ಸಿದ್ದಾಪುರ, ಜೂ. ೪: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿತೀರದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆ ಮರೀಚಿಕೆಯಾಗಿದೆ. ಕಳೆದ ೩ ವರ್ಷಗಳ ಹಿಂದೆ ಕಾವೇರಿ ನದಿಯಲ್ಲಿ ಪ್ರವಾಹ ಏರಿಕೆಯಾಗಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು-ಗುಹ್ಯ ಗ್ರಾಮದಲ್ಲಿ ನೂರಾರು ಮನೆಗಳು ನೆಲಸಮಗೊಂಡಿದ್ದವು. ಮನೆ ಕಳೆದುಕೊಂಡ ಹಲವಾರು ಕುಟುಂಬಗಳು ಕರಡಿಗೋಡಿನ ಸಮುದಾಯಭವನ ಹಾಗೂ ಮಸೀದಿ ಶಾಲೆಗಳಲ್ಲಿ ಕೆಲ ತಿಂಗಳು ಆಶ್ರಯ ಪಡೆದುಕೊಂಡರು. ಪ್ರವಾಹ ಇಳಿಮುಖಗೊಂಡ ನಂತರ ತಾವು ಈ ಹಿಂದೆ ವಾಸ ಮಾಡಿಕೊಂಡಿದ್ದ ನದಿ ತೀರದಲ್ಲೇ ಪ್ಲಾಸ್ಟಿಕ್ ಹೊದಿಕೆಯ ಮೂಲಕ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ತಮ್ಮ ಸಂಸಾರದೊAದಿಗೆ ಜೀವನ ಸಾಗಿಸುತ್ತಿದ್ದಾರೆ.

ಭರವಸೆಗಳ ಮಹಾಪೂರ

ವರ್ಷಂಪ್ರತಿ ಪ್ರವಾಹ ಸಂದರ್ಭದಲ್ಲಿ ಕರಡಿಗೋಡಿನ ನದಿ ತೀರದ ಬಹುತೇಕ ಮನೆಗಳು ಜಲಾವೃತಗೊಳ್ಳುತ್ತವೆ. ಪ್ರವಾಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸುತ್ತಿವೆ. ಜನಪ್ರತಿನಿಧಿಗಳು ಭರವಸೆಗಳನ್ನು ನೀಡಿ ತೆರಳುತ್ತಾರೆ. ಪ್ರವಾಹದ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳಿಗೆ ಹಿಂದಿನ ಸರ್ಕಾರದ ಕಂದಾಯ ಸಚಿವರಾದ ಅಶೋಕ್, ಗ್ರಾಮೀಣ ಅಭಿವೃದ್ಧಿ ಪಂಚಾಯತ್‌ರಾಜ್ ಮಾಜಿ ಸಚಿವ ಈಶ್ವರಪ್ಪ ಇನ್ನಿತರ ಜನಪ್ರತಿನಿಧಿಗಳು ಭೇಟಿ ನೀಡಿದ್ದರು. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ದರು. ಪುನರ್ವಸತಿಯ ಭರವಸೆಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವೀರಾಜಪೇಟೆಯ ತಾಲೂಕಿನ ಬಿಟ್ಟಂಗಾಲ ಸಮೀಪದ ಬಿ.ಶೆಟ್ಟಿಗೇರಿ ಎಂಬಲ್ಲಿ ೧೦ ಎಕರೆ ಒತ್ತುವರಿ ಭೂಮಿಯನ್ನು ವಶಪಡೆದುಕೊಂಡಿತ್ತು. ನಂತರ ಆ ಜಾಗದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಪುನರ್ವಸತಿ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಯಿತು.

ಸಂತ್ರಸ್ತರ ನಿರಾಕರಣೆ

ಈ ಸಂಬAಧ ಜಿಲ್ಲಾ ಉಪವಿಭಾಗಾಧಿಕಾರಿ ಅವರ ಸಮ್ಮುಖದಲ್ಲಿ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ಸಂತ್ರಸ್ತರಿಗೆ ಸಿದ್ದಾಪುರ ಗ್ರಾ.ಪಂ ಸಭಾಂಗಣದಲ್ಲಿ ಟೋಕನ್‌ಗಳನ್ನು ವಿತರಿಸಲು ಸಿದ್ಧತೆ ಕೈಗೊಂಡರು. ಆದರೆ ನೂರಾರು ಸಂತ್ರಸ್ತರು ತಮಗೆ ಬಿ.ಶೆಟ್ಟಿಗೇರಿಯಲ್ಲಿ ನಿವೇಶನಗಳು ಬೇಡವೆಂದು ನಿರಾಕರಿಸಿದರು. ತಮಗೆ ಸಿದ್ದಾಪುರ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದರು. ಬಿ.ಶೆಟ್ಟಿಗೇರಿ ಬಹಳ ದೂರವಾಗಿದ್ದು ಅಲ್ಲಿ ಕೂಲಿ ಕೆಲಸಗಳು ಕಡಿಮೆ ಇದ್ದು ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪುನರ್ವಸತಿ ನೀಡಬೇಕೆಂದು ಬಿಗಿಪಟ್ಟು ಹಿಡಿದರು.

ಪುನರ್ ವಸತಿಗಾಗಿ ಹೋರಾಟ

ಇದಾದ ನಂತರ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸಂತ್ರಸ್ತರ ಹೋರಾಟ ಸಮಿತಿ ಮೂಲಕ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಹೋರಾಟ ಮಾಡಲಾಯಿತು. ಆದರೆ ಈವರೆಗೂ ಸಿದ್ದಾಪುರದ ಸಂತ್ರಸ್ತ ಕುಟುಂಬಗಳಿಗೆ ನಿವೇಶನ ಲಭಿಸಲಿಲ್ಲ. ಸಂತ್ರಸ್ತರು ಸಂಕಷ್ಟದಲ್ಲೇ ದಿನ ದೂಡುತ್ತಿದ್ದಾರೆ. ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡಿದ್ದಲ್ಲದೇ, ಕೆಲವರ ಮನೆಗಳ ಭಾಗಶಃ ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದೆ. ನದಿ ತೀರದ ನಿವಾಸಿಗಳು ಭಯದಿಂದಲೇ ದಿನದೂಡುತ್ತಿದ್ದಾರೆ. ಈ ಭಾಗದ ಸಂತ್ರಸ್ತರಿಗೆ ಇದೀಗ ಪುನರ್ವಸತಿಗೆ ಮತ್ತೆ ಎಲ್ಲಿಯೂ ಜಾಗ ಗುರುತಿಸಲಿಲ್ಲ ಎನ್ನಲಾಗಿದೆ. ಮನೆ ಕಳೆದುಕೊಂಡ ಕೆಲವು ಸಂತ್ರಸ್ತರಲ್ಲಿ ಮುಂದೇನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ.

ಆತಂಕ ಆರಂಭ

ಇದೀಗ ಮಳೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಹ ಬಂದಲ್ಲಿ ಮತ್ತೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಸಿದ್ದಾಪುರ ವ್ಯಾಪ್ತಿಯ ಗುಹ್ಯ ಗ್ರಾಮದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ಕಂದಾಯ ಇಲಾಖಾಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡರು.

ಆದರೆ ವರ್ಷಂಪ್ರತಿ ಮಳೆಗಾಲ ಸಂದರ್ಭದಲ್ಲಿ ಪ್ರವಾಹಪೀಡಿತ ಗ್ರಾಮಗಳಾದ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ತೀರದ ನಿವಾಸಿಗಳ ಗೋಳು ಹೇಳತೀರದ್ದು. ಮಳೆಗಾಲ ಆರಂಭವಾಗುವ ಮುಂಚಿತ ಜಿಲ್ಲಾಡಳಿತದ ವತಿಯಿಂದ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಂದಾಯ ಇಲಾಖಾಧಿಕಾರಿಗಳ ಮುಖಾಂತರ ನೋಟೀಸ್ ಜಾರಿ ಮಾಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ನೋಟೀಸ್ ಜಾರಿ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲವೆಂದು ನದಿ ತೀರದ ನಿವಾಸಿಗಳ ಅಭಿಪ್ರಾಯವಾಗಿದ್ದು, ವರ್ಷಂಪ್ರತಿ ಪ್ರವಾಹ ಸಂದರ್ಭದಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ತೆರೆದು ಆಶ್ರಯ ನೀಡುವ ಬದಲು ತಮಗೆ ತಮ್ಮ ಕುಟುಂಬದೊAದಿಗೆ ಜೀವನ ನಡೆಸಲು ಸುರಕ್ಷಿತ ಸ್ಥಳದಲ್ಲಿ ಶಾಶ್ವತ ಸೂರು ಕಲ್ಪಿಸಿಕೊಟ್ಟಲ್ಲಿ ಪ್ರವಾಹದಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ಬಾಡಿಗೆ ಸಮರ್ಪಕವಾಗಿ ಸಿಗದೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸ್ಪಂದಿಸಿ ಶಾಶ್ವತ ಸೂರು ಕಲ್ಪಿಸಿಕೊಡಲಿ ಎಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.

ನೆಲ್ಯಹುದಿಕೇರಿ ಸಂತ್ರಸ್ತರಿಗೆ ಸಂಕಷ್ಟ: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ೨೦೧೯ರಲ್ಲಿ ಪ್ರವಾಹಕ್ಕೆ ಸಿಲುಕಿ ಕುಂಬಾರಗುAಡಿ, ಬೆಟ್ಟದಕಾಡು ಭಾಗದಲ್ಲಿ ನೂರಾರು ಮನೆಗಳು ನೆಲಸಮಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ನೆಲ್ಯಹುದಿಕೇರಿಯ ಪರಿಹಾರ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕಂದಾಯ ಸಚಿವರಾದ ಆರ್. ಅಶೋಕ್ ಭೇಟಿ ನೀಡಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಜಾಗ ಗುರುತಿಸುವಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅರೆಕಾಡು ಬಳಿ ಸುಮಾರು ೮ ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ೪ ವರ್ಷಗಳ ಹಿಂದೆ ವಶಪಡಿಸಿಕೊಳ್ಳಲಾಯಿತು. ಆ ಜಾಗದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಂತ್ರಸ್ತರಿಗೆ ಟೋಕನ್‌ಗಳನ್ನು ಶಾಸಕರ ಸಮ್ಮುಖದಲ್ಲಿ ಹಂಚಿಕೆ ಮಾಡಲಾಯಿತು., ಆದರೆ ಪುನರ್ವಸತಿಗೆ ಗುರುತಿಸಿದ ಸ್ಥಳದಲ್ಲಿ ಈವರೆಗೂ ಜಿಲ್ಲಾಡಳಿತ ಯಾವುದೇ ಕಾಮಗಾರಿಗಳನ್ನು ಮಾಡದೇ ೪ ವರ್ಷಗಳಿಂದ ಸಂತ್ರಸ್ತರನ್ನು ಸತಾಯಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸಂತ್ರಸ್ತರಿಗೆ ಗುರುತಿಸಿದ ಪುನರ್ವಸತಿ ಜಾಗವು ಕಾಡುಪಾಲಾಗಿದೆ.

ಸಂತ್ರಸ್ತರು ಪ್ರತಿವರ್ಷವು ಮಳೆಗಾಲದಲ್ಲಿ ಯಾತನೆ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪುನರ್ವಸತಿಯ ಭರವಸೆಯನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆಂದು ಸಂತ್ರಸ್ತರು ದೂರಿದ್ದಾರೆ. ಮನೆ ಕಳೆದುಕೊಂಡ ಸಂತ್ರಸ್ತರು ಅದೇ ಜಾಗದಲ್ಲಿ ಪ್ಲಾಸ್ಟಿಕ್ ಶೆಡ್ಡಿನಲ್ಲೇ ತಮ್ಮ ಸಂಸಾರದೊAದಿಗೆ ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸದಿದ್ದಲ್ಲಿ ಸಂತ್ರಸ್ತರನ್ನು ಒಗ್ಗೂಡಿಸಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದೆಂದು ನೆಲ್ಯಹುದಿಕೇರಿಯ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷರಾದ ಪಿ.ಆರ್ ಭರತ್ ತಿಳಿಸಿದ್ದಾರೆ.

ಇದೀಗ ಸಂತ್ರಸ್ತರಿಗೆ ಗುರುತಿಸಿದ ಪುನರ್ವಸತಿ ಜಾಗದಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಯತ್ನದಿಂದ ಕಿರು ಸೇತುವೆ ಒಂದನ್ನು ನಿರ್ಮಾಣ ಮಾಡಲಾಗಿದೆ ಹೊರತು ನಿವೇಶನದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಈ ವರ್ಷವೂ ಕೂಡ ಪುನರ್ವಸತಿಯ ಕಾಮಗಾರಿಗಳು ಆರಂಭವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದ್ದು, ಕೊಡಗು ಜಿಲ್ಲೆಯ ಎರಡು ಕೇತ್ರಗಳಲ್ಲೂ ನೂತನ ಶಾಸಕರು ಆಯ್ಕೆಯಾಗಿದ್ದು, ಇವರುಗಳು ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕೆAದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ವರದಿ : ಎ.ಎನ್. ವಾಸು