ಕುಶಾಲನಗರ, ಜೂ. ೨: ಶತ ಮಾನೋತ್ಸವವನ್ನು ಆಚರಿಸಿ ಕೊಂಡಿರುವ ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈ ಸಾಲಿನಲ್ಲಿ ರೂ. ೧.೬೦ ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.

ವಿಎಸ್‌ಎಸ್‌ಎನ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತವಾಗಿ ೬ ವರ್ಷಗಳಿಂದ ಕೋಟಿ ರೂಪಾಯಿ ಮೀರಿ ಲಾಭಗಳಿಸಿರುತ್ತಿರುವ ಸಂಘ ವರದಿ ಸಾಲಿನಲ್ಲಿ ರೂ. ೨೩೭.೭೮ ಕೋಟಿ ವಾರ್ಷಿಕ ವ್ಯವಹಾರ ನಡೆಸಿದೆ ಎಂದು ತಿಳಿಸಿದ್ದಾರೆ.

ಸಂಘ ಕಳೆದ ೨೯ ವರ್ಷಗಳಿಂದ ಸತತವಾಗಿ ಲಾಭದಲ್ಲಿ ಮುನ್ನಡೆ ಯುತ್ತಿದೆ, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.

ಸಂಘದ ಎ ತರಗತಿ ಮತ್ತು ನಾಮಮಾತ್ರ ಸದಸ್ಯರಿಗೆ ಅತಿ ಶೀಘ್ರದಲ್ಲಿ ೨೫ ರೀತಿಯ ವಿವಿಧ ಸಾಲಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಶರವಣಕುಮಾರ್ ತಿಳಿಸಿದ್ದಾರೆ.

ಸಂಘದ ಕಟ್ಟಡ ನಿಧಿಯನ್ನು ಕ್ರೋಢೀಕರಿಸುವ ಉದ್ದೇಶದಿಂದ ಲಾಭ ವಿಲೇವಾರಿಯಲ್ಲಿ ಲಾಭಾಂಶದ ಶೇ. ೪೦ ರಷ್ಟು ನಿಗದಿಪಡಿಸಿದ್ದರೂ, ಈ ಸಾಲಿನಲ್ಲಿ ಸದಸ್ಯರಿಗೆ ಶೇ. ೧೨ ಡಿವಿಡೆಂಟ್ ನೀಡಲು ತೀರ್ಮಾನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸದಸ್ಯರು ಸಹಕರಿಸಬೇಕೆಂದು ಆಡಳಿತ ಮಂಡಳಿ ಪರವಾಗಿ ಅವರು ಕೋರಿ ಕೊಂಡಿದ್ದಾರೆ.

ಸAಘವು ಠೇವಣಿಗಳ ರೂಪದಲ್ಲಿ ೪೬೪೯.೬೪ ಲಕ್ಷ ರೂ.ಗಳ ಠೇವಣಿ ಹೊಂದಿದೆ. ಸಂಘದ ವತಿಯಿಂದ ವಿವಿಧ ಕ್ಷೇಮ ನಿಧಿಗಳನ್ನು ಸ್ಥಾಪಿಸಲಾಗಿದ್ದು ಸದಸ್ಯರ ಆರೋಗ್ಯ ನಿಧಿ, ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಘದ ವತಿಯಿಂದ ವಾರ್ಷಿಕ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸಂಘದಲ್ಲಿ ಜಾಮೀನು ಸಾಲ, ಮದ್ಯಮಾವಧಿ ಸಾಲ, ಮನೆ ರಿಪೇರಿ, ಮನೆ ಕಟ್ಟಲು ಮತ್ತು ಮನೆ ಅಡಮಾನ ಸಾಲ ನೀಡಲಾಗುತ್ತದೆ. ನಿವೇಶನ, ಕಟ್ಟಡ, ವಾಣಿಜ್ಯ ಮಳಿಗೆ, ವಾಸದ ಮನೆ ಖರೀದಿ ಮತ್ತು ನೂತನ ಗೃಹ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣ ಸಾಲ ಮತ್ತು ವ್ಯಾಪಾರ ಕೈಗಾರಿಕೆ ಅಭಿವೃದ್ಧಿಪಡಿಸಲು ದೀರ್ಘಾವಧಿ ಸಾಲ ನೀಡಲಾಗುತ್ತದೆ.

ಹೊಸ ವಾಹನ ಖರೀದಿ ಮತ್ತು ದೊಡ್ಡ ಮಟ್ಟದ ವ್ಯಾಪಾರಸ್ಥರಿಗೆ ವ್ಯಾಪಾರ ಮೀರಳತೆ ಸಾಲ ಕೂಡ ನೀಡಲಾಗುತ್ತದೆ ಎಂದು ತಿಳಿಸಿದರು.

ಸಂಘದ ಸದಸ್ಯರು ಸಾಲಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ ಶರವಣಕುಮಾರ್, ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವಂತೆ ಮನವಿ ಮಾಡಿದರು. ಸಂಘದಲ್ಲಿ ತೊಡಗಿಸಿರುವ ನಿರಖು ಠೇವಣಿಗೂ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ.

ಹಿರಿಯ ನಾಗರಿಕರಿಗೆ ವಿಶೇಷ ಬಡ್ಡಿ ದರ ಕಲ್ಪಿಸಲಾಗಿದೆ. ಸಂಘದ ನೂತನ ಕಟ್ಟಡದಲ್ಲಿ ಆರ್‌ಬಿಐ ಮಾನದಂಡದAತೆ ನಿರ್ಮಾಣ ಮಾಡಿರುವ ಭದ್ರತಾ ಕೊಠಡಿಯೊಳಗೆ ಲಾಕರ್ ಸೌಲಭ್ಯವನ್ನು ಸದಸ್ಯರಿಗೆ ಮತ್ತು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ರೂ. ೧೬ ಕೋಟಿ ಅಂದಾಜು ವೆಚ್ಚದ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ.

ಭವನದಲ್ಲಿ ಎಲ್ಲಾ ಮಾದರಿಯ ಸೌಲಭ್ಯಗಳನ್ನು ಮತ್ತು ೨ ಸಾವಿರಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ಕುಳಿತುಕೊಳ್ಳುವಂತಹ ಸುಸಜ್ಜಿತವಾದ ಸಭಾಂಗಣ ಪ್ರತ್ಯೇಕವಾದ ಸಸ್ಯಹಾರ ಮತ್ತು ಮಾಂಸಾಹಾರ ಅಡುಗೆ ಕೋಣೆಗಳು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಈ ಸಾಲಿನ ಮಹಾಸಭೆ ತಾ. ೪ ರಂದು ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಸದಸ್ಯರ ಮಕ್ಕಳ ಪೈಕಿ ೧೦ನೇ ತರಗತಿ, ದ್ವಿತೀಯ ಪಿಯುಸಿ, ಅಂತಿಮ ಪದವಿ ಪರೀಕ್ಷೆ ಡಿಪ್ಲೋಮಾ ಮತ್ತು ಕೊನೆಯ ಇಂಜಿನಿಯರಿAಗ್ ಪರೀಕ್ಷೆ, ವೈದ್ಯಕೀಯ ಪದವೀಧರರಿಗೂ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಷ್ಟçಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಸ್ಪರ್ಧಿಸಿರುವ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭ ಸಹಕಾರ ಸಂಘದ ಉಪಾಧ್ಯಕ್ಷ ವಿ.ಎಸ್. ಆನಂದಕುಮಾರ್, ನಿರ್ದೇಶಕರಾದ ರಾಜೇಶ್, ಕವಿತಾ ಮೋಹನ್, ನೇತ್ರಾವತಿ, ಅಬ್ದುಲ್ ಖಾದರ್, ಮಧುಸೂದನ್, ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಮತ್ತು ಸಿಬ್ಬಂದಿಗಳು ಇದ್ದರು.