ಮಡಿಕೇರಿ, ಜೂ. ೨: ಮಾಂದಲಪಟ್ಟಿ ಹಾಗೂ ಅಬ್ಬಿ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಿಳಿ ಫಲಕ ವಾಹನಗಳನ್ನು ಹಳದಿ ಫಲಕ ವಾಹನಗಳಾಗಿ ಪರಿವರ್ತಿಸುವ ವಿಧಾನ ಹಾಗೂ ಇದಕ್ಕೆ ಪಾವತಿಸಬೇಕಾದ ಶುಲ್ಕ ಹಾಗೂ ತೆರಿಗೆಯ ಬಗ್ಗೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರಿಗೆ ಅಧಿಕಾರಿ ಮಧುರ ಎಸ್.ಎನ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಖಾಸಗಿ ಜೀಪು ಮಾಲೀಕರ ಸಂಘದ ಸದಸ್ಯರು ಭಾಗವಹಿಸಿ ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡರು. ಯಾವುದೇ ಕಾರಣಕ್ಕೂ ಬಿಳಿ ಫಲಕ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯಲು ಅವಕಾಶ ಇಲ್ಲದಿರುವ ಬಗ್ಗೆ ಈ ಸಂದರ್ಭ ಜೀಪು ಮಾಲೀಕರಿಗೆ ಮನದಟ್ಟು ಮಾಡಲಾಯಿತು. ಪ್ರಸ್ತುತ ಇರುವ ಬಿಳಿ ಫಲಕವನ್ನು ಹಳದಿಯಾಗಿ ಪರಿವರ್ತಿಸಲು ಸುಗಮವಾಗಿ, ಶೀಘ್ರವಾಗಿ ನಿಯಮಾನುಸಾರ ಸಾರಿಗೆ ಕಚೇರಿಯಿಂದ ಸಹಕಾರ ನೀಡುವುದಾಗಿ ಸಾರಿಗೆ ಅಧಿಕಾರಿ ಹೇಳಿದರು. ಆಸಕ್ತರು ಅರ್ಜಿ ಸಲ್ಲಿಸುವಂತೆ, ಅರ್ಜಿಗಳನ್ನು ಪ್ರಥಮ ಆದ್ಯತೆ ಮೇರೆಗೆ ವಿಲೇವಾರಿ ಮಾಡುವುದಾಗಿಯೂ ಮಾಹಿತಿ ಇತ್ತರು.