ಸಿದ್ದಾಪುರ, ಜೂ. ೨: ತಲೆಮರೆಸಿಕೊಂಡಿದ್ದ ಫೋಕ್ಸೊ ಪ್ರಕರಣದ ಆರೋಪಿ ಹಾಗೂ ಆತನ ಸ್ನೇಹಿತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಎಂದು ಇಬ್ಬರ ಭಾವಚಿತ್ರಗಳು ಹರಿದಾಡುತ್ತಿತ್ತು. ಆ ವ್ಯಕ್ತಿಗಳನ್ನು ಪತ್ತೆಹಚ್ಚಿದ ಸ್ಥಳೀಯರು ಸಿದ್ದಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದ ಸಂದರ್ಭ ಅವರಿಬ್ಬರು ಮಕ್ಕಳ ಕಳ್ಳರಲ್ಲ ಬದಲಾಗಿ ಪೋಕ್ಸೋ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದಾಗಿ ತಿಳಿದು ಬಂದಿದೆ.
ಆರೋಪಿಗಳ ಪೈಕಿ ಹರೀಶ್ (೨೩) ಹುಸ್ಕೂರು ಆನೆಕಲ್ ತಾಲೂಕಿನ ನಿವಾಸಿಯಾಗಿದ್ದು ಈತ ಫೋಕ್ಸೊ ಕಾಯ್ದೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದು ಈತನ ವಿರುದ್ಧ ಹೆಬ್ಬೆಗೋಡು ಪೊಲೀಸ್ ಠಾಣೆ ಬೆಂಗಳೂರಿನಲ್ಲಿ ಒಂದು ವಾರಗಳ ಹಿಂದೆ ಮೊಕದ್ದಮೆ ದಾಖಲಾಗಿತ್ತು. ನಂತರ ಅರೋಪಿ ಹರೀಶ್ ಪರಾರಿಯಾಗಿ ಹಾಸನಕ್ಕೆ ತೆರಳಿದ್ದ ಎನ್ನಲಾಗಿದೆ.
ತನ್ನ ಸ್ನೇಹಿತ ಹಾಸನದ ದೇವರಾಜ್ (೨೨) ಎಂಬಾತನೊAದಿಗೆ ಮರಗೋಡು ಹಾಗೂ ಸಿದ್ದಾಪುರ ಭಾಗದಲ್ಲಿ ಸಂಚರಿಸುತ್ತಿದ್ದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಭಾವಚಿತ್ರದ ಆಧಾರದಲ್ಲಿ ಗುರುತಿಸಿದ ವೇಳೆ ಸ್ಥಳೀಯರು ಇವರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿದ್ದಾಪುರ ಪೊಲೀಸರು ಇವರಿಬ್ಬರನ್ನು ವಿಚಾರಣೆ ನಡೆಸಿದ ಸಂದರ್ಭ ಹರೀಶ್ ಎಂಬಾತನ ಮೇಲೆ ದಿನಾಂಕ ೨೪/೫/೨೦೨೩ರಂದು ಫೋಕ್ಸೊ ಕಾಯ್ದೆಯಡಿ ಬೆಂಗಳೂರಿನ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಸಿದ್ಧಾಪುರ ಪೊಲೀಸರು ಆನೆಕಲ್ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಆರೋಪಿ ಹರೀಶ್ ಹಾಗೂ ಆತನ ಸ್ನೇಹಿತ ದೇವರಾಜನನ್ನು ಆನೆಕಲ್ ಪೊಲೀಸರು ಬೆಂಗಳೂರಿಗೆ ಕರೆದೊಯ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆರೋಪಿ ಹರೀಶನು ಕಳೆದ ಕೆಲವು ದಿನಗಳಿಂದ ಹಾಸನದ ತನ್ನ ಸ್ನೇಹಿತ ದೇವರಾಜನೊಂದಿಗೆ ಮರಗೋಡುವಿನಲ್ಲಿ ಮಣ್ಣು ಕೆಲಸಕ್ಕೆ ಸೇರಿಕೊಂಡಿದ್ದುದಾಗಿ ಪೊಲೀಸರ ತನಿಖೆ ಸಂದರ್ಭದಲ್ಲಿ ತಿಳಿಸಿದ್ದಾನೆ.