(ವರದಿ : ಪ್ರಜ್ವಲ್ ಜಿ.ಆರ್.)

ಮಡಿಕೇರಿ, ಮೇ ೩೦ : ಕಿರಿದಾದ, ಕ್ಲಿಷ್ಟಕರವಾದ ರಸ್ತೆಯಲ್ಲಿ ದೂರದ ಊರುಗಳಿಂದ ಆಗಮಿಸುತ್ತಿದ್ದ ಪ್ರವಾಸಿಗರನ್ನು ಸಾಲು-ಸಾಲಿನಲ್ಲಿ ಪ್ರಕೃತಿ ರಮಣೀಯ ಮಾಂದಲಪಟ್ಟಿಗೆ ಸಾಹಸಮಯವಾಗಿ ಕರೆದೊಯ್ಯುತ್ತಿದ್ದ ಜೀಪು ಚಾಲಕರ ಸ್ಥಿತಿ ಇದೀಗ ಅತಂತ್ರವಾಗಿದೆ. ಮಾಂದಲಪಟ್ಟಿ ನೋಡಲೆಂದೇ ಕೆಲವು ಮಂದಿ ಜಿಲ್ಲೆಗೆ ಆಗಮಿಸುತ್ತಿದ್ದರು. ಕೆ.ನಿಡುಗಣೆ ಪಂಚಾಯಿತಿಯ ಅಬ್ಬಿ ಜಲಪಾತ - ಮಾಂದಲಪಟ್ಟಿ ಜಂಕ್ಷನ್ (ನಂದಿ-ಮೊಟ್ಟೆ) ಬಳಿ ಕಿಕ್ಕಿರಿದು ಸೇರುತ್ತಿದ್ದ ಜೀಪುಗಳು, ಅಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ತಡೆದು ತಮ್ಮ ತಮ್ಮ ವಾಹನಗಳಲ್ಲಿ ಕೂರಿಸಿ ಮಾಂದಲಪಟ್ಟಿ ತಲುಪಿಸುತ್ತಿದ್ದು, ಆ ಜೀಪುಗಳ ಚಾಲಕರು, ಇದೀಗ ಅಸಹಾಯ ಕರಾಗಿದ್ದು, ನಂದಿ ಮೊಟ್ಟೆಯು ಖಾಲಿ ಬಿದ್ದಿದೆ.

ಕೊಡಗು ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣಗಳಾಗಿರುವ ಮಡಿಕೇರಿಯ ಹೊರವಲಯದಲ್ಲಿನ ಮಾಂದಲಪಟ್ಟಿ ಹಾಗೂ ಅಬ್ಬಿ ಜಲಪಾತಕ್ಕೆ ಪ್ರತಿನಿತ್ಯ ಜೀಪುಗಳಲ್ಲಿ ಲೋಡುಗಟ್ಟಲೆ ಪ್ರವಾಸಿಗರನ್ನು ನೂರಾರು ಜೀಪು ಚಾಲಕರು ಕರೆದೊಯ್ಯುತ್ತಿದ್ದರು. ಇಷ್ಟು ವರ್ಷಗಳ ಕಾಲ ಬಿಳಿ ಫಲಕದ ವಾಹನಗಳಲ್ಲಿಯೇ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಚಾಲಕರಿಗೆ ಇದೀಗ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಕಾನೂನಿನ ಬಿಸಿ ಮುಟ್ಟಿದ್ದು, ಪ್ರವಾಸಿಗರನ್ನು ಸಾರಿಗೆ ಇಲಾಖೆಯಡಿಯಲ್ಲಿ ಹಳದಿ ಫಲಕದಡಿ ನೋಂದಣಿಯಾಗಿರುವ ವಾಹನಗಳಲ್ಲಿ ಮಾತ್ರ ಕರೆದೊಯ್ಯುವಂತೆ ನಿರ್ದೇಶಿಸಲಾಗಿದೆ. ತಾ.೨೯ ರಂದು ನಡೆದ ಪ್ರವಾಸೋದ್ಯಮ ಸಂಬAಧಿತ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಇದರೊಂದಿಗೆ ಬಿಳಿ ಬೋರ್ಡ್ ವಾಹನಗಳನ್ನು ಹಳದಿ ಬೋರ್ಡ್ ಆಗಿ ಪರಿವರ್ತಿಸಿ ಅಧಿಕೃತ ನೋಂದಣಿ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಜಿಲ್ಲಾಧಿಕಾರಿ ಅವರು ಸಂಚಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಬ್ಬಿ ಜಲಪಾತ, ಮಾಂದಲಪಟ್ಟಿ ರಸ್ತೆ ಛೇದಕದಲ್ಲಿ ಸುಮಾರು ೧೦೦, ಮಡಿಕೇರಿ ಸರಕಾರಿ ಬಸ್ ನಿಲ್ದಾಣದ ಎದುರಿನ ಸುಮಾರು ೨೫, ಕಾಲೂರು ಬಳಿಯ ಸುಮಾರು ೩೦ ಹಾಗೂ ಮಾಂದಲಪಟ್ಟಿ ಪ್ರವೇಶದ್ವಾರದಲ್ಲಿನ ಸುಮಾರು ೩೦ ಜೀಪುಗಳು ಕಳೆದ ವಾರದಿಂದ ಬಾಡಿಗೆ ಇಲ್ಲದೆ ಚಾಲಕರ ಬದುಕು ಅತಂತ್ರವಾಗಿದೆ. ಇವೆಲ್ಲವೂ ಬಿಳಿ ಫಲಕ ಹೊಂದಿರುವ ವಾಹನಗಳೇ ಆಗಿದ್ದು, ಕಾನೂನಿನ ಆಧಾರದಲ್ಲಿ ಪ್ರವಾಸಿಗರನ್ನು ಕರೆದೊಯ್ಯಲು ಅಸಾಧ್ಯವಾಗಿದೆ. ಈ ಕಾರಣದಿಂದಾಗಿ ಇದೀಗ ಪ್ರವಾಸಿಗರು ತಮ್ಮ-ತಮ್ಮ ಸ್ವಂತ ವಾಹನಗಳಲ್ಲಿಯೇ

(ಮೊದಲ ಪುಟದಿಂದ) ಅಬ್ಬಿ ಜಲಪಾತ ಹಾಗೂ ಕಿರಿದಾದ, ಕ್ಲಿಷ್ಟಕರವಾದ ಮಾಂದಲಪಟ್ಟಿ ರಸ್ತೆವರೆಗೂ ಸಾಹಸದಿಂದ ತೆರಳುತ್ತಿದ್ದಾರೆ.

ಪ್ರವಾಸಿಗರ ಮೇಲೆ ಹಲ್ಲೆ ಬಳಿಕ ಕಾರ್ಯಾಚರಣೆ ಚುರುಕು

ಇಷ್ಟು ವರ್ಷಗಳ ಕಾಲ ಪ್ರವಾಸಿಗರನ್ನು ಬಿಳಿ ಫಲಕದ ವಾಹನಗಳಲ್ಲಿಯೇ ಕೊಂಡೊಯ್ಯುತ್ತಿದ್ದ ಜೀಪು ಚಾಲಕರಿಗೆ, ಕಳೆದ ವಾರ ಪ್ರವಾಸಿಗÀರೋರ್ವರು ವಾಹನ ನಿಲುಗಡೆ ಶುಲ್ಕ ವಿಚಾರದಲ್ಲಿ ಸ್ಥಳೀಯರೊಂದಿಗೆ ಜಗಳವೆತ್ತಿ ಬಳಿಕ ಪೆಟ್ಟು ತಿಂದ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಇಲ್ಲಿಯ ತನಕ ನಿಷ್ಕಿçಯವಾಗಿದ್ದ ಪರಿಸ್ಥಿತಿ ಮಾಯವಾಗಿ ಕಾನೂನಿನ ಚಾಟಿ ಬೀಸಿದಂತಾಗಿದೆ. ವೀಡಿಯೋ ವೈರಲ್ ಆದ ಮಾರನೆ ದಿನ ಆರೋಪಿಗಳನ್ನು ಪತ್ತೆ ಹಚ್ಚಿ ಹಿಡಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಂತರದ ೨,೩ ದಿನಗಳ ಕಾಲ ಈ ವ್ಯಾಪ್ತಿಯಲ್ಲಿ ಬಿಳಿ ಫಲಕ ವಾಹನಗಳು ಪ್ರವಾಸಿಗರನ್ನು ಕೊಂಡೊಯ್ದಲ್ಲಿ ಚಾಲಕರಿಗೆ ದಂಡ ವಿಧಿಸುವ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಇದೀಗ ಇಂತಹ ವಾಹನಗಳ ಓಡಾಟ ಇಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ.