ಮಡಿಕೇರಿ, ಜೂ. ೬: ಇತ್ತೀಚೆಗಷ್ಟೇ ಹೊರಬಿದ್ದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದ ಬಳಿಕ ಮರು ಮೌಲ್ಯಮಾಪನಕ್ಕೆ ಒಳಪಡಿಸಿದ ನಂತರ ಕೊಡಗು ಜಿಲ್ಲೆಯ ವಿದ್ಯಾರ್ಥಿಗೆ ೫ ಅಂಕ ಹೆಚ್ಚಿದ್ದು ಈ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದಂತೆ ಆಗಿದೆ. ಸಿದ್ದಾಪುರ ಶ್ರೀ ಕೃಷ್ಣ ವಿದ್ಯಾ ಮಂದಿರ ಶಾಲೆಯ ವಿದ್ಯಾರ್ಥಿ ಗುರುನಮನ್ ಪಿ.ಎಸ್ ೬೨೫ ಕ್ಕೆ ೬೧೪ ಅಂಕಗಳನ್ನು ಪಡೆದಿದ್ದರು. ತೃಪ್ತಿಗೊಳ್ಳದ ಗುರುನಮನ್ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿ ವಿಜ್ಞಾನ ಹಾಗೂ ಸಮಾಜ ವಿಜ್ಞಾನದಲ್ಲಿ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ. ವಿಜ್ಞಾನದಲ್ಲಿ ೯೭ ರಿಂದ ೯೮ಕ್ಕೆ ಅಂಕ ಏರಿಕೆಯಾದರೆ, ಸಮಾಜ ವಿಜ್ಞಾನದಲ್ಲಿ ೯೪ ರಿಂದ ೯೮ ಕ್ಕೆ ಏರಿಕೆಯಾಗಿದ್ದು ಒಟ್ಟು ಅಂಕ ೬೧೯ ಆಗಿದೆ.