ಮಡಿಕೇರಿ, ಜೂ. ೫: ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವಾಗ, ಅಂತಹವರ ಫೋಟೋ ಕ್ಲಿಕ್ಕಿಸಿ ಕಳುಹಿಸಿದಲ್ಲಿ, ತಪ್ಪಿತಸ್ಥರಿಗೆ ದಂಡ ವಿಧಿಸಲಾಗುವುದಾಗಿ ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಅವರು ಹೇಳಿದರು. ಕ್ಲೀನ್ ಕೂರ್ಗ್ ಇನಿಷಿಯೇಟಿವ್, ಮಡಿಕೇರಿ ನಗರಸಭೆ, ಗ್ರೀನ್ ಸಿಟಿ ಫೋರಂ, ರೋಟರಿ ಮಿಸ್ಟಿ ಹಿಲ್ಸ್, ರೆಡ್‌ಕ್ರಾಸ್ , ಲಯನ್ಸ್ ಕ್ಲಬ್, ಇನ್ನರ್ ವೀಲ್ ಹಾಗೂ ಸ್ಕೌಟ್ಸ್ ಐಂಡ್ ಗೈಡ್ಸ್ ಸಹಯೋಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಎಸೆಯದೆ ಜವಾಬ್ದಾರಿಯುತವಾಗಿ ಕಸ ವಿಲೇವಾರಿಗೆ ಮುಂದಾಗಬೇಕು. ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನವು ಪ್ರತಿನಿತ್ಯ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುತ್ತದೆ. ಒಂದು ವೇಳೆ, ವಾಹನ ತಮ್ಮ ಮನೆಗೆ ಬರದೇ ಹೋದಲ್ಲಿ ನಗರಸಭೆಗೆ ಮಾಹಿತಿ ನೀಡಿದರೆ, ವಾಹನವನ್ನು ಕಳುಹಿಸಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಕಸವನ್ನು ರಸ್ತೆ ಬದಿಗಳಲ್ಲಿ ಎಸೆಯಬೇಡಿ ಎಂದರು.
ಕ್ಲೀನ್ ಕೂರ್ಗ್ ಇನಿಷಿಯೇಟಿವ್‌ನ ಅರುಣ್ ಅಪ್ಪಚ್ಚು ಮಾತನಾಡಿ, ಊಟಿಯಲ್ಲಿನ ಪ್ರವೇಶ ದ್ವಾರದಲ್ಲಿಯೇ ನಗರಕ್ಕೆ ಒಳಬರುವ ಪ್ರವಾಸಿಗರನ್ನು ತಡೆದು , ಬಿಗಿ ತಪಾಸಣೆ ಮಾಡಿ ಪ್ಲಾಸ್ಟಿಕ್ ಬಾಟಲಿ ಹಾಗೂ ಪದಾರ್ಥಗಳನ್ನು ನಗರದೊಳಗೆ ತರದಂತೆ ಕ್ರಮ ಕೈಗೊಳ್ಳಲಾಗಿದೆ. ಆ ಮೂಲಕ ಊಟಿಯು ಪ್ಲಾಸ್ಟಿಕ್ ಮುಕ್ತವಾಗಿದೆ. ಆದರೆ ಊಟಿಯಂತೆಯೇ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೊಡಗು ಜಿಲ್ಲೆಯು ಪ್ಲಾಸ್ಟಿಕ್ ಮುಕ್ತವಾಗಿಲ್ಲ. ಊಟಿ ಮಾದರಿಯಲ್ಲಿಯೇ ಜಿಲ್ಲೆಯಲ್ಲಿನ ಪ್ರವೇಶ ದ್ವಾರಗಳಲ್ಲಿ ಈ ರೀತಿ ಮಾಡಿದಲ್ಲಿ ಕೊಡಗು ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಬಹುದಾಗಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ನ ಬೇಬಿ ಮ್ಯಾಥ್ಯೂ, ಲಯನ್ಸ್ ಕ್ಲಬ್‌ನ ಕವಿತಾ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಅನಂತಶಯನ ಅವರುಗಳು ಈ ಸಂದರ್ಭ ಮಾತನಾಡಿದರು.
ಈ ಸಂದರ್ಭ ಮಡಿಕೇರಿಗೆ ಆಗಮಿಸುತ್ತಿದ್ದ ಹಾಗೂ ಮಡಿಕೇರಿಯಿಂದ ತೆರಳುತ್ತಿದ್ದ ವಾಹನಗಳನ್ನು ನಿಲ್ಲಿಸಿ, ವಾಹನಗಳಲ್ಲಿ ತ್ಯಾಜ್ಯ ವಸ್ತು ಇದ್ದಲ್ಲಿ ಅದನ್ನು ಸಂಗ್ರಹಿಸಿ ರಸ್ತೆ ಬದಿಗಳಲ್ಲಿ ಕಸ ಎಸೆಯದಂತೆ ಅರಿವು ಮೂಡಿಸಲಾಯಿತು. ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಸದಸ್ಯರು ಮೂರ್ನಾಡು ಹಾಗೂ ಮಡಿಕೇರಿಯಿಂದ ಸೈಕಲ್ ಮೂಲಕ ಆಗಮಿಸಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡರು.