ಮಡಿಕೇರಿ, ಜೂ. ೧: ಕೊಡ್ಲಿಪೇಟೆ ಹೋಬಳಿಯಲ್ಲಿ ಹಲವು ಸಮಸ್ಯೆಗಳಿದ್ದು ಇದನ್ನು ತುರ್ತಾಗಿ ಬಗೆಹರಿಸುವಂತೆ ಅಲ್ಲಿನ ನಾಗರಿಕ ಸಮಿತಿಯವರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಮಿತಿಯ ಗೌರವ ಅಧ್ಯಕ್ಷ ಎಸ್.ಎಸ್. ನಾಗರಾಜ್, ಅಧ್ಯಕ್ಷ ಜಿ.ಆರ್. ಸುಬ್ರಮಣ್ಯ, ಕಾರ್ಯದರ್ಶಿ ಎನ್.ಎನ್. ಸೋಮಪ್ಪ ಮತ್ತಿತರರು ಶಾಸಕ ಮಂಥರ್ ಗೌಡ ಅವರಲ್ಲಿ ಮನವಿ ಮಾಡಿದ್ದಾರೆ.

ಸಮಿತಿಯ ಬೇಡಿಕೆಗಳು ಇಂತಿವೆ

ಕೆಲಕೊಡ್ಲಿ ಸೇತುವೆಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ೧೦ ವರ್ಷಗಳಾದರೂ ಈವರೆಗೆ ಸಂಪರ್ಕ ರಸ್ತೆ ಪೂರ್ಣಗೊಂಡಿಲ್ಲ. ಇದನ್ನು ಕೂಡಲೇ ಪೂರ್ಣಗೊಳಿಸಿ ಉದ್ಘಾಟನೆಗೆ ಅವಕಾಶ ಮಾಡಿಕೊಡಬೇಕು. ಪ್ರಕೃತಿ ವಿಕೋಪ (ಮಳೆಹಾನಿಯಿಂದ) ಹೋಬಳಿಯ ಅನೇಕ ರಸ್ತೆಗಳು ದುರಸ್ತಿಯಾಗಿಲ್ಲ, ಉದಾ: ಕೊಡ್ಲಿಪೇಟೆ-ಹಂಪಾಪುರ ರಸ್ತೆ, ಕೊಡ್ಲಿಪೇಟೆ-ಕೆಲಕೊಡ್ಲಿ ರಸ್ತೆ. ಚಿಕ್ಕಾಕುಂದ ಪುಟ್ಟಣ್ಣನವರ ಅಂಗಡಿಯಿAದ ಮನುಗನಗಳ್ಳಿ ಸೇತುವೆಯವರೆಗೆ ಇನ್ನೂ ಅನೇಕ ರಸ್ತೆಗಳು ಮಳೆಯಿಂದ ಹಾನಿಯಾಗಿ ೫ ವರ್ಷಗಳಾದರೂ ಈವರೆಗೆ ದುರಸ್ತಿಯಾಗಿಲ್ಲ.

ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲ (ನರ್ಸ್+ಡಿ ಗ್ರೂಪ್ ನೌಕರರು, ಇ.ಸಿ.ಜಿ. ತಜ್ಞರು) ಹಾಗೂ ಕೊಡ್ಲಿಪೇಟೆ ಆಸ್ಪತ್ರೆಯಲ್ಲಿ ದಾನಿಗಳು ನಿರ್ಮಿಸಿಕೊಟ್ಟ ‘ಹೆರಿಗೆ ವಾರ್ಡ್’ ದುರಸ್ತಿಯಾಗಿಲ್ಲ. ಈ ಕೂಡಲೇ ಅದನ್ನು ಪುನರ್ ನಿರ್ಮಿಸಿಕೊಡಲು ಮತ್ತು ವ್ಯವಸ್ಥೆ ಮಾಡಿಕೊಡಬೇಕು. ಕೊಡ್ಲಿಪೇಟೆ ಬಸ್ ನಿಲ್ದಾಣದ ತಿರುವು ತುಂಬಾ ಅಪಾಯಕಾರಿಯಾಗಿದ್ದು, ಈ ತಿರುವಿನಲ್ಲಿ ಅನೇಕ ಅಪಘಾತಗಳಾಗಿವೆ. ಈ ಅಪಾಯಕಾರಿ ತಿರುವನ್ನು ಅಗಲ ಮಾಡಿಸಿಕೊಡಬೇಕು.

ಪಂಚಾಯಿತಿಯ ಕುಡಿಯುವ ನೀರಿನ ಫಿಲ್ಟರ್ ವ್ಯವಸ್ಥೆ ಇರುವುದಿಲ್ಲ. ಹೇಮಾವತಿ ನೀರು ನೇರವಾಗಿ ಮನೆ ಸೇರುತ್ತಿದೆ. ಇದಕ್ಕೆ ಫಿಲ್ಟರ್ ವ್ಯವಸ್ಥೆ ಕಲ್ಪಿಸಬೇಕಿದೆ ಹಾಗೂ ಕೊಡ್ಲಿಪೇಟೆಯಲ್ಲಿ ಆಯುಷ್ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಳ್ಳಬೇಕೆಂದು ಗಮನಸೆಳೆಯಲಾಗಿದೆ.

ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾಲಕ್ಷಿö್ಮ ಅಂಗಡಿಯಿAದ ರೇಣುಕಗೌಡರ ಮನೆಯವರೆಗೆ (ವೀರಭದ್ರೇಶ್ವರ ಸ್ವಾಮಿ ರಸ್ತೆ) ಡಾಮರು ಹಾಕಿಸಲು, ಬೇಡಗೊಟ್ಟ ಪಂಚಾಯಿತಿ ವ್ಯಾಪ್ತಿಯ ಹ್ಯಾಂಡ್‌ಪೋಸ್ಟ್ಗೆ ‘ಹೈಮಾಸ್ಕ್’ ದೀಪವನ್ನು ಅಳವಡಿಕೆ, ಹ್ಯಾಂಡ್‌ಪೋಸ್ಟ್ನಲ್ಲಿ ಬಸ್‌ಸ್ಟಾಪನ್ನು ಪುನರ್ ನಿರ್ಮಿಸಿ ಕೊಡಲು ಹಾಗೂ ವಿಪರೀತ ಕಾಡಾನೆ ಹಾವಳಿ ಇರುವುದರಿಂದ ೨೫ ಸೌರ ದೀಪಗಳನ್ನು ಮಂಜೂರು ಮಾಡಬೇಕೆಂದು ಸಮಿತಿ ಪದಾಧಿಕಾರಿಗಳು ಶಾಸಕರಲ್ಲಿ ಮನವಿ ಮಾಡಿದ್ದಾರೆ.