ಸೋಮವಾರಪೇಟೆ, ಜೂ. ೩: ಮಳೆಗಾಲದಲ್ಲಿ ಎದುರಾಗಬಹುದಾದ ಪ್ರಾಕೃತಿಕ ವಿಕೋಪಗಳು, ಹಾನಿಯಂತಹ ಘಟನೆಗಳಲ್ಲಿ ತಕ್ಷಣ ಸ್ಪಂದಿಸಲು ಎಲ್ಲಾ ಇಲಾಖೆಗಳು ಸಿದ್ದಗೊಳ್ಳಬೇಕು. ಪರಸ್ಪರ ಹೊಂದಾಣಿಕೆಯಿAದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಸೂಚನೆ ನೀಡಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪಗಳು ಸಂಭವಿಸಿದ ತಕ್ಷಣ ಸ್ಥಳಕ್ಕೆ ತೆರಳಿ ತುರ್ತು ಸ್ಪಂದನೆ ನೀಡಬೇಕು. ಸರ್ಕಾರದ ವತಿಯಿಂದ ಆಗಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ತಾವು ಸಿದ್ಧ ಎಂದು ಭರವಸೆ ನೀಡಿದರು.

ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳು, ರಸ್ತೆಗಳ ಬಗ್ಗೆ ಈಗಲೇ ಮಾಹಿತಿ ಹೊಂದಕೊಳ್ಳಬೇಕು. ರಸ್ತೆಗಳಿಗೆ ಮರಗಳು ಬೀಳುವ ಸಂದರ್ಭ ತ್ವರಿತವಾಗಿ ತೆರವುಗೊಳಿಸಬೇಕು. ಮನೆಗಳು ಹಾನಿಯಾದರೆ ಶೀಘ್ರ ಪರಿಹಾರ ನೀಡಬೇಕು. ಬದಲಿ ವ್ಯವಸ್ಥೆಯೊಂದಿಗೆ ಕಾಳಜಿ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿ ವರ್ಗಕ್ಕೆ ನಿರ್ದೇಶನ ನೀಡಿದರು.

ಟಾಸ್ಕ್ ಫೋರ್ಸ್ ಸಮಿತಿಯ ಮೂಲಕ ತಾಲೂಕಿನ ಎಲ್ಲಾ ಭಾಗದ ಮಾಹಿತಿ ಪಡೆಯಬೇಕೆಂದು ತಿಳಿಸಿದ ಡಾ. ಮಂಥರ್‌ಗೌಡ, ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಹಾಗೂ ಒಳ ಹರಿವಿನ ಬಗ್ಗೆ ನಿಗಾ ವಹಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗೆ ಸೂಚಿಸಿದರು.

ಡೆಂಗ್ಯೂ ಭೀತಿ-ಕ್ರಮಕ್ಕೆ ನಿರ್ದೇಶನ: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಈ ಬಗ್ಗೆ ಆರೋಗ್ಯ ಇಲಾಖೆ ನಿಗಾ ವಹಿಸಬೇಕು. ಡೆಂಗ್ಯೂ ಹರಡುವ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ನೀರು ಸಂಗ್ರಹಣೆಗೊಳ್ಳದAತೆ ಎಚ್ಚರಿಕೆ ವಹಿಸಬೇಕು.

(ಮೊದಲ ಪುಟದಿಂದ) ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಈ ಬಗ್ಗೆ ಸೂಚನೆ ನೀಡುವ ಮೂಲಕ ಶುಚಿತ್ವಕ್ಕೆ ಆದ್ಯತೆ ನೀಡಬೇಕೆಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರಿಗೆ ನಿರ್ದೇಶನ ನೀಡಿದರು.

ವಿದ್ಯುತ್ ಇಲಾಖೆಯವರು ಗುಣಮಟ್ಟದ ಕಂಬಗಳನ್ನು ಅಳವಡಿಸಬೇಕು. ಮಳೆಗಾಲಕ್ಕೂ ಮುನ್ನ ಜಂಗಲ್ ಕಟ್ಟಿಂಗ್ ಮುಗಿಸಬೇಕು. ಮಳೆಗಾಲದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆ ಬಿದ್ದರೆ ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಅಭಿಯಂತರ ಅಶೋಕ್ ಅವರಿಗೆ ತಿಳಿಸಿದರು.

ತಾಲೂಕಿನಲ್ಲಿ ೧೬ ಪಶು ಆಸ್ಪತ್ರೆಗಳಿದ್ದು, ೬೧ ಸಿಬ್ಬಂದಿಗಳಿರಬೇಕಾದ ಸ್ಥಳದಲ್ಲಿ ಕೇವಲ ೧೫ ಮಂದಿ ಮಾತ್ರ ಇದ್ದೇವೆ. ೧೦ ಮಂದಿ ವೈದ್ಯರ ಪೈಕಿ ಈರ್ವರೇ ಕೆಲಸ ಮಾಡುತ್ತಿದ್ದೇವೆ ಎಂದು ಅಧಿಕಾರಿ ಡಾ. ಬದಾಮಿ ಅವರು ಶಾಸಕರ ಗಮನ ಸೆಳೆದರು. ಸಿಬ್ಬಂದಿಗಳ ನೇಮಕಕ್ಕೆ ಕ್ರಮ ವಹಿಸುವುದಾಗಿ ಮಂಥರ್ ಗೌಡ ಭರವಸೆ ನೀಡಿದರು.

ಪ್ರಾಕೃತಿಕ ವಿಕೋಪ ಎದುರಾದರೆ ಜಾನುವಾರುಗಳ ರಕ್ಷಣೆ ಹಾಗೂ ಪಾಲನೆಗಾಗಿ ಗೋ ಶಾಲೆಗಳನ್ನು ಬಳಸಿಕೊಳ್ಳಲಾಗುವುದು. ಕೆ.ನಿಡುಗಡೆಯಲ್ಲಿ ಸರ್ಕಾರಿ ಗೋ ಶಾಲೆಯಿದ್ದು, ಅಂಕನಳ್ಳಿ ಮತ್ತು ಚಿಕ್ಕತ್ತೂರಿನಲ್ಲಿ ಖಾಸಗಿ ಗೋಶಾಲೆಗಳಿವೆ. ಇವುಗಳನ್ನೂ ಸಹ ಅಗತ್ಯ ಸಂದರ್ಭ ಬಳಕೆ ಮಾಡಲಾಗುವುದು. ಈಗಾಗಲೇ ಜಾನುವಾರುಗಳ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ಬಂದಿದ್ದು, ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳ ಸಂಗ್ರಹವಿದೆ ಎಂದು ಡಾ. ಬದಾಮಿ ಹೇಳಿದರು.

ತಾಲೂಕಿನಲ್ಲಿ ೨೩೧ ಶಾಲೆಗಳಿದ್ದು, ೧೬೧ ಸರ್ಕಾರಿ ಶಾಲೆಗಳಿವೆ. ಕಟ್ಟಡ ಹಾಗೂ ಮಕ್ಕಳ ಸುರಕ್ಷತೆಗೆ ಸಂಬAಧಿಸಿದAತೆ ಮುಖ್ಯೋಪಾಧ್ಯಾಯರುಗಳ ಸಭೆ ನಡೆಸಿ ನಿರ್ದೇಶನಗಳನ್ನು ನೀಡಲಾಗಿದೆ. ೧೦೦ ಶಾಲೆಗಳಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳು ಆಗಬೇಕಿವೆ. ನೀರುಗುಂದ, ಶಾಂತಳ್ಳಿ, ಕೊತ್ನಳ್ಳಿಯಲ್ಲಿ ನೂತನ ಕೊಠಡಿಗಳ ಅವಶ್ಯಕತೆಯಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಸಭೆಯ ಗಮನ ಸೆಳೆದರು.

ನೂತನ ಕೊಠಡಿಗಳು ಅವಶ್ಯವಿರುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕರು ಸೂಚಿಸಿದರು. ಮಳೆಗಾಲದಲ್ಲಿ ಕಾಳಜಿ ಕೇಂದ್ರಗಳ ಸ್ಥಾಪನೆ ಅವಶ್ಯ ಬಿದ್ದಲ್ಲಿ ಶಾಲಾ ಕೊಠಡಿಗಳನ್ನು ಒದಗಿಸುವಂತೆ ತಿಳಿಸಿದರು.

ಆರೋಗ್ಯ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ, ಕಟ್ಟಡಗಳ ಬೇಡಿಕೆ ಇರುವ ಬಗ್ಗೆ ಡಾ. ಇಂದೂಧರ್ ಅವರು ಶಾಸಕರ ಗಮನ ಸೆಳೆದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಸಂಬAಧಿಸಿದ ಸಚಿವರಾದ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮವಹಿಸುವುದಾಗಿ ಶಾಸಕರು ಭರವಸೆ ನೀಡಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದ್ದು, ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ. ೫೦೦ ಮೀಟರ್ ರಾಜಕಾಲುವೆ ದುರಸ್ತಿಗೊಳಿಸಲಾಗಿದ್ದು, ಚರಂಡಿಗಳನ್ನು ಸ್ವಚ್ಚಗೊಳಿಸಲಾಗಿದೆ. ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.

ಸೋಮವಾರಪೇಟೆ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವ ಬಗ್ಗೆ ಮಾಹಿತಿ ಪಡೆದ ಶಾಸಕರು, ಈ ಕಾಮಗಾರಿ ನಿರ್ವಹಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಪಟ್ಟಣ ಪಂಚಾಯಿತಿಯಲ್ಲಿ ಖಾಯಂ ಅಭಿಯಂತರ, ಪ್ರಥಮ ದರ್ಜೆ ಸಹಾಯಕ, ಕಂದಾಯ ನಿರೀಕ್ಷಕ, ಬಿಲ್ ಕಲೆಕ್ಟರ್ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಕ್ರಮವಹಿಸುವಂತೆ ಮುಖ್ಯಾಧಿಕಾರಿ ಮನವಿ ಮಾಡಿದರು.

ಪಟ್ಟಣ ಸೇರಿದಂತೆ ಹೊರ ವಲಯದ ಚೌಡ್ಲು, ಹಾನಗಲ್ಲು, ಬೇಳೂರು, ನಗರೂರು, ಬಜೆಗುಂಡಿ ಗ್ರಾಮಗಳಲ್ಲಿ ರಸ್ತೆಯ ಬದಿಯಲ್ಲಿಯೇ ಕಸ ಎಸೆಯಲಾಗುತ್ತಿದೆ. ಇದಕ್ಕೆ ಸ್ಥಳೀಯ ಗ್ರಾ.ಪಂ.ಗಳು ಕಡಿವಾಣ ಹಾಕಬೇಕೆಂದು ಕಾರ್ಯನಿರ್ವ ಹಣಾಧಿಕಾರಿಗೆ ಸೂಚನೆ ನೀಡಲಾಯಿತು.

ಎಸಿಎಫ್ ಗೋಪಾಲ್ ಮಾತನಾಡಿ, ಅರಣ್ಯ ಇಲಾಖೆಯಿಂದ ಆರ್‌ಆರ್‌ಟಿ ತಂಡವನ್ನು ರಚಿಸಲಾಗಿದೆ. ರಸ್ತೆಗೆ ಮರಗಳು ಬಿದ್ದ ತಕ್ಷಣ ತೆರವು ಮಾಡಲಾಗುವುದು. ಇದರೊಂದಿಗೆ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು. ಈಗಾಗಲೇ ೭ ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಒಟ್ಟಾರೆ ಪ್ರಸಕ್ತ ಸಾಲಿನ ಮಳೆಗಾಲವನ್ನು ಎಲ್ಲಾ ಅಧಿಕಾರಿಗಳು ಹೊಂದಾಣಿಕೆ ಮತ್ತು ಪರಸ್ಪರ ಸಹಕಾರದಿಂದ ಎದುರಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಯಾದಲ್ಲಿ ತಕ್ಷಣ ಸ್ಪಂದಿಸಬೇಕು. ಸರ್ಕಾರದಿಂದ ಆಗಬೇಕಾದ ಪರಿಹಾರಗಳ ಬಗ್ಗೆ ಗಮನಕ್ಕೆ ತರಬೇಕು. ಅಧಿಕಾರಿಗಳ ನಡುವೆ ಸಹಕಾರವಿದ್ದಲ್ಲಿ ಮಾತ್ರ ಕ್ಲಿಷ್ಟಕರ ಪರಿಸ್ಥಿತಿಗಳನ್ನು ಎದುರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಶಾಸಕ ಮಂಥರ್ ಗೌಡ ತಿಳಿಸಿದರು.

ಸಭೆಯಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ, ಕುಶಾಲನಗರ ತಾಲೂಕು ತಹಶಿಲ್ದಾರ್ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

-ವಿಜಯ್ ಹಾನಗಲ್