ಶನಿವಾರಸAತೆ, ಜೂ. ೫ : ಅಂಕನಹಳ್ಳಿ-ಮೆಣಸ ಗ್ರಾಮದ ಊರುಗುಪ್ಪೆ ಜಾಗ ಮಂಜೂರಾತಿಗೆ ಶಿಫಾರಸ್ಸು ಮಾಡಿರುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯ ಚಾಲನಾ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಶನಿವಾರಸಂತೆ ನಾಡಕಚೇರಿ ಮುಂಭಾಗ ೩ ಗಂಟೆ ಕಾಲ ಧರಣಿ ಸತ್ಯಾಗ್ರಹ ನಡೆಯಿತು. ಧರಣಿ ಸತ್ಯಾಗ್ರಹ ನಿರತ ದಸಂಸ ಪದಾಧಿಕಾರಿಗಳು ಕ್ರಮಕ್ಕಾಗಿ ಉಪತಹಶೀಲ್ದಾರ್ ಮುಖಾಂತರ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.

ಅಧಿಕಾರಿಗಳು ಊರುಗುಪ್ಪೆ ಜಾಗವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲು ಶಿಫಾರಸ್ಸು ಮಾಡಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಈ ಜಾಗ ಮನೆ ನಿರ್ಮಾಣ ಆಸ್ಪತ್ರೆ, ಸಮುದಾಯ ಭವನ ಹಾಗೂ ಅಂಗನವಾಡಿ ಕಟ್ಟಡ ನಿರ್ಮಿಸಲು ಅವಕಾಶವಿರುತ್ತದೆ. ಒಬ್ಬ ವ್ಯಕ್ತಿಗೆ ವ್ಯವಸಾಯಕ್ಕೆ ಮಂಜೂರು ಮಾಡಲು ಅವಕಾಶವಿರುವುದಿಲ್ಲ. ಆದರೆ, ಹೋಬಳಿ ವ್ಯಾಪ್ತಿಯ ಮನೆಹಳ್ಳಿ ಗ್ರಾಮದ ಸರ್ವೆ ನಂ.೧೦/೧ ರ ಜಾಗವನ್ನು ಗ್ರಾಮದ ವ್ಯಕ್ತಿಯೊಬ್ಬರಿಗೆ ಕಂದಾಯ ಪರಿವೀಕ್ಷಕರ ಶಿಫಾರಸ್ಸಿನ ಅನ್ವಯ ತಹಶೀಲ್ದಾರ್ ಮಂಜೂರು ಮಾಡಿದ್ದಾರೆ.

ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಒ ಅವರು ತಮ್ಮ ಕಚೇರಿಯ ನಾಮಫಲಕದಲ್ಲಿ ಈ ಜಾಗ ಮಂಜೂರು ಮಾಡಲು ಯಾರದಾದರೂ ಆಕ್ಷೇಪಣೆಗಳಿದ್ದಲ್ಲಿ ಆಕ್ಷೇಪಣೆಯನ್ನು ತಿಳುವಳಿಕೆ ಪತ್ರದ ಮೂಲಕ ಸಲ್ಲಿಸುವಂತೆ ತಿಳಿಸಿದ್ದರು. ಮೆಣಸ ಗ್ರಾಮದ ಎನ್.ಎಂ.ರಾಜಪ್ಪ ಆಕ್ಷೇಪಣಾ ಪತ್ರ ಸಲ್ಲಿಸಿದ್ದರೂ ಈವರೆಗೂ ಯಾವ ಕ್ರಮ ಕೈಗೊಂಡಿಲ್ಲ. ಈ ಸರ್ವೆ ನಂಬರ್ ನಲ್ಲಿ ೧.೨೫ ಎಕರೆ ಮಂಜೂರು ಮಾಡಿ ದಾಖಲೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಕಂದಾಯ ಪರಿವೀಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರು ಅರ್ಜಿ ಸಲ್ಲಿಸಿದ್ದರೂ ಸಹ ಕ್ರಮ ಕೈಗೊಂಡಿರುವುದಿಲ್ಲ.

ಇವರ ಮೇಲೆ ಕಾನೂನಿನ ಕ್ರಮ ಕೈಗೊಂಡು ಸೇವೆಯಿಂದ ಅಮಾನತು ಗೊಳಿಸಬೇಕು ಎಂದು ಆಗ್ರಹಿಸಿದರು. ದಸಂಸ ಚಾಲನ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ಎನ್.ರಾಜಪ್ಪ, ಹೋಬಳಿ ಘಟಕದ ಕಾರ್ಯಾಧ್ಯಕ್ಷೆ ಎಚ್.ಬಿ.ಜಯಮ್ಮ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. ತಾಲೂಕು ಸಂಚಾಲಕ ಹೊನ್ನಪ್ಪ, ಎಂ.ಆರ್.ಕುಶಾಲಪ್ಪ, ಹೋಬಳಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಕೆ.ಡಿ.ಜಗದೀಶ್, ಪದಾಧಿಕಾರಿಗಳಾದ ಎಂ.ಆರ್. ಮಲ್ಲೇಶ್, ವೀರಭದ್ರ, ರಾಜಮ್ಮ, ರಾಜಪ್ಪ ಇತರರು ಪಾಲ್ಗೊಂಡಿದ್ದರು. ಧರಣಿ ನಂತರ ಶನಿವಾರಸಂತೆಗೆ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಶಾಸಕ ಡಾ.ಮಂಥರ್ ಗೌಡ ಹಾಗೂ ಜಿಲ್ಲಾಧಿಕಾರಿಯವರಿಗೂ ಧರಣಿನಿರತ ದಸಂಸ ಪದಾಧಿಕಾರಿಗಳು ಮನವಿಪತ್ರ ಸಲ್ಲಿಸಿದರು.