ಪೊನ್ನಂಪೇಟೆ, ಜೂ.೧ : ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮದಲ್ಲಿ ರೈತ ದೇಯಂಡ ಪಿ. ಬೆಳ್ಳಿಯಪ್ಪ ಎಂಬವರ ಗಬ್ಬದ ಹಸುವನ್ನು ಬಲಿ ಪಡೆದ ಹುಲಿಯ ಚಿತ್ರ ಕ್ಯಾಮರಾದಲ್ಲಿ ಸೆರೆಯಾಗಿದೆ. ಹುಲಿಯು ತಾ. ೩೧ ರ ರಾತ್ರಿ ಘಟನೆ ನಡೆದ ಸ್ಥಳದಲ್ಲಿ ಪ್ರತ್ಯಕ್ಷವಾಗಿದ್ದು, ಹಸುವಿನ ಕಳೆಬರವನ್ನು ಸುಮಾರು ೩೦ ಅಡಿಗಳಷ್ಟು ದೂರ ಎಳೆದೊಯ್ದು ಸ್ವಲ್ಪಭಾಗ ತಿಂದುಹಾಕಿದೆ. ಹಸುವನ್ನು ಹುಲಿ ಬಲಿಪಡೆದ ಸ್ಥಳದಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸ್ಥಳದಲ್ಲಿ ಬೋನು ಅಳವಡಿಸುವ ಮೂಲಕ ಹುಲಿ ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ಅರಣ್ಯ ವಲಯ ಆರ್ ಎಫ್ ಓ, ಬಿ.ಎಂ. ಶಂಕರ್ ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬೋನಿಗೆ ಹುಲಿ ಸಿಗದೇ ಇದ್ದಲ್ಲಿ ತಾ.೨ ರಿಂದ ಹುಲಿ ಸೆರೆಗೆ ಕೂಂಬಿAಗ್ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. - ಚೆನ್ನನಾಯಕ