ಮಡಿಕೇರಿ, ಮೇ ೩೦: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮಿಷನ್ ಸಮರ್ಪಕವಾಗಿ ಹಾಗೂ ವೈಜ್ಞಾನಿಕವಾಗಿ ಅನುಷ್ಠಾನಗೊಳ್ಳಬೇಕು. ಭೌಗೋಳಿಕವಾಗಿ ಕೊಡಗು ಭಿನ್ನ ಜಿಲ್ಲೆಯಾಗಿರುವ ಕಾರಣದಿಂದ ನೀರು ಸಂಪರ್ಕ ನೀಡಲು ಸ್ವಲ್ಪ ಸಮಸ್ಯೆಯಾಗುತ್ತದೆ. ಇವೆಲ್ಲವನ್ನು ಮನಗಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಂದಾಜು ೨೫ ಸಾವಿರ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಬಾಕಿ ಉಳಿದಿದೆ. ಬಹುತೇಕ ಎಲ್ಲ ಕಡೆಗಳಲ್ಲಿಯೂ ಯೋಜನೆ ಅನುಷ್ಠಾನವಾಗಿದೆ ಎಂದರು.
ಈ ಸಂಬAಧ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ಡಾ. ಮಂಥರ್ ಗೌಡ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ತು ಸದಸ್ಯ ಎಸ್.ಎಲ್. ಬೋಜೇಗೌಡ ಮಾತನಾಡಿ, ಉತ್ತಮ ಯೋಜನೆ ಜಿಲ್ಲೆಯಲ್ಲಿ ಹಳ್ಳ ಹಿಡಿಯುತ್ತಿದೆ. ಜಲಜೀವನ್ ಮಿಷನ್ ಅಡಿಯಲ್ಲಿ ಕೈಗೊಂಡ ಕೆಲಸಗಳು ವೈಜ್ಞಾನಿಕವಾಗಿ ನಡೆದಿಲ್ಲ. ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಗುಡ್ಡಗಾಡು ಪ್ರದೇಶವಾಗಿರುವ ಕಾರಣ ಕೆಲವೊಂದು ತಾಂತ್ರಿಕ ಸಮಸ್ಯೆಗಳಿವೆ. ಇವೆಲ್ಲವನ್ನು ಪರಿಗಣಿಸಿ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಕಾರ್ಯೋನ್ಮುಖಗೊಳ್ಳಬೇಕು. ನೀರಿನ ಮೂಲ ಹೆಚ್ಚಳಕ್ಕೆ ಪ್ರಯತ್ನಿಸಬೇಕು. ಬೇಸಿಗೆ ಕಾಲದಲ್ಲಿಯೇ ಸರಿಯಾಗಿ ನೀರು ಲಭ್ಯವಾಗಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಬಹುಜಲಮೂಲಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ನೀರಾವರಿ ಇಲಾಖೆಯ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ೧.೩೬ ಲಕ್ಷ ಮನೆಗಳಿಗೆ ನಲ್ಲಿ ನೀರು ಒದಗಿಸುವ ಪೈಕಿ, ೧.೧೪ ಲಕ್ಷ ಮನೆಗಳಿಗೆ ಈಗಾಗಲೇ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ಒಟ್ಟು ರೂ. ೩೫೮ ಕೋಟಿಯ ಲಭ್ಯತೆ ಇದೆ. ೨೦೨೪ರೊಳಗೆ
(ಮೊದಲ ಪುಟದಿಂದ) ಎಲ್ಲಾ ಮನೆಗಳಿಗೂ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕುಶಾಲನಗರ-ಮೈಸೂರು ೪ ಪಥ ರಸ್ತೆ ಯೋಜನೆ ಒಂದು ತಿಂಗಳಿನೊಳಗೆ ಕಾರ್ಯಗತ ಗೊಳ್ಳುತ್ತದೆ. ಈಗಾಗಲೇ ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ೪,೧೩೦ ಕೋಟಿ ರೂ. ವೆಚ್ಚದಲ್ಲಿ ೯೩ ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಗುಡ್ಡೆಹೊಸೂರು-ಸಂಪಾಜೆ ರಸ್ತೆ ೪ ಪಥ ಮಾಡುವುದು ಸ್ವಲ್ಪ ಸಮಸ್ಯೆಯಾಗಿದೆ. ಈ ಹಿನ್ನೆಲೆ ಈ ರಸ್ತೆಯನ್ನು ಬೇರೆ ಯೋಜನೆಗಳಡಿ ಅಭಿವೃದ್ಧಿ ಮಾಡಲಾಗುತ್ತದೆ. ಜೊತೆಗೆ ಕುಶಾಲನಗರ ಬಳಿಯ ತಾವರೆಕೆರೆ ರಸ್ತೆ ದುರಸ್ತಿಗೆ ಯೋಜನೆ ತಯಾರಿದೆ ಎಂದು ಸಂಸದರು ಹೇಳಿದರು.
ತಡೆಗೋಡೆ ಕಾಮಗಾರಿ ವೈಜ್ಞಾನಿಕವಾಗಿರಲಿ
ಕಳೆದ ಮಳೆಗಾಲದಲ್ಲಿ ಮಣ್ಣಿನೊಳಗೆ ನೀರು ತುಂಬಿದ ಪರಿಣಾಮ ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಿಸಿದ ಜರ್ಮನ್ ತಂತ್ರಜ್ಞಾನದ ತಡೆಗೋಡೆಯಲ್ಲಿ ಬಿರುಕು ಹಾಗೂ ಉಬ್ಬು ಕಾಣಿಸಿಕೊಂಡಿದೆ. ಇದೀಗ ದುರಸ್ತಿಪಡಿಸುವ ಕೆಲಸ ನಡೆಯುತ್ತಿದ್ದು, ವೈಜ್ಞಾನಿಕವಾಗಿ ಕೆಲಸ ನಡೆಯಬೇಕು. ಉನ್ನತ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವಸ್ತುಸ್ಥಿತಿ ಅರಿತು ಕೆಲಸ ನಿರ್ವಹಿಸಬೇಕೆಂದು ಸಂಸದರು ಸೂಚಿಸಿದರು.
ಈ ಸಂಬAಧ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿ ಸಿದ್ದೇಗೌಡ, ಈಗಾಗಲೇ ‘ಪ್ಯಾನಲ್’ ತೆರವು ಮಾಡಿ ಅಡಿಪಾಯದ ಕೆಲಸ ನಡೆಯುತ್ತಿದೆ. ಸಂಸ್ಥೆ ವಿನ್ಯಾಸವನ್ನು ಬದಲಾಯಿಸುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಪರಿಷತ್ತು ಸದಸ್ಯ ಎಸ್.ಎಲ್. ಬೋಜೇಗೌಡ, ಕೋಟ್ಯಂತರ ವೆಚ್ಚದ ಯೋಜನೆಯನ್ನು ಸಮರ್ಪಕವಾಗಿ ಮಾಡದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಭಾಗಮಂಡಲ ಮೇಲ್ಸೇತುವೆ ಪೂರ್ಣಗೊಳಿಸಿ
ಭಾಗಮಂಡಲದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯನ್ನು ಶೀಘ್ರ ಪೂರ್ಣಗೊಳಿಸಿ. ಮಳೆಗಾಲ ದೊತ್ತಿಗೆ ಕಾಲ್ನಡಿಗೆಗಾದರು ಮುಕ್ತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಪ್ರತಾಪ್ ಸಿಂಹ ನಿರ್ದೇಶಿಸಿದರು.
ಪ್ರವಾಹ ಪರಿಸ್ಥಿತಿ ಎದುರಾದರೆ ಸಂಪರ್ಕ ಕಡಿತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೆಲಸ ತ್ವರಿತಗತಿಯಲ್ಲಿ ನಡೆಯಬೇಕು ಎಂದು ತಿಳಿಸಿದ ಸಂದರ್ಭ ನೀರಾವರಿ ಇಲಾಖೆ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ೨ ತಿಂಗಳಿನೊಳಗೆ ಕಾಮಗಾರಿ ಮುಗಿಯುತ್ತದೆ ಎಂದು ಉತ್ತರಿಸಿದರು.
ಹೆದ್ದಾರಿ, ಲೋಕೋಪಯೋಗಿ ಸೇರಿದಂತೆ ಕೇಂದ್ರಪುರಸ್ಕೃತ ಯೋಜನೆಗಳಡಿ ಬರುವ ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಬೇಕೆಂದು ಸಂಸದರು ಆದೇಶಿಸಿದರು.
ನಿವೇಶನ ಕಲ್ಪಿಸಲು ಜಾಗ ಗುರುತಿಸಿ
ಜಿಲ್ಲೆಯಲ್ಲಿರುವ ವಸತಿ ರಹಿತರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಜಾಗ ಗುರುತಿಸಿ ಎಂದು ಸಂಸದರು ಜಿಲ್ಲಾಧಿಕಾರಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಒತ್ತುವರಿಯಾದ ಸರಕಾರಿ ಜಾಗವನ್ನು ಸ್ವಾಧೀನ Àಪಡಿಸಿಕೊಂಡು ವಸತಿ ಯೋಜನೆಗೆ ಮೀಸಲಿಡಲು ಕ್ರಮವಹಿಸಲಾಗಿದೆ. ಗ್ರಾ.ಪಂ. ಮಟ್ಟದಲ್ಲಿ ಆಯ್ಕೆಯಾದ ನಿವೇಶನ ರಹಿತ ಫಲಾನುಭವಿಗಳಿಗೆ ನೀಡಲಾಗುವುದು ಎಂದರು.
ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಲೈನ್‌ಮನೆ ನಿವಾಸಿ ಗಳನ್ನು ಗಣನೆಗೆ ತೆಗೆದುಕೊಂಡು ವಸತಿ ಯೋಜನೆ ತಯಾರಿಸಬೇಕು. ಅವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳಾಗಬೇಕು ಎಂದು ಸಭೆಯ ಗಮನಸೆಳೆದರು.
ಪ್ರತಾಪ್ ಸಿಂಹ ಮಾತನಾಡಿ, ಲೈನ್‌ಮನೆ ನಿವಾಸಿಗಳಿಗೆ ವಸತಿ ಕಲ್ಪಿಸುವುದು ಆದ್ಯತೆಯಾಗಬೇಕು. ವೈಜ್ಞಾನಿಕವಾಗಿ ಲೇಔಟ್ ರೀತಿಯಲ್ಲಿ ಮನೆ ನಿರ್ಮಿಸಲು ಯೋಜನೆ ತಯಾರಿಸಿ ಎಂದರು.
ಡಾ.ಮಂಥರ್ ಗೌಡ ಮಾತನಾಡಿ, ಮನೆ ನಿರ್ಮಾಣ ವೈಜ್ಞಾನಿಕವಾಗಿರಬೇಕು. ಜನರಿಗೆ ಅಗತ್ಯ ಸೇವೆಗಳು ದೊರೆಯುವ ಜಾಗದಲ್ಲಿ ಮನೆಗಳ ನಿರ್ಮಾಣ ವಾಗಬೇಕು ಎಂದು ಸಲಹೆ ನೀಡಿದ ಅವರು, ಮಾದಾಪುರ ಬಳಿಯ ಜಂಬೂರಿನಲ್ಲಿ ಈಗಾಗಲೇ ಪ್ರಾಕೃತಿಕ ವಿಕೋಪದಡಿ ನೀಡಲಾಗಿರುವ ಬಡಾವಣೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿದರು.
ಜಂಬೂರಿನಲ್ಲಿ ಇನ್ಫೋಸಿಸ್ ವತಿಯಿಂದ ನಿರ್ಮಿಸುತ್ತಿರುವ ಮನೆಗಳು ಶೀಘ್ರವಾಗಿ ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯೊAದಿಗೆ ಸಮಾಲೋಚಿಸುವಂತೆ ಪ್ರತಾಪ್ ಸಿಂಹ ನಿರ್ದೇಶಿಸಿದರು.
ಶಾಸಕ ಎ.ಎಸ್.ಪೊನ್ನಣ್ಣ ಅವರು ನಾಗರಹೊಳೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ತಾತ್ಕಾಲಿಕ ಅಂಗನವಾಡಿ ನಿರ್ಮಾಣ ಮಾಡಿ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಸುರಕ್ಷತೆ ಆದ್ಯತೆಯಾಗಲಿ
ರಸ್ತೆಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಆರ್.ಟಿ.ಓ. ಕ್ರಮವಹಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ತೂಕ ಮೀರಿ ಸಾಗಾಣೆ ಮಾಡುವ ವಾಹನಗಳ ಮೇಲೆ ಕಣ್ಣಿಡಬೇಕು. ಗಡಿಗಳಲ್ಲಿ ನಿರಂತರ ತಪಾಸಣೆ ನಡೆಯಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೂಡ ಮರಳು, ಕಲ್ಲು ಸಾಗಿಸುವ ವಾಹನಗಳ ತಪಾಸಣೆಗೆ ಮುಂದಾಗಬೇಕು. ಎಂ. ಸ್ಯಾಂಡ್ ಹೊತ್ತು ಸಾಗುವ ವಾಹನಗಳಿಂದ ರಸ್ತೆಗೆ ನೀರು ಬರುತ್ತದೆ. ಇದರಿಂದ ರಸ್ತೆ ಹಾಳಾಗುತ್ತದೆ ಈ ಬಗ್ಗೆಯೂ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಟಿಂಬರ್ ಲಾರಿಯ ಮೇಲೆ ನಿಗಾ ಇರಬೇಕು. ‘ಪರ್ಮಿಟ್’ ಇಲ್ಲದ ವಾಹನಗಳ ಮೇಲೆ ಕ್ರಮವಹಿಸಬೇಕು. ವಸತಿ ಯೋಜನೆಗಳಿಗೆ ಯಾವುದೇ ತೊಂದರೆಯಾಗದAತೆ ಗಮನಹರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆಕಾಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಅರಣ್ಯಾಧಿಕಾರಿ ಶಿವರಾಮ್ ಹಾಜರಿದ್ದರು.