್ಲಲ್ಲಿ ಹಾನಿಯಾಗಿ ವೇಗವಾಗಿ ನೀರು ಹರಿಯುತ್ತಿಲ್ಲ. ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಗರಕ್ಕೆ ೧೧೦ ಕಿ.ಮೀ ಪೈಪ್‌ಲೈನ್‌ನ ಅವಶ್ಯಕತೆ ಇದೆ ಎಂದು ಗಮನ ಸೆಳೆದರು. ಶಾಸಕ ಮಂಥರ್ ಮಾತನಾಡಿ, ಮನೆಗಳಲ್ಲಿ ಸಂಪ್ ನಿರ್ಮಿಸಲು ಉತ್ತೇಜಿಸುವ ಕೆಲಸವಾಗಬೇಕು. ಮುಂದಿನ ದಿನಗಳಲ್ಲಿ ಮನೆ ನಿರ್ಮಿಸುವವರಿಗೆ ಸಂಪ್ ನಿರ್ಮಿಸುವಂತೆ ಬೈಲಾದಡಿ ತರುವ ಪ್ರಯತ್ನ ನಡೆಸಿ. ಇದರಿಂದ ನೀರಿನ ಸಮಸ್ಯೆ ಸ್ವಲ್ಪ ಕಡಿಮೆಯಾಗುತ್ತದೆ. ಪೈಪ್‌ಲೈನ್ ವೈಜ್ಞಾನಿಕವಾಗಿ ಸರಿಪಡಿಸುವ ಸಂಬAಧ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಪೌರಾಯುಕ್ತ ವಿಜಯ ಮಾತನಾಡಿ, ೨೩ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಮೃತ ೨.೦ ಯೋಜನೆಯಡಿ ಅನುದಾನದ ಲಭ್ಯತೆ ಇದೆ. ಆದರೆ, ಈ ಹಣದಲ್ಲಿ ೨೩ ವಾರ್ಡ್ಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ. ಹೆಚ್ಚಿನ ಅನುದಾನಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಬೇಕಾಗಿದೆ. ಇದಕ್ಕೆ ಸಹಕರಿಸುವಂತೆ ಕೋರಿದರು.

ಕಂದಾಯ ಅಧಿಕಾರಿ ತಾಹೀರ್ ಮಾತನಾಡಿ, ನಗರದಲ್ಲಿ ೫ ಸಾವಿರ ನೀರಿನ ಸಂಪರ್ಕವಿದೆ. ಕೆಲವರು ನಿಯಮಾಬಾಹಿರವಾಗಿ ಸಂಪರ್ಕ ಪಡೆದಿದ್ದಾರೆ. ಪ್ರವಾಸಿ ತಾಣವಾಗಿರುವ ಹಿನ್ನೆಲೆ ವಾರಂತ್ಯಗಳಲ್ಲಿ ನೀರಿನ ಬಳಕೆ ಹೆಚ್ಚಾಗುತ್ತದೆ ಎಂದು ವಿವರಿಸಿದರು.

ಮಳೆಗಾಲ ಮುಂಜಾಗ್ರತೆ ವಹಿಸಿ

ಮಳೆಗಾಲ ಆರಂಭವಾಗುತ್ತಿದ್ದು, ಚರಂಡಿಗಳನ್ನು ಶುಚಿಗೊಳಿಸಿ ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕ ಮಂಥರ್ ಸೂಚನೆ ನೀಡಿದರು. ಬರೆ ಇರುವ ಜಾಗದಲ್ಲಿ ನಿರ್ಮಾಣ ಮಾಡುವ ತಡೆಗೋಡೆ ವೈಜ್ಞಾನಿಕವಾಗಿರಬೇಕು. ತಾತ್ಕಾಲಿಕವಾಗಿ ಸ್ಯಾಂಡ್ ಬ್ಯಾಗ್ ಅಳವಡಿಸುವ ಕೆಲಸವಾಗಬೇಕು. ರಾಜಕಾಲುವೆಗಳಲ್ಲಿ ಮಳೆಗಾಲ ಮುಂಜಾಗ್ರತ ಕ್ರಮವಹಿಸಬೇಕು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ನೀರು ರಸ್ತೆಗಳು ಹಾಳಾಗುತ್ತಿವೆ. ಈ ಬಗ್ಗೆ ಗಮನಹರಿಸುವಂತೆ ಹೇಳಿದರು.

ವಿಳಂಬ ಮಾಡಬೇಡಿ

ನಮೂನೆ-೩ ಸೇರಿದಂತೆ ಇನ್ನಿತರ ದಾಖಲೆ ಪಡೆಯಲು ಜನರು ಪರದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೆ ವಿಳಂಬ ಮಾಡಬೇಡಿ ಇದನ್ನು ಸರಿಪಡಿಸಿಕೊಳ್ಳಬೇಕೆಂದು ಶಾಸಕರು ಖಡಕ್ ಎಚ್ಚರಿಕೆ ನೀಡಿದರು. ಆರೋಗ್ಯ ಅಧಿಕಾರಿಗಳು ನಿತ್ಯ ‘ಫೀಲ್ಡ್ ವರ್ಕ್’ ಮಾಡಬೇಕು. ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆಯೇ ಎಂದು ಪರಿಶೀಲಿಸಬೇಕು. ಕಸ ವಿಲೇವಾರಿ ಸಮಸ್ಯೆ ಏರ್ಪಡಬಾರದು. ಡೆಂಗ್ಯೂಯAತಹ ಸಾಂಕ್ರಮಿಕ ಕಾಯಿಲೆಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀಡಿರುವ ವಾಹನವನ್ನು ನಿಮ್ಮ ಸ್ವಂತಕ್ಕೆ ಬಳಸಿಕೊಳ್ಳದೆ ಸಾರ್ವಜನಿಕ ಕೆಲಸಕ್ಕೆ ಬಳಸಿ ನಿತ್ಯ ವಾರ್ಡ್ಗಳಿಗೆ ಭೇಟಿ ನೀಡಿ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳುವಂತೆ ತಾಕೀತು ಮಾಡಿದರು.

ನಗರಸಭೆಯಲ್ಲಿ ಅಗತ್ಯಕ್ಕೆ ತಕ್ಕ ಸಿಬ್ಬಂದಿಗಳಿಲ್ಲದ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದರು. ಹಲವು ಹುದ್ದೆಗಳು ಖಾಲಿ ಇರುವ ಹಿನ್ನೆಲೆ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂದರು. ಸಭೆಯಲ್ಲಿ ವಿವಿಧ ಹಂತದ ಅಧಿಕಾರಿಗಳು ಪಾಲ್ಗೊಂಡಿದ್ದರು.