ಮಡಿಕೇರಿ, ಜೂ. ೬: ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೂಟುಹೊಳೆ ಜಾಕ್ವೆಲಿನ್‌ನ ೩೦೦ ಹೆಚ್.ಪಿ. ಮೋಟರ್ ತಾಂತ್ರಿಕ ದೋಷದಿಂದ ಕೆಟ್ಟು ಹೋಗಿರುವುದರಿಂದ ನಗರದ ಜನತೆಗೆ ನೀರಿನ ಸಮಸ್ಯೆ ಎದುರಾಗಲಿದ್ದು, ಈ ಹಿನ್ನೆಲೆಯಲ್ಲಿ ಕನಿಷ್ಟ ೧೦ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಸೂಚನೆ ನೀಡಿದ್ದಾರೆ.

ಕೂಟುಹೊಳೆಯ ಪಂಪ್ ಮತ್ತು ಮೋಟಾರ್ ಪದೇ ಪದೇ ರಿಪೇರಿಯಾಗುತ್ತಿದ್ದು ಶಾಶ್ವತ ಪರಿಹಾರಕ್ಕಾಗಿ ಕೂಡಲೇ ಇಂಜಿನಿಯರ್‌ಗಳಿAದ ಹೊಸ ಮೋಟಾರ್ ಮತ್ತು ಪಂಪ್ ಅಳವಡಿಸುವ ಸಲುವಾಗಿ ಅಂದಾಜು ಪಟ್ಟಿ ತಯಾರಿಸಿ ನೀಡುವಂತೆ ಪೌರಾಯುಕ್ತರಿಗೆ ಶಾಸಕರು ಸೂಚಿಸಿದ್ದಾರೆ. ಶಾಸಕರ ಅನುದಾನದಲ್ಲಿ ಕುಡಿಯುವ ನೀರು ಒದಗಿಸಲು ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಡಾ. ಮಂಥರ್ ಗೌಡ ತಿಳಿಸಿದ್ದಾರೆ.