ಗೋಣಿಕೊಪ್ಪಲು, ಮೇ ೩೦: ಪಂಚಾಯಿತಿ ಅಧ್ಯಕ್ಷರು ಆದಿವಾಸಿಗಳ ಹಾಡಿಗೆ ಬಂದಿದ್ದ ರಸ್ತೆ ಕಾಮಗಾರಿಯ ಜೆಲ್ಲಿ ಕಲ್ಲು ಹಾಗೂ ಮರಳನ್ನು ತಮ್ಮ ಸ್ವಂತ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ವಿಚಾರಿಸಲು ತೆರಳಿದಾಗ ಏಕವಚನದಲ್ಲಿ ಆದಿವಾಸಿಗಳನ್ನು ಗದರಿಸಿದ್ದಾರೆ ಎಂದು ಆರೋಪಿಸಿ ಆದಿವಾಸಿಗಳು ಬುಡಕಟ್ಟು ಕೃಷಿಕರ ಸಂಘದ ಮೂಲಕ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಗ್ರಾಮದಲ್ಲಿ ೭ಕ್ಕೂ ಅಧಿಕ ಆದಿವಾಸಿಗಳ ಹಾಡಿಗಳಿದ್ದು, ಕಳೆದ ಕೆಲ ದಿನಗಳ ಹಿಂದೆ ಗಿರಿಜನ ಕಲ್ಯಾಣಾಭಿವೃದ್ದಿ ಇಲಾಖೆ ವತಿಯಿಂದ ಗಿರಿಜನರಿಗಾಗಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ಕಾಮಗಾರಿಗೆ ಗುತ್ತಿಗೆದಾರರು, ಮರಳು, ಜೆಲ್ಲಿಕಲ್ಲನ್ನು ರಸ್ತೆಯ ಬದಿಯಲ್ಲಿ ಶೇಖರಣೆ ಮಾಡಿದ್ದರು. ಕೆಲಸ ಕಾಮಗಾರಿಗಳು ಒಂದಷ್ಟು ಮುಗಿದಿದ್ದವು. ಉಳಿದ ರಸ್ತೆ ಕಾಮಗಾರಿಗಳನ್ನು ಮಾಡಬೇಕಾಗಿತ್ತು. ಹೀಗಾಗಿ ರಸ್ತೆ ಬದಿಯಲ್ಲಿ ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿ ಇಡಲಾಗಿತ್ತು.

ಈ ಕಾಮಗಾರಿ ಸಾಮಗ್ರಿಯನ್ನು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಟ್ರಾö್ಯಕ್ಟರ್‌ನಲ್ಲಿ ತುಂಬಿಸಿ ಕೊಂಡು ತೆರಳಿದ್ದಾರೆ ಹಾಗೂ ಸಾಮಗ್ರಿಯನ್ನು ತಮ್ಮ ಮನೆಯಲ್ಲಿ ಶೇಖರಣೆ

(ಮೊದಲ ಪುಟದಿಂದ) ಮಾಡಿದ್ದಾರೆಂದು ಪ್ರತಿಭಟನೆಕಾರರ ಗಂಭೀರ ಆರೋಪವಾಗಿದೆ.

ಈ ವಿಷಯವನ್ನು ಆದಿವಾಸಿಗಳು ಪ್ರಶ್ನಿಸಿದಾಗ ಅಧ್ಯಕ್ಷರು ಮುಖಂಡರನ್ನು ಏಕ ವಚನದಲ್ಲಿ ಗದರಿಸಿ ತಮ್ಮ ಮೇಲೆ ಮಾನನಷ್ಟ ಮೊಖದ್ದಮೆ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಗಿರಿಜನ ಇಲಾಖೆಯಿಂದ ನಡೆಯುವ ಕಾಮಗಾರಿಗೆ ಪಂಚಾಯಿತಿ ಅಧ್ಯಕ್ಷರ ಹಸ್ತಕ್ಷೇಪ ನಡೆಯುತ್ತಿದೆ. ಪಂಚಾಯಿತಿ ವತಿಯಿಂದ ಹಾಡಿಗಳಿಗೆ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲ; ಪಂಚಾಯಿತಿ ಅಧ್ಯಕ್ಷರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಸದಸ್ಯರ ವಿಶ್ವಾಸವನ್ನು ಪಡೆಯುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಆದಿವಾಸಿ ಮುಖಂಡ ಪಿ.ಕೆ.ಸಿದ್ದಪ್ಪ ಮುಂದಾಳತ್ವದಲ್ಲಿ ನೂರಾರು ಮಂದಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಎದುರು ಜಮಾವಣೆಗೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಸ್ಥಳಕ್ಕೆ ಅಧ್ಯಕ್ಷರು ಆಗಮಿಸುವಂತೆ ಪಟ್ಟು ಹಿಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಅಧ್ಯಕ್ಷರು ಕಾರ್ಯನಿಮಿತ್ತ ನ್ಯಾಯಾಲಯಕ್ಕೆ ತೆರಳಿದ್ದಾರೆ ಎಂದು ಸಮಜಾಯಿಷಿಕೆ ನೀಡಿದರು. ಆದರೆ ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ. ಸ್ಥಳದಲ್ಲಿ ಮೊಕ್ಕಾಂ ಹೂಡುವುದಾಗಿ ಎಚ್ಚರಿಸಿದರು.

ಪಂಚಾಯಿತಿ ಆಡಳಿತ ವ್ಯವಸ್ಥೆಯ ವಿರುದ್ಧ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ರಾಮು, ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ಮಣಿಕುಂಞ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಹೆಚ್.ಮನು ತಮ್ಮ ಆಕ್ರೋಶವನ್ನು ಹೊರಹಾಕಿದರು. ಪಂಚಾಯಿತಿ ಅಧ್ಯಕ್ಷರು ಅಭಿವೃದ್ಧಿ ಕೆಲಸಕ್ಕೆ ರಾಜಕೀಯವನ್ನು ಬೆರೆಸದೆ ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣಬೇಕು. ಹಾಡಿ ಅಭಿವೃದ್ದಿಗೆ ಶ್ರಮಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಆದಿವಾಸಿ ಮುಖಂಡರುಗಳಾದ ವೈ.ಪಿ. ತಮ್ಮಯ್ಯ, ಪಿ.ಸಿ.ರಾಮು, ಪಿ.ಎಸ್.ಅಣ್ಣಪ್ಪ, ವೈ.ಸಿ.ಜಾನಕಿ, ವಿ.ಸಿ.ದೇವರಾಜ್, ಪಿ.ಬಿ. ಈಶ್ವರಿ, ವೈ.ಪಿ.ರವಿನಾ ಮುಂತಾದವರು ಪಾಲ್ಗೊಂಡಿದ್ದರು.-ಹೆಚ್.ಕೆ. ಜಗದೀಶ್