ಮಡಿಕೇರಿ, ಜೂ. ೬: ವಿದ್ಯುತ್ ಬಿಲ್ ದರ ಏರಿಕೆ ಹಾಗೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಯೊಜನೆಗಳಿಗೆ ನಿಬಂಧನೆಗಳನ್ನು ವಿಧಿಸುತ್ತಿರುವ ರಾಜ್ಯ ಸರಕಾರದ ಧೋರಣೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜ. ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರ ಹಾಗೂ ಜಿಲ್ಲೆಯ ಶಾಸಕರುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪ್ರತಿಯೊಬ್ಬರಿಗೂ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡುವದಾಗಿ ಘೋಷಿಸಿದ್ದ ಕಾಂಗ್ರೆಸಿಗರು ಇದೀಗ ಅಧಿಕಾರಕ್ಕೆ ಬಂದ ಕೂಡಲೇ ವಿದ್ಯುತ್ ಬಿಲ್ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರೆ ಹೊರಿಸಿದೆ. ಐದು ಯೋಜನೆಗಳನ್ನು ಉಚಿತವೆಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಇದೀಗ ಯೋಜನೆಗಳ ಜಾರಿಗೆ ಷರತ್ತುಗಳನ್ನು ವಿಧಿಸುತ್ತಿರುವದು ಸರಿಯಲ್ಲ. ಯಾವದೇ ಷರತ್ತಿಲ್ಲದೆ ಜಾರಿಗೊಳಿಸ ಬೇಕೆಂದು ಒತ್ತಾಯಿಸಿದರು. ಚಕ್ರವರ್ತಿ ಸೂಲಿಬೆಲೆ ಅವರು ಕಾಂಗ್ರೆಸ್ ಸರಕಾರವನ್ನು ಹಿಟ್ಲರ್ ಸರಕಾರವೆಂದು ಹೇಳಿದಕ್ಕೆ ಅವರನ್ನು ಜೈಲಿಗೆ ಕಳುಹಿಸುವದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ರಾಜ್ಯ, ದೇಶಕ್ಕೋಸ್ಕರ ಬಿಜೆಪಿಯವರು ಜೈಲಿಗೆ ಹೋಗಲೂ ಸಿದ್ಧರಿರುವದಾಗಿ ಹೇಳಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ, ಜಿಲ್ಲಾ ವಕ್ತಾರ ಮಹೇಶ್ ಜೈನಿ, ಉಪಾಧ್ಯಕ್ಷ ಬಿ.ಕೆ.ಅರುಣ್‌ಕುಮಾರ್, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಮಡಿಕೇರಿ ನಗರಾಧ್ಯಕ್ಷ ಮನು ಮಂಜುನಾಥ್, ಉಪಾಧ್ಯಕ್ಷ ಬಿ.ಕೆ. ಜಗದೀಶ್, ನಗರಸಭಾ ಸದಸ್ಯರುಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.