ಕೊಡ್ಲಿಪೇಟೆ, ಜೂ.೭: ಮಡಿಕೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹೋಬಳಿ ಕೇಂದ್ರದಲ್ಲಿ ಶಾಸಕರ ಕಚೇರಿಯನ್ನು ಆರಂಭಿಸಲಾಗುವುದು. ತಿಂಗಳಿಗೆ ೨ ಬಾರಿ ಸ್ಥಳೀಯವಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ಶಾಸಕ ಡಾ.ಮಂಥರ್ ಗೌಡ ತಿಳಿಸಿದರು.

ಕೊಡ್ಲಿಪೇಟೆಯ ಮಸೀದಿ ರಸ್ತೆಯಲ್ಲಿರುವ ಕಟ್ಟಡದಲ್ಲಿ ಹೋಬಳಿ ಮಟ್ಟದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾರಂಭದಲ್ಲಿ ಕ್ಷೇತ್ರದ ಗಡಿ ಭಾಗವಾದ ಕೊಡ್ಲಿಪೇಟೆಯಲ್ಲಿ ಹೋಬಳಿ ಕಚೇರಿಯನ್ನು ಪ್ರಾರಂಭ ಮಾಡಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಹೋಬಳಿಗಳಿಗೂ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದರು.

ಪ್ರತಿ ತಿಂಗಳಿಗೆ ಎರಡು ಬಾರಿ ಕಚೇರಿಗೆ ಭೇಟಿ ನೀಡಿ ಅಹವಾಲು ಆಲಿಸಲಾಗುವುದು ಎಂದ ಅವರು, ಸಾರ್ವಜನಿಕ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡಿಕೊಡಲಾಗುವುದು. ಅಭಿವೃದ್ಧಿ ಯೋಜನೆಗಳನ್ನು ವಿಳಂಬ ರಹಿತವಾಗಿ ಅನುಷ್ಠಾನಗೊಳಿಸ ಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಲಯ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್, ಗಡಿ ಭಾಗವಾಗಿರುವ ಕೊಡ್ಲಿಪೇಟೆಯಿಂದ ತಾಲೂಕು ಕೇಂದ್ರವಾದ ಸೋಮವಾರಪೇಟೆಗೆ ೩೫ ಕಿ.ಮೀ. ದೂರ ಕ್ರಮಿಸಬೇಕಾಗಿದ್ದು, ಕೂಲಿ ಕಾರ್ಮಿಕರು, ರೈತರು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಹೊಗಬೇಕಾಗಿತ್ತು. ಇದರಿಂದಾಗಿ ಸಮಸ್ಯೆಯೂ ಸೃಷ್ಟಿಯಾಗಿತ್ತು. ಈ ಹಿನ್ನೆಲೆ ಕೊಡ್ಲಿಪೇಟೆಯಲ್ಲಿ ಚುನಾವಣಾ ಪ್ರಚಾರ ಸಂದರ್ಭ ಹೋಬಳಿ ಮಟ್ಟದಲ್ಲಿ ಕಚೇರಿ ತೆರೆಯುವಂತೆ ಮನವಿ ಮಾಡಲಾಗಿತ್ತು. ಇದೀಗ ಶಾಸಕರು ಕಚೇರಿಯನ್ನು ತೆರೆದಿರುವುದು ಶ್ಲಾಘನೀಯ ಎಂದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್ ಮಾತನಾಡಿದರು. ಈ ಸಂದರ್ಭ ವಲಯಾಧ್ಯಕ್ಷರುಗಳಾದ ಸುಲೈಮಾನ್ ಬ್ಯಾಡಗೊಟ್ಟ, ಮಲ್ಲೇಶ್ ಬೆಸೂರು, ಬೂತ್ ಅಧ್ಯಕ್ಷರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಹಾಜರಿದ್ದರು.