ಸಿದ್ದಾಪುರ, ಮೇ.೩೧: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿಯಲ್ಲಿ ಕಳೆದ ಹಲವು ದಿನಗಳಿಂದ ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿದೆ. ಚಿನ್ನದ ಸರ, ಲಕ್ಷಾಂತರ ನಗದು ಹಾಗೂ ಮೊಬೈಲ್ ಕಳುವಾಗಿರುವ ಘಟನೆಗಳು ನಡೆದಿವೆ.
ಕಳೆದ ೨೦ ರಿಂದ ೨೫ ದಿನದೊಳಗೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಚೋರ ಲಗ್ಗೆಯಿಟ್ಟಿದ್ದಾನೆ. ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ೨ ರಿಂದ ೩ ಗಂಟೆಯ ಒಳಗೆ ಈ ಘಟನೆಗಳು ನಡೆದಿವೆ. ಇಲ್ಲಿಯ ಎಂಜಿ ಕಾಲನಿಯ ನಿವಾಸಿ ಟೈಲರ್ ಹಂಸ ಮತ್ತು ಮನೆಯವರು ಕೇರಳದಲ್ಲಿರುವ ಸಂಬAಧಿಯ ಮದುವೆಗೆ ತೆರಳಿದ್ದರು. ಒಂದು ವಾರದ ಬಳಿಕ ಮರಳಿ ಮನೆಗೆ ಬಂದಾಗ ಮನೆಯಲ್ಲಿ ಮಂಚದ ಕೆಳಗೆ ಬ್ಯಾಗ್ ಒಂದರಲ್ಲಿ ಇಟ್ಟಿದ್ದ ೬೪ ಗ್ರಾಂ ಚಿನ್ನ ಹಾಗೂ ೧.೦೮ ಲಕ್ಷ ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸ್
(ಮೊದಲ ಪುಟದಿಂದ) ಠಾಣೆಗೆ ಮೇ ೫ ರಂದು ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಮೇ ೧೯ ರಂದು ನೆಲ್ಲಿಹುದಿಕೇರಿಯ ಶಾಲಾ ರಸ್ತೆಯ ನಿವಾಸಿ ನಿಯಾಜ್ ಎಂಬವರ ಪತ್ನಿ ನಿದ್ರೆಯಲ್ಲಿದ್ದ ಸಮಯದಲ್ಲಿ ರಾತ್ರಿ ಅಂದಾಜು ೨ ಗಂಟೆಗೆ ಮಲಗಿದ್ದ ಕೋಣೆಯ ಕಿಟಕಿಯಿಂದ ಒಳಗೆ ಕೈ ಹಾಕಿದ ಚೋರ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ. ಕೂಡಲೇ ಮಹಿಳೆ ಎಚ್ಚತ್ತುಕೊಂಡು ಮತ್ತೊಂದು ಕೋಣೆಯಲ್ಲಿದ್ದ ತಂದೆ ತಾಯಿಗೆ ವಿಷಯವನ್ನು ತಿಳಿಸಿದರು. ಸರವನ್ನು ಎಳೆಯುವಾಗ ಲಾಕೆಟ್ ಮುರಿದು ಮನೆಯ ಒಳಗೆ ಬಿದ್ದಿದೆ. ಅಂದಾಜು ೧೦ ಗ್ರಾಂ ಚಿನ್ನದ ಸರ ಕಳುವಾಗಿದೆ. ಇದೇ ದಿನ ಗ್ರಾಮ ಪಂಚಾಯಿತಿ ಸದಸ್ಯ ಅಫ್ಸಲ್ ಎಂಬವರು ಮನೆಯ ಹೊರಗೆ ಇಟ್ಟಿದ್ದ ಹೊಸ ವುಡ್ ಲ್ಯಾಂಡ್ ಶೂ ಕಳುವಾಗಿದೆ.
ಮೇ ೨೭ ರಂದು ಇದೇ ಭಾಗದ ಮುಸ್ತಫಾ ಎಂಬವರ ಮನೆಯ ಕಿಟಕಿಗೆ ಹಾನಿ ಮಾಡಿ ಕಳುವಿಗೆ ಯತ್ನಿಸಿದ ಘಟನೆ ನಡೆದಿದೆ. ಮೇ ೨೯ ರಂದು ಇಲ್ಲಿನ ಹೊಳೆಕರೆ ನಿವಾಸಿ ಅಸ್ಕರ್ ಎಂಬವರು ಮಲಗುವ ಕೋಣೆಯ ಕಿಟಕಿ ಬಳಿ ಇಟ್ಟಿದ್ದ ಮೊಬೈಲ್ ಫೋನ್ ಕಳುವಾಗಿದೆ. ಇದೇ ದಿನ ರಾತ್ರಿ ೩ ಗಂಟೆ ಸುಮಾರಿಗೆ ಎಂಜಿ ಕಾಲನಿ ಸಮೀಪದ ಶರಣ್ ಎಂಬವರ ಮನೆಯ ಕಿಟಕಿ ಮೂಲಕ ಕಳ್ಳತನ ಯತ್ನ ನಡೆದಿದೆ. ಈ ಸಂದರ್ಭ ಇಲ್ಲಿಯ ಬೀದಿ ದೀಪಗಳನ್ನು ಚೋರ ಆಫ್ ಮಾಡಿದ್ದು, ಇಲ್ಲಿಯ ಸ್ಮಶಾನದ ಬಳಿ ಇರುವ ಕೆಲವು ಮನೆಗಳ ಕಿಟಕಿಯನ್ನು ಮುರಿಯಲು ವಿಫಲ ಯತ್ನ ಮಾಡಿರುವ ಬಗ್ಗೆ ವರದಿಯಾಗಿದೆ. ಆಗಿಂದಾಗ್ಗೆ ರಾತ್ರಿ ೨ ರಿಂದ ೩ ಗಂಟೆಯ ಸಮಯದಲ್ಲಿ ಚೋರ ಎಂಟ್ರಿ ಕೊಡುತ್ತಿರುವುದರಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಮಹಿಳೆಯರು ಮತ್ತು ವೃದ್ಧ ದಂಪತಿಗಳು ವಾಸವಿರುವ ಮನೆಯಲ್ಲಿ ಭೀತಿ ಹೆಚ್ಚಾಗಿದೆ.
ಕಳ್ಳನನ್ನು ಕಂಡ ಮನೆ ಮಾಲೀಕ: ಮೇ ೩೦ ರಂದು ಬೆಳಗ್ಗಿನ ಜಾವ ಅಂದಾಜು ೩ ಗಂಟೆ ಸಮಯದಲ್ಲಿ ಇಲ್ಲಿಯ ಖಾಸಗಿ ಶಾಲೆಯೊಂದರ ಪಕ್ಕದ ನಿವಾಸಿ ನವಾಜ್ ಎಂಬವರ ಮನೆಯ ಕಿಟಕಿಯಿಂದ ಶಬ್ದ ಕೇಳಿಸಿದಾಗ ಕೂಡಲೇ ಎಚ್ಚೆತ್ತುಕೊಂಡ ಮನೆಯ ಮಾಲೀಕ ಲೈಟ್ ಹಾಕಿ ಮನೆಯ ಹೊರಗೆ ಬರುವಷ್ಟರಲ್ಲಿ ಒಂದು ಕೈಯಲ್ಲಿ ಚಪ್ಪಲಿ ಮತ್ತೊಂದು ಕೈಯಲ್ಲಿ ಟಾರ್ಚ್ ಹಿಡಿದು ಚೋರ ಓಡಿ ಪರಾರಿಯಾಗಿದ್ದು, ಈ ಬಗ್ಗೆ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತೆಂದು ನವಾಜ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ನೆಲ್ಲಿಹುದಿಕೇರಿಯ ಎಂಜಿ ಕಾಲನಿ ರಸ್ತೆಯಲ್ಲಿರುವ ಹಂಸ ಎಂಬವರ ಮನೆಯ ಸಿಸಿ ಕ್ಯಾಮರಾದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಓಡಾಟದ ದೃಶ್ಯ ಸೆರೆಯಾಗಿದೆ. ಮೇ ೨೬ ರ ರಾತ್ರಿ ೨.೦೩ ಗಂಟೆಗೆ ವ್ಯಕ್ತಿಯೊಬ್ಬ ಒಂದು ಕೈಯಲ್ಲಿ ಚಪ್ಪಲಿ ಅಥವಾ ಶೂ ಹಿಡಿದು ಮತ್ತೊಂದು ಕೈಯಲ್ಲಿ ಟಾರ್ಚ್ ಹಿಡಿದು ಮನೆಗಳ ಪಕ್ಕದಲ್ಲಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ.
ಮೊದಲ ಕಳವು ಪ್ರಕರಣ ನಡೆದ ಕೂಡಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದಲ್ಲಿ ಸರಣಿ ಪ್ರಕರಣಗಳು ನಡೆಯುತ್ತಿರಲಿಲ್ಲ. ಈಗಾಗಲೇ ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ಗೌಡ ಅವರ ಗಮನಕ್ಕೆ ತರಲಾಗಿದ್ದು, ಶಾಸಕರ ಸೂಚನೆಯ ಮೇರೆಗೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆದಷ್ಟು ಬೇಗ ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸಬೇಕೆAದು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಕೆ ಹಕೀಂ ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದAತೆ ಒಂದು ಎಫ್.ಐ.ಆರ್ ದಾಖಲಾಗಿದೆ. ನೈಟ್ ಬೀಟ್ ಮತ್ತು ರೌಂಡ್ಸ್ ಹೆಚ್ಚು ಮಾಡಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಅನುಮಾನಾಸ್ಪದ ವ್ಯಕ್ತಿಯ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ಸಿದ್ದಾಪುರ ಪಿ.ಎಸ್.ಐ ದಿಲೀಪ್ ಕುಮಾರ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
- ಮುಸ್ತಫಾ ಸಿದ್ದಾಪುರ