ಮಡಿಕೇರಿ, ಜೂ.೧: ಕೊಡಗು ಜಿಲ್ಲೆಗೆ ಹಾಲಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಯಾರನ್ನು ನೇಮಕ ಮಾಡಬಹುದು ಎಂಬ ಕುತೂಹಲ ಜನತೆಯಲ್ಲಿದೆ.
ತಾ.೨ರಂದು ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದ್ದು, ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ. ಕೊಡಗಿನ ನಂಟು ಹೊಂದಿರುವ ಈ ಹಿಂದೆ ಉಸ್ತುವಾರಿ ಸಚಿವರುಗಳಾಗಿ ಕಾರ್ಯನಿರ್ವಹಿಸಿರುವ ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಮತ್ತೊಬ್ಬ ಉಸ್ತುವಾರಿ ಸಚಿವರಾಗಿದ್ದ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ನೆರೆಯ ಪಿರಿಯಾಪಟ್ಟಣ ಶಾಸಕರಾಗಿರುವ ವೆಂಕಟೇಶ್ ಅವರುಗಳ ಪೈಕಿ ಯಾರಾದರೂ ಉಸ್ತುವಾರಿಗಳಾಗಬಹುದು ಎನ್ನಲಾಗುತ್ತಿದೆ. ಆದರೆ ಕೆ.ಜೆ.ಜಾರ್ಜ್ ಪ್ರಭಾವಿ ಖಾತೆ ಹೊಂದಿರುವುದರಿAದ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎಂಬ ಮಾತಿದೆ.
ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ವೆಂಕಟೇಶ್ ಅವರ ಒಲವು ಮೈಸೂರು ಜಿಲ್ಲೆಯ ಮೇಲಿದೆ ಎನ್ನಲಾಗುತ್ತಿದೆ. ಇನ್ನು ದಿನೇಶ್ ಗುಂಡೂರಾವ್ ಅವರ ನಿಲುವು ಸ್ಪಷ್ಪವಾಗಿಲ್ಲ. ಈ ಹಿನ್ನೆಲೆಯಲ್ಲಿ ಉಸ್ತುವಾರಿಗಳು ಯಾರಾಗಬಹುದು ಎಂಬ ಕೌತುಕವಿದೆ.