ಪಾರಾಣೆ, ಜೂ. ೨: ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಮಟ್ಟ ಸುಧಾರಣೆಗಾಗಿ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ಮಹಿಳೆಯರು ಯೋಜನೆ ಸದುಪಯೋಗ ಪಡಿಸಿಕೊಂಡು ಮುನ್ನಡೆಯಬೇಕು ಎಂದು ಪದ್ಮಶ್ರೀ ಪುರಸ್ಕೃತೆÀ ಎಂ. ರಾಣಿ ಮಾಚಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ ಕೊಡಗು, ತಾಲೂಕು ಪಂಚಾಯಿತಿ ಮಡಿಕೇರಿ, ಮತ್ತು ಕೊಣಂಜಗೇರಿ ಪಾರಾಣೆ ಗ್ರಾಮ ಪಂಚಾಯಿತಿ ಹಾಗೂ ಸಂಜೀವಿನಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಪಾರಾಣೆ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಬ್ಬದ ಪ್ರಯುಕ್ತ ಉಚಿತ ಅರೋಗ್ಯ ತಪಾಸಣೆ, ಕರಕುಶಲ ಉತ್ಪಾದನೆಗಳ ಪ್ರದರ್ಶನ ಮೇಳ ಮತ್ತು ಮಹಿಳಾ ಸಂಘಗಳ ವಿವಿಧ ಕಾರ್ಯಕ್ರಮ ನಡೆಯಿತು. ಕಾರ್ಯ ಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಆಯೋಜಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ ಅವರು ಪಟ್ಟಣ, ನಗರ ಭಾಗಗಳಲ್ಲಿ ನೆಲೆಸಿರುವ ಮಹಿಳೆಯರು ಮಾತ್ರ ಅಭಿವೃದ್ಧಿ ಹೊಂದುತ್ತಿರುವುದು ಎನ್ನುವುದು ದೂರದ ಮಾತಾಗಿದೆ. ಗ್ರಾಮೀಣಾ ಭಾಗದಲ್ಲಿ ಹಲವಾರು ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡದೇ ಗೌಪ್ಯವಾಗಿ ರಿಸಿದ್ದಾರೆ. ಇದು ಸಲ್ಲದು. ಬಹುಮುಖ ಪ್ರತಿಭೆಯನ್ನು ಇಂತಹ ಮಹಿಳಾ ಹಬ್ಬ ಮತ್ತು ಇತರ ಆಯೋಜಿತ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಮಾಡಬೇಕು. ಸರ್ಕಾರವು, ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಮಟ್ಟ ಸುಧಾರಿಸಲು ಹಲವಾರು ಯೋಜನೆಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡುತ್ತದೆ. ಅನುದಾನ ಗಳನ್ನು ಪಡೆದು ಸಮಾಜದಲ್ಲಿ ಸುಧಾರಿತ ಜೀವನ ಕಂಡುಕೊಳ್ಳಬೇಕು. ಕಲೆಗಾಗಿ ನೀಡಿರುವ ಪ್ರದ್ಮಶ್ರೀ ಪ್ರಶಸ್ತಿಯು ನನ್ನ ಬಳಿ ನೃತ್ಯ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಕಾಲೇಜಿನ ಅಧ್ಯಾಪಕರು ಪ್ರಾಂಶುಪಾಲರಿಗೆ ಸಮರ್ಪಿಸುತ್ತಿದ್ದೇನೆ. ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೋಬ್ಬರು ಕೈಜೋಡಿಸಬೇಕು ಎಂದು ಹೇಳಿದರು.
ಕೊಣಂಜಗೇರಿ ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬೆಳ್ಳಿಮಯ್ಯ ಅವರು ಮಾತನಾಡಿ, ಪ್ರಸ್ತುತ ಸಮಾಜಕ್ಕೆ, ಅಭಿವೃದ್ಧಿ ಹೊಂದುತ್ತಿರುವ ಮಹಿಳೆಯರ ಸಹಕಾರ ಅತ್ಯವಶ್ಯಕ ವಾಗಿದೆ. ಅಭಿವೃದ್ಧಿಗೊಂಡ ಮಹಿಳೆಯರಿಂದ ಗ್ರಾಮದ ಏಳಿಗೆ ಸಾಧ್ಯ. ಗ್ರಾಮ ಪಂಚಾಯಿತಿ ಅಧಿಕಾರ ವ್ಯಾಪ್ತಿಯಲ್ಲಿ ಅನುದಾನಗಳ ಬಳಕೆ ಮತ್ತು ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸಕ್ರಿಯರಾಗಿ ಭಾಗವಹಿಸಬೇಕು. ತಮ್ಮ ಮಕ್ಕಳಿಗೆ ಗ್ರಾಮೀಣ ಕಲೆ, ಕೃಷಿ, ಪರಿಸರದ ಬಗ್ಗೆ ತಿಳಿಹೇಳಬೇಕು ಎಂದು ಹೇಳಿದರು.
ಸಂಜೀವಿನಿ ಒಕ್ಕೂಟ ಪಾರಾಣೆ ವಲಯದ ಅಧ್ಯಕ್ಷೆ ಬಲ್ಯಂಡ ರಾಣಿ ಬಿ.ಜಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಗ್ರಾಮ ಪಂಚಾಯಿತಿ ಪಿ.ಡಿ.ಓ. ಸೆಬಾಸ್ಟೀನ್ ಮತ್ತು ಸಂಜೀವಿನಿ ಒಕ್ಕೂಟದ ಜಿಲ್ಲಾ ಸಂಚಾಲಕ ಕುಮಾರ್ ಅವರು ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಜೀವಿನಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಕುಮಾರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಎಂ. ರಾಣಿ ಮಾಚಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬೆಳ್ಳಿಮಯ್ಯ, ಪಿ.ಡಿ.ಓ. ಸೆಬಾಸ್ಟೀನ್ ಅವರಿಗೆ ಸಂಜೀವಿನಿ ಒಕ್ಕೂಟದ ವತಿಯಿಂದ ಸನ್ಮಾನಿಸ ಲಾಯಿತು. ಸಂಜೀವಿನಿ ಒಕ್ಕೂಟದ ಪಾರಾಣೆ ವಲಯದ ಎಂ.ಡಿ.ಕೆ. ಅಪ್ಪನೆರವಂಡ ನಯನ ರಾಜೇಶ್ ಅವರು ವಾರ್ಷಿಕ ವರದಿ ವಾಚನ ಮಾಡಿದರು. ಕಾಯಕ್ರಮದ ಮೊದಲಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಣಿ ಮಾಚಯ್ಯ ಮಹಿಳಾ ಹಬ್ಬವನ್ನು ಉದ್ಘಾಟನೆ ಮಾಡಿದರು. ಕೊಣಂಜಗೇರಿ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಬಾವಲಿ, ಕೊಣಂಜಗೇರಿ, ಕಿರುಂದಾಡು, ಪಾರಾಣೆ, ಬಲಮುರಿ, ಮತ್ತು ಕೈಕಾಡ್ ಗ್ರಾಮಗಳ ಸುಮಾರು ೩೦ಕ್ಕೂ ಅಧಿಕ ಸ್ವಸಹಾಯ ಗುಂಪುಗಳ ಮಹಿಳಾ ಪ್ರತಿನಿಧಿಗಳು ತಮ್ಮ ಕೃಷಿ ಉತ್ಪನ್ನ ಮತ್ತು ಇತರ ವಸ್ತುಗಳನ್ನು ಮಹಿಳಾ ಸಂತೆಯಲ್ಲಿ ಪ್ರದರ್ಶನ ಮಾಡಿದರು. ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಮತ್ತು ಮಹಿಳಾ ಗುಂಪುಗಳ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸಲಾಯಿತು. ಮಹಿಳಾ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ವಲಯ ಮೇಲ್ವಿಚಾರಕರಾದ ಪೊನ್ನಚೆಟ್ಟಿರ ಪವಿತ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಕಟ್ಟಿ ಕುಶಾಲಪ್ಪ, ಉಪಸ್ಥಿತರಿದ್ದರು.
ಸಂಜೀವಿನಿ ಒಕ್ಕೂಟದ ಮಡಿಕೇರಿ ವಲಯ ಮೆಲ್ವಿಚಾರಕರಾದ ಶ್ವೇತ ಅವರು ಸರ್ವರನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕೊಣಂಜಗೇರಿ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸೇರಿದಂತೆ ಸಂಜೀವಿನಿ ಒಕ್ಕೂಟ ಪಾರಾಣೆ ಶಾಖೆಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಸ್ವಸಹಾಯ ಗುಂಪುಗಳ ಸದಸ್ಯರು ಹಾಜರಿದ್ದರು.