ಮಡಿಕೇರಿ, ಜೂ. ೧: ಕೊಡಗಿನ ವೀರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಎ.ಎಸ್. ಪೊನ್ನಣ್ಣ ಅವರು ಇದೀಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ಮುಖ್ಯಮAತ್ರಿ ಸಿದ್ದರಾಮಯ್ಯ ಅವರು ಪೊನ್ನಣ್ಣ ಅವರನ್ನು ಈ ಜವಾಬ್ದಾರಿಗೆ ನೇಮಿಸಿ ಆದೇಶ ಹೊರಡಿಸಲು ಸರಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಇದು ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ವಾಗಿದೆ. ಇದೀಗ ಪೊನ್ನಣ್ಣ ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನನೊಂದಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳು ದೊರೆಯಲಿವೆ. ಈ ಬಾರಿಯ ಸಚಿವರ ಸಂಪುಟದಲ್ಲಿ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಸಿಗುವ ಆಶಾಭಾವನೆ ಜಿಲ್ಲೆಯ ಜನರಲ್ಲಿತ್ತು. ಆದರೆ ಇವರು ಸಚಿವ ಸ್ಥಾನದಿಂದ ವಂಚಿತರಾಗಿದ್ದರು.

ಇದೀಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಸ್ಥಾನಮಾನ ಸಿಕ್ಕಿರುವುದು ಜಿಲ್ಲೆಗೆ ಪ್ರಾತಿನಿಧ್ಯ ದೊರೆತಂತಾಗಿದೆ.

ಪೊನ್ನಣ್ಣ ಮುಕ್ತ ನುಡಿ

ಈ ಕುರಿತು ಶಾಸಕ ಪೊನ್ನಣ್ಣ ಅವರನ್ನು ಸಂಪರ್ಕಿಸಿದಾಗ ತನ್ನ ನೇಮಕಾತಿಯ ಕುರಿತು ಅಧಿಕೃತ ಆದೇಶವು ಶುಕ್ರವಾರ ಹೊರ ಬೀಳಲಿದೆ ಎಂದು ತಿಳಿಸಿದರು. ತಮಗೆ ಈ ಜವಾಬ್ದಾರಿಕೆ ಹಾಗೂ ಸಂಪುಟ ಸ್ಥಾನದ ಹೆಗ್ಗಳಿಕೆ ತೃಪ್ತಿ ಉಂಟುಮಾಡಿದೆಯೆ ಎಂದಾಗ ತಾನು ಈ ಜವಾಬ್ದಾರಿಕೆಯನ್ನು ಸ್ವೀಕರಿಸಿರುವುದಾಗಿ ಅವರು ಮುಕ್ತ ನುಡಿಯಾಡಿದರು. ಕೊಡಗಿನ ಅಭಿವೃದ್ಧಿ ಬಗ್ಗೆ ಈ ಜವಾಬ್ದಾರಿ ಯಿಂದ ಹೆಚ್ಚಿನ ಪ್ರಯೋಜನವಾಗುವ ಕುರಿತು ಪ್ರಶ್ನಿಸಿದಾಗ ನೇರವಾದ ಕಾರ್ಯ ನಿರ್ವಾಹಕ ಅಧಿಕಾರವಿಲ್ಲದಿದ್ದರೂ ಮುಖ್ಯಮಂತ್ರಿ ಯವರ ಕಾನೂನು ಸಲಹೆಗಾರ ನಾಗಿದ್ದುಕೊಂಡು ಉನ್ನತ ವಲಯದಲ್ಲಿ ಹೆಚ್ಚಿನ ಸಂಪರ್ಕ ಲಭಿಸುವುದರಿಂದ ಕೊಡಗು ಜಿಲ್ಲೆಗೆ ಅಗತ್ಯವಾದ ಕೆಲಸಗಳನ್ನು ನಿರ್ವಹಿಸಲು ಸುಲಭ ಸಾಧ್ಯ ವಾಗುತ್ತದೆ ಎಂದು ಅಭಿಪ್ರಾಯಪಟ್ಟರು.